ಮುಂಡಗೋಡ: ಮುಂಬೈ ಪೊಲೀಸರ ಹೆಸರಿನಲ್ಲಿ ಬಂದ ವಾಟ್ಸಪ್ ಕರೆಗೆ ಬೆದರಿ, ಇಲ್ಲಿನ ಟಿಬೆಟಿಯನ್ ಕಾಲೋನಿಯ ನಿವೃತ್ತ ಶಿಕ್ಷಕರೊಬ್ಬರು ಬರೋಬ್ಬರಿ 1.61 ಕೋಟಿ ರೂಪಾಯಿಯನ್ನು ಕಳೆದುಕೊಂಡು ಸೈಬರ್ ವಂಚಕರ ಜಾಲಕ್ಕೆ ಸಿಲುಕಿದ ಘಟನೆ ಬೆಳಕಿಗೆ ಬಂದಿದೆ.
ಮುಂಡಗೋಡಿನ ಕ್ಯಾಂಪ್ ನಂಬರ್ 8ರಲ್ಲಿ ವಾಸವಿರುವ ಪಾಲ್ಡೆನ್ ಲೋಸಾಂಗ್ ಚೋಧಾಕ್ ( Palden S/o Losang Chodhak (72 ವರ್ಷ) ಎಂಬುವವರೇ ಈ ವಂಚನೆಗೆ ಒಳಗಾದವರು. ಇವರು ಕೇಂದ್ರ (Central School) ಶಾಲೆಯಲ್ಲಿ ಶಿಕ್ಷಕರಾಗಿ ನಿವೃತ್ತರಾಗಿದ್ದು, ವಂಚಕರು ಇವರನ್ನು ‘ಡಿಜಿಟಲ್ ಅರೆಸ್ಟ್’ ಮಾಡುವ ಮೂಲಕ ಹಂತ ಹಂತವಾಗಿ ಹಣವನ್ನು ದೋಚಿದ್ದಾರೆ.
ಘಟನೆಯ ವಿವರ: ಕಳೆದ ನವೆಂಬರ್ 29, 2025 ರಂದು ಸಂತ್ರಸ್ತ ಪಲ್ಡೆನ್ ಅವರಿಗೆ ವಾಟ್ಸಪ್ ಕರೆ ಮಾಡಿದ ವ್ಯಕ್ತಿಯೊಬ್ಬ, ತಾನು ಮಹಾರಾಷ್ಟ್ರ ರಾಜ್ಯದ ಕೋಲಬಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎಂದು ಪರಿಚಯಿಸಿಕೊಂಡಿದ್ದಾನೆ. ಮುಂಬೈನಲ್ಲಿ ಓ.ಎಮ್ ಅಬ್ದುಲಸಲಾಂ ಎಂಬ ಉಗ್ರವಾದಿ ನಾಯಕನನ್ನು ಬಂಧಿಸಲಾಗಿದ್ದು, ಆತನ ಬಳಿ ಸಿಕ್ಕ ನೂರಾರು ಎ.ಟಿ.ಎಂ ಕಾರ್ಡ್ಗಳಲ್ಲಿ ಪಲ್ಡೆನ್ ಅವರ ಹೆಸರಿನ ಕೆನರಾ ಬ್ಯಾಂಕ್ ಕಾರ್ಡ್ ಕೂಡ ಇದೆ ಎಂದು ನಂಬಿಸಿದ್ದಾನೆ.
ಅಷ್ಟೇ ಅಲ್ಲದೆ, ನಿಮ್ಮ ಬ್ಯಾಂಕ್ ಖಾತೆಯ ಮೂಲಕ ಕೋಟ್ಯಂತರ ರೂಪಾಯಿ ಮನಿ ಲಾಂಡ್ರಿಂಗ್ ನಡೆದಿದ್ದು, ನಿಮ್ಮ ಮೇಲೆ ಗಂಭೀರ ಪ್ರಕರಣ ದಾಖಲಾಗಿದೆ ಎಂದು ಹೆದರಿಸಿದ್ದಾನೆ. ವಂಚಕನು ಪೊಲೀಸ್ ಸಮವಸ್ತ್ರ ಧರಿಸಿ ವಿಡಿಯೋ ಕರೆ ಮಾಡಿದ್ದಲ್ಲದೆ, ಪೊಲೀಸ್ ಠಾಣೆಯಂತಹ ವಾತಾವರಣವನ್ನು ತೋರಿಸಿ ಸಂತ್ರಸ್ತರನ್ನು ಪೂರ್ತಿಯಾಗಿ ನಂಬಿಸಿದ್ದಾನೆ.
