ಮುಂಡಗೋಡ: ಕ್ಷುಲ್ಲಕ ಕಾರಣಕ್ಕಾಗಿ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯೊಬ್ಬರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ ಘಟನೆ ತಾಲೂಕಿನ ತೆಗ್ಗಿನಕೊಪ್ಪ ಗ್ರಾಮದಲ್ಲಿ ನಡೆದಿದೆ.
ಘಟನೆಯ ವಿವರ: ತೆಗ್ಗಿನಕೊಪ್ಪ ಗ್ರಾಮದ ನಿವಾಸಿಯಾದ ರವಿ ತುಕಾರಾಮ ರಾಠೋಡ (41) ಎಂಬುವವರು ಮಾರ್ಚ್ 2ರಂದು ರಾತ್ರಿ ತಮ್ಮ ಹೊಲದ ಬೋರ್‌ವೆಲ್ ಪಂಪ್ ಬಂದ್ ಮಾಡಿ ಮನೆಗೆ ಮರಳುತ್ತಿದ್ದರು. ದಾರಿಯಲ್ಲಿ ಸುಭಾಷ ಜಾಧವ ಎಂಬುವವರ ಅಂಗಡಿಗೆ ತಂಬಾಕು ತೆಗೆದುಕೊಳ್ಳಲು ಹೋದಾಗ, ಅಲ್ಲಿ ಪರಿಚಯಸ್ಥನಾದ ಮುಂಡಗೋಡ ನಿವಾಸಿ ಜಿಲಾನಿ ಎಂಬಾತ ಸಿಕ್ಕಿದ್ದಾನೆ.
ರವಿ ಅವರು ಜಿಲಾನಿ ಬಳಿ ಕುಶಲೋಪರಿ ವಿಚಾರಿಸುತ್ತಿದ್ದಾಗ, ಅಲ್ಲಿಯೇ ಇದ್ದ ಹುಬ್ಬಳ್ಳಿ ನಿವಾಸಿ ಸಿರಾಜ ಎಂಬಾತನು “ನನ್ನನ್ನು ನೋಡಿ ಸುಮ್ಮನೆ ಹೋಗುತ್ತಿದ್ದೀಯಾ?” ಎಂದು ವಿನಾಕಾರಣ ಗಲಾಟೆ ತೆಗೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ರವಿ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಅಷ್ಟಕ್ಕೇ ನಿಲ್ಲದೆ ಸಿರಾಜ, ಜಿಲಾನಿ, ಅಲ್ತಾಫ ಮತ್ತು ಪ್ರೇಮಕುಮಾರ ಎಂಬ ನಾಲ್ವರು ಸೇರಿ ರವಿ ಅವರ ಜಾತಿಯನ್ನು ಹಿಡಿದು ಅವಮಾನಿಸಿ, ಕೆಳಗೆ ತಳ್ಳಿ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಸಿರಾಜ ಎಂಬಾತನು ಕಟ್ಟಿಗೆಯಿಂದ ರವಿ ಅವರ ಮೈ, ಕೈ ಮತ್ತು ತಲೆಗೆ ಹೊಡೆದಾಗ
ಈ ಸುದ್ದಿ ಓದಿದ್ದೀರಾ? ಹೊನ್ನಾವರ | ಬಂಗಾರಮಕ್ಕಿ ಆಂಜನೇಯನ ಸನ್ನಿಧಿಗೆ ಭೇಟಿ ನೀಡಿದ ಕೆ.ಎಲ್. ರಾಹುಲ್
ರವಿ ಅವರ ಕಿರುಚಾಟ ಕೇಳಿ ಸ್ಥಳೀಯರು ಅವರು ಬಂದು ಜಗಳ ಬಿಡಿಸಿದ್ದಾರೆ. ಹೋಗುವಾಗ ಆರೋಪಿಗಳು “ಇನ್ನೊಮ್ಮೆ ಸಿಕ್ಕರೆ ನಿನ್ನನ್ನು ಸಾಯಿಸುತ್ತೇವೆ” ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ರವಿ ರಾಠೋಡ ಅವರು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಆರೋಪಿಗಳ ವಿರುದ್ಧ ಬಿ.ಎನ್.ಎಸ್ (BNS) ಕಾಯ್ದೆಯ ವಿವಿಧ ಕಲಂಗಳು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ (SC/ST Act) ಪ್ರಕರಣ ದಾಖಲಿಸಿಕೊಂಡಿದ್ದಾರೆ.





