ಮುಂಡಗೋಡ: ಪಟ್ಟಣದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನ ಬಿಸಿಯೂಟ ಸೇವಿಸಿದ ಬಳಿಕ 26 ಮಕ್ಕಳು ವಾಂತಿ, ತಲೆಸುತ್ತು ಹಾಗೂ ಹೊಟ್ಟೆನೋವಿನಿಂದ ಅಸ್ವಸ್ಥಗೊಂಡು ಮುಂಡಗೋಡ ಸರ್ಕಾರಿ ತಾಲ್ಲೂಕು ಆಸ್ಪತ್ರೆಗೆ ದಾಖಲಾಗಿರುವ ಘಟನೆ ವರದಿಯಾಗಿದೆ. ಮಧ್ಯಾಹ್ನ ಊಟ ಮಾಡುವ ವೇಳೆ ಊಟದಲ್ಲಿ ಇಲಿ ಬಾಲ, ಹಾಗೂ ಇಲಿಯ ಹಿಕ್ಕಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ. ಈ ಕುರಿತು ಶಿಕ್ಷಕರಿಗೆ ಮಕ್ಕಳು ಮಾಹಿತಿ ನೀಡಿದರೂ, “ಏನೂ ಬಿದ್ದಿಲ್ಲ, ಏನೂ ಆಗಿಲ್ಲ, ಸುಮ್ಮನೆ ಊಟ ಮಾಡಿ” ಎಂದು ಹೇಳಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ಮಕ್ಕಳು ಹಾಗೂ ಪಾಲಕರು ಆರೋಪಿಸಿದ್ದಾರೆ.
ಆದರೆ, ಸ್ವಲ್ಪ ಹೊತ್ತು ಆದ ನಂತರ ವಿಧ್ಯಾರ್ಥಿಗಳಿಗೆ ಒಮ್ಮೆಗೆ ವಾಂತಿ, ತಲೆಸುತ್ತು ಹಾಗೂ ಹೊಟ್ಟೆನೋವು ತೀವ್ರಗೊಂಡು ಆರೋಗ್ಯ ಸಮಸ್ಯೆ ಗಂಭೀರವಾಗಿದೆ. ತಕ್ಷಣವೇ ಪಾಲಕರು ಶಾಲೆಗೆ ಬಂದು ಅಸ್ವಸ್ಥ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದ್ದು, ಕೆಲ ಮಕ್ಕಳ ಆರೋಗ್ಯ ಸ್ಥಿರವಾಗಿದ್ದರೂ ಮೇಲ್ವಿಚಾರಣೆಯಲ್ಲಿಡಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಅಡುಗೆ ಕೋಣೆಯ ಪರಿಸ್ಥಿತಿ: ಘಟನೆ ಬಳಿಕ ಶಾಲೆಯ ಅಡುಗೆ ಕೋಣೆಗೆ ಭೇಟಿ ನೀಡಿ ವಾಸ್ತವ ಪರಿಶೀಲನೆ ನಡೆಸಿದಾಗ ಗಂಭೀರ ಸ್ವಚ್ಛತಾ ಸಮಸ್ಯೆಗಳು ಕಂಡುಬಂದಿವೆ. ಅಡುಗೆ ಕೋಣೆಯ ಹಿಂಭಾಗದಲ್ಲಿ ಗಟಾರದ ನೀರು ನಿಂತು ದುರ್ನಾತ ಬರುತ್ತಿದ್ದು, ಸುತ್ತಮುತ್ತ ಮಕ್ಕಳು ಮೂತ್ರ ವಿಸರ್ಜನೆ ಮಾಡುತ್ತಿರುವುದು ಕಂಡುಬಂದಿದೆ. 600ಕ್ಕೂ ಅಧಿಕ ವಿದ್ಯಾರ್ಥಿಗಳು ಕಲಿಯುವ ಶಾಲೆಯಲ್ಲಿ ಕೇವಲ 6 ಶೌಚಾಲಯಗಳಿದ್ದು, ಶೌಚ ವ್ಯವಸ್ಥೆ ಕೊರತೆಯಿಂದ ಅಡುಗೆ ಕೋಣೆ ಸಮೀಪವೇ ಅನೈರ್ಮಲ್ಯ ಸೃಷ್ಟಿಯಾಗಿದೆ. ಅಡುಗೆ ಕೋಣೆಯ ಬಾಗಿಲಿಗೆ ಹಂದಿಮರಿ ಒಳಗೆ ಹೋಗುವಷ್ಟು ದೊಡ್ಡದಾದ ಕಿಂಡಿ ಇದ್ದರೂ ಯಾವುದೇ ದುರಸ್ತಿ ಮಾಡಿಲ್ಲ ಎಂದು ಪಾಲಕರು ಬೇಸರ ವ್ಯಕ್ತಪಡಿಸಿದ್ದಾರೆ.

