ಮುಂಡಗೋಡ: ಇಲ್ಲಿನ ಲೊಯೋಲ ವಿಕಾಸ ಕೇಂದ್ರದಲ್ಲಿ (LVK) ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಯೋಜನೆಯ ಅಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಹೊಲಿಗೆ, ಕಂಪ್ಯೂಟರ್ ಹಾಗೂ ಇಡಿಪಿ (EDP) ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ 88 ಯುವಕ-ಯುವತಿಯರಿಗೆ ಇಂದು ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಮುಂಡಗೋಡ ತಾಲೂಕು ಪಂಚಾಯತ್‌ನ ಎನ್.ಆರ್.ಎಲ್.ಎಮ್ (NRLM) ವಿಭಾಗದ ಶ್ರೀಮತಿ ಶ್ಯಾಮಲಾ ಆರ್. ನಾಯ್ಕ್ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಲೊಯೋಲ ವಿಕಾಸ ಕೇಂದ್ರದ ನಿರ್ದೇಶಕರಾದ ಫಾದರ್ ಅನಿಲ್ ಡಿಸೋಜ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯ ಮೇಲೆ ಅತಿಥಿಗಳಾಗಿ ಸಿ. ವಿಲ್ಮಾ ಪಿಂಟೊ, ಸ್ವಯಂ ಉದ್ಯೋಗಿ ಕಾವೇರಿ ಕಟ್ಟಿ ಹಾಗೂ ಕಂಪ್ಯೂಟರ್ ವಿದ್ಯಾರ್ಥಿ ಗಣೇಶ ಲಮಾಣಿ ಉಪಸ್ಥಿತರಿದ್ದರು.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡಕ್ಕೆ ಬಜೆಟ್ ಬಂಪರ್: ಕಾರವಾರದಲ್ಲಿ 100 ಕೋಟಿ ವೆಚ್ಚದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ಘೋಷಣೆ
ಇದೇ ಸಂದರ್ಭದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಶ್ರೀಮತಿ ಶ್ಯಾಮಲಾ ನಾಯ್ಕ್, ಸಿ. ವಿಲ್ಮಾ ಪಿಂಟೊ, ಕಾವೇರಿ ಕಟ್ಟಿ ಹಾಗೂ ನಾಗವೇಣಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಯೋಜನಾ ಸಂಯೋಜಕರಾದ ಮಂಗಳಾ ಮೋರೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ತರಬೇತಿಯ ಉದ್ದೇಶ ಹಾಗೂ ಕೌಶಲ್ಯಾಭಿವೃದ್ಧಿಯ ಮಹತ್ವದ ಬಗ್ಗೆ ವಿವರಿಸಿದರು. ಕಾರ್ಯಕ್ರಮಕ್ಕೆ ತೇಜಸ್ವಿನಿ ಅಕ್ಕಿ ಸ್ವಾಗತ ಕೋರಿದರೆ, ನಾಗವೇಣಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
ಕೊನೆಯಲ್ಲಿ ಲಕ್ಷ್ಮಿ ಭದ್ರಾಪುರ ಅವರು ವಂದನಾರ್ಪಣೆ ಮಾಡಿದರು.ಈ ಸಂದರ್ಭದಲ್ಲಿ ಲೊಯೋಲ ವಿಕಾಸ ಕೇಂದ್ರದ ಸಿಬ್ಬಂದಿಗಳು, ಹೊಲಿಗೆ ಮತ್ತು ಕಂಪ್ಯೂಟರ್ ವಿಭಾಗದ ಶಿಕ್ಷಕಿಯರು ಹಾಗೂ ತರಬೇತಿ ಪಡೆದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