ಪಲ್ಡೆನ್ ಅವರ ಹೆಸರಿನಲ್ಲಿ ಕೋಟಿಗಟ್ಟಲೆ ಹಣ ವರ್ಗಾವಣೆಯಾಗಿರುವ ನಕಲಿ ಬ್ಯಾಂಕ್ ಸ್ಟೇಟ್ಮೆಂಟ್ ಕೂಡ ಕಳುಹಿಸಿ, ಅರೆಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಪಲ್ಡೆನ್ ಅವರು ಹೇಳಿದಾಗ, ತನಿಖೆಯ ನೆಪದಲ್ಲಿ ನಿಮ್ಮ ಖಾತೆಯಲ್ಲಿರುವ ಹಣವನ್ನು ‘ನ್ಯಾಷನಲ್ ಫಂಡ್’ಗೆ ಜಮಾ ಮಾಡಬೇಕು, ತನಿಖೆ ಮುಗಿದ ನಂತರ ಹಣ ವಾಪಸ್ ನೀಡಲಾಗುವುದು ಎಂದು ವಂಚಕರು ನಂಬಿಸಿದ್ದಾರೆ.
ಇ ಸುದ್ದಿ ಓದಿದ್ದೀರಾ? ಮುಂಡಗೋಡ | ಅಕ್ರಮ ಇಟ್ಟಿಗೆ ಭಟ್ಟಿಗಳ ವಿರುದ್ಧ ವರದಿಯಾದರೂ ಅಲುಗಾಡದ ಆಡಳಿತ: ಅಧಿಕಾರಿಗಳ ‘ಮೌನ’ಕ್ಕೆ ಕಾರಣವೇನು?
ವಿಷಯವನ್ನು ಯಾರೊಂದಿಗೂ ಹಂಚಿಕೊಳ್ಳದಂತೆ ಮತ್ತು ಪ್ರತಿ ಎರಡು ಗಂಟೆಗೊಮ್ಮೆ ವಾಟ್ಸಪ್ ಮೂಲಕ ವರದಿ ನೀಡುವಂತೆ (Good Morning, Good Night ಸಂದೇಶಗಳು) ಆದೇಶಿಸಿ ಅವರನ್ನು ಮಾನಸಿಕವಾಗಿ ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ.
ಈ ಸುಳ್ಳು ಬೆದರಿಕೆಗೆ ಹೆದರಿದ ಪಲ್ಡೆನ್ ಅವರು ತಮ್ಮ ಕೆನರಾ ಬ್ಯಾಂಕ್, ಎಸ್ಬಿಐ ಮತ್ತು ಕೆಡಿಸಿಸಿ ಬ್ಯಾಂಕ್ನಲ್ಲಿದ್ದ ಸ್ಥಿರ ಠೇವಣಿ (FD) ಹಣವನ್ನು ಬಿಡಿಸಿಕೊಂಡು ಹಾಗೂ ಪರಿಚಿತರಿಂದ ಸಾಲ ಪಡೆದು, ಡಿಸೆಂಬರ್ 3 ರಿಂದ ಡಿಸೆಂಬರ್ 11ರ ಅವಧಿಯಲ್ಲಿ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 1,61,00,047 ರೂಪಾಯಿಗಳನ್ನು ವರ್ಗಾಯಿಸಿದ್ದಾರೆ. ತದನಂತರ ತಾನು ವಂಚನೆಗೆ ಒಳಗಾಗಿರುವುದು ತಿಳಿದು ಬಂದಿದ್ದು, ಇದೀಗ ಕಾರವಾರ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.