ಇಷ್ಟೆಲ್ಲಾ ಅವ್ಯವಸ್ಥೆ ಇದ್ದರೂ ಶಾಲೆಯ ಮುಖ್ಯೋಪಾಧ್ಯಾಯರು ಅಥವಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಶಾಲೆ ತಾಲ್ಲೂಕಿನ ‘ಮಾದರಿ ಶಾಲೆ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಪಕ್ಕದಲ್ಲೇ ಕ್ಷೇತ್ರ ಶಿಕ್ಷಣಾಧಿಕಾರಿ (BEO) ಕಚೇರಿ ಇದ್ದರೂ ಅಧಿಕಾರಿಗಳ ನಿರ್ಲಕ್ಷ್ಯ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | ಅಕ್ರಮವಾಗಿ ಮದ್ಯ ಮಾರಾಟ ಹೆಚ್ಚಳ: ಅಬಕಾರಿ ಇಲಾಖೆಯ ನಿರ್ಲಕ್ಷ್ಯಕ್ಕೆ ಬಡ ಕುಟುಂಬಗಳು ಬೀದಿಪಾಲು
ವಿಷಯ ತಿಳಿಯುತ್ತಿದ್ದಂತೆಯೇ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕರಾದ ಶ್ರೀ ಶಿವರಾಮ ಹೆಬ್ಬಾರ ಅವರು ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದು ವಿಧ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಧೈರ್ಯ ತುಂಬಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿ ಫುಡ್ ಸ್ಯಾಂಪಲ್ ವರದಿ ಬಂದ ನಂತರ ಯಾರ ತಪ್ಪು ಇದೆ ಏನು ಸಮಸ್ಯೆ ಆಗಿದೆ ಎಂದು ವಿಚಾರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಕುರಿತು ತಾಲ್ಲೂಕು ವೈದ್ಯಾಧಿಕಾರಿ ನರೇಂದ್ರ ಪವಾರ ಅವರು ಮಾತನಾಡಿ, “ಮಕ್ಕಳ ಆರೋಗ್ಯ ಸ್ಥಿರವಾಗಿದೆ. ವಾಂತಿ, ತಲೆಸುತ್ತು ಕಡಿಮೆಯಾಗಲು ಚಿಕಿತ್ಸೆ ನೀಡಲಾಗಿದೆ. ಊಟದ ಮಾದರಿಯನ್ನು (Food Sample) ಹಾಗೂ ದವಸ ಧಾನ್ಯಗಳನ್ನು ಬೆಳಗಾವಿಗೆ ತಪಾಸಣೆಗೆ ಕಳುಹಿಸಲಾಗಿದೆ. ಸೂಕ್ತ ವೈದ್ಯಕೀಯ ಆರೈಕೆ ಮುಂದುವರಿಸಲಾಗುತ್ತಿದೆ ಹಾಗೂ ಹೆಚ್ಚುವರಿ ವೈದ್ಯರನ್ನು ಮಕ್ಕಳ ಚಿಕಿತ್ಸೆಗೆ ನೇಮಕ ಮಾಡಲಾಗಿದೆ ಹಾಗೂ ವಿದ್ಯಾರ್ಥಿಗಳು ಹೆದರಿಕೊಂಡಿದ್ದಾರೆ ಅದಕ್ಕೆ ಸ್ವಲ್ಪ ಸಮಸ್ಯೆಯಾಗಿದೆ ಆದರೂ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಘಟನೆ ಕುರಿತು ಯುವರತ್ನ ಯುವ ಒಕ್ಕೂಟದ ಅಧ್ಯಕ್ಷರಾದ ತನ್ವೀರ್ ಮಿರ್ಜಾನಕರ ಅವರು ಈ ದಿನ ಮಾಧ್ಯಮದೊಂದಿಗೆ ಮಾತನಾಡಿ ಶಾಲಾ ಶಿಕ್ಷಕರು ಹಾಗೂ ಅಧಿಕಾರಿಗಳು ಆಹಾರ ಸುರಕ್ಷತಾ ನಿರ್ವಹಣೆಯಲ್ಲಿನ ನಿರ್ಲಕ್ಷ್ಯದ ಬಗ್ಗೆ ಶಿಕ್ಷಣ ಇಲಾಖೆ ಹಾಗೂ ತಾಲ್ಲೂಕು ಆಡಳಿತಕ್ಕೆ ಅಧಿಕೃತ ದೂರು ನೀಡಲು ಸಿದ್ಧತೆ ನಡೆಸಿದ್ದೆವೆ ಮತ್ತು ಶಾಲೆಯ ಅವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಈಗಲಾದರೂ ಸಂಭಂದಪಟ್ಟ ಅಧಿಕಾರಿಗಳು ಇದರ ಬಗ್ಗೆ ಕ್ರಮ ಕೈಗೊಂಡು ಮಕ್ಕಳ ಜೀವದ ಜೊತೆ ಆಟವಾಡುವುದು ಬಿಟ್ಟು ಶಾಲೆ ಹಾಗೂ ಅಡುಗೆ ಕೋಣೆಯ ಸುತ್ತ ಮುತ್ತಲಿನ ವಾತಾವರಣ ಶುಚಿಯಾಗಿ ಇಡುವಂತೆ ನೋಡಿಕೊಳ್ಳಬೇಕು ಹಾಗೂ ಕಿಡಿಗೇಡಿಗಳು ಒಡೆದಿರುವ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿ ಅಡುಗೆ ಕೋಣೆಗೆ ಬೇರೆ ಬಾಗಿಲನ್ನು ಹಾಕಿಸಿ ಎಂದು ಮನವಿ ಮಾಡಿದರು.





