ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಈ ವರ್ಷದ ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೆ. 95 ಕ್ಕಿಂತ ಹೆಚ್ಚಿಗೆ ಆಗಬೇಕು ಎಂದು 20 ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗಾಗಿ ಶಿಕ್ಷಕರು ಹಮ್ಮಿಕೊಳ್ಳಲಾದ ವಿಶೇಷ ಪ್ರೇರಣಾ ಶಿಬಿರಕ್ಕೆ ಚಾಲನೆ ದೊರೆತಿದೆ.
ಮೊದಲ ಹಂತದಲ್ಲಿ ದಿನಾಂಕ 04-02-2026 ರಿಂದ 06-02-2026 ರವರೆಗೆ ಕೆ.ಪಿ.ಎಸ್. ಮಳಗಿ, ಸರ್ಕಾರಿ ಪ್ರೌಢಶಾಲೆ ಕಾತುರ, ಸರ್ಕಾರಿ ಪ್ರೌಢಶಾಲೆ ಹುನಗುಂದ ಮತ್ತು ಇದೂರ ಪ್ರೌಢಶಾಲೆಗಳಲ್ಲಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗಾಗಿ ಆರು ವಿಷಯಗಳ ಪರಿಣಿತ ಶಿಕ್ಷಕರಿಂದ ಮೂರು ದಿನಗಳ ತರಬೇತಿ ನೀಡಲಾಗಿತ್ತು.
ಇದರ ಮುಂದುವರಿದ ಭಾಗವಾಗಿ ಇಂದು ದಿನಾಂಕ 09-02-2026 ರಿಂದ 11-02-2026 ರವರೆಗೆ ಚಿಗಳ್ಳಿ ಪ್ರೌಢಶಾಲೆ, ಲೋಯೋಲಾ ಪ್ರೌಢಶಾಲೆ, ರೋಟರಿ ಪ್ರೌಢಶಾಲೆ ಮತ್ತು ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರೌಢಶಾಲಾ ವಿಭಾಗದಲ್ಲಿ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜ್, ಆದಿ ಜಾಂಬವ ಪ್ರೌಢಶಾಲೆ, ರೋಟರಿ ಪ್ರೌಢಶಾಲೆ ಹಾಗೂ ಲೋಟಸ್ ಬಾಲಕಿಯರ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗಾಗಿ ಈ ವಿಶೇಷ ಶಿಬಿರವನ್ನು ಆಯೋಜಿಸಲಾಗಿದೆ.
ಈ ತರಬೇತಿ ಶಿಬಿರದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಿರಸಿ ಶೈಕ್ಷಣಿಕ ಜಿಲ್ಲಾ ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀ ಎಸ್. ಡಿ. ಮುಡೆಣ್ಣವರ ಅವರು, ಮುಂಡಗೋಡ ತಾಲೂಕಿನ ಒಟ್ಟಾರೆ ಫಲಿತಾಂಶವನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶ್ರಮಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಶಿಕ್ಷಣ ಇಲಾಖೆಯು ಈಗಾಗಲೇ ಆರು ವಿಷಯಗಳ ನೀಲನಕ್ಷೆಯನ್ನು ನೀಡಿದ್ದು, ಅದರಂತೆ ವಿದ್ಯಾರ್ಥಿಗಳು ಅಭ್ಯಾಸ ಮಾಡಬೇಕು ಎಂದು ತಿಳಿಸಿದರು. ವಿಶೇಷವಾಗಿ ಇಲಾಖೆಯ ಮಹತ್ವದ ಯೋಜನೆಯಾದ ’40 ಪ್ಲಸ್ ಮಿಷನ್’ ಕಾರ್ಯಕ್ರಮವನ್ನು ಬಳಸಿಕೊಂಡು ಹೆಚ್ಚು ಅಂಕಗಳನ್ನು ಪಡೆಯಲು ವಿದ್ಯಾರ್ಥಿಗಳು ಮುಂದಾಗಬೇಕು.

ಪರೀಕ್ಷೆಯಲ್ಲಿ ಎಲ್.ಬಿ.ಎ ಆಧಾರಿತ ಪ್ರಶ್ನೆಗಳನ್ನು ಕೇಳಲಾಗುತ್ತಿದ್ದು, ಆ ನಿಟ್ಟಿನಲ್ಲಿ ಓದಿದರೆ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಿದೆ ಎಂದು ಅವರು ಹೇಳಿದರು.
ತಾಲೂಕಿನ ಶಿಕ್ಷಕರು ಮತ್ತು ಸಿಬ್ಬಂದಿ ಮನೆ ಭೇಟಿ, ವಸತಿ ನಿಲಯಗಳಿಗೆ ಭೇಟಿ ಹಾಗೂ ವಿಶೇಷ ತರಗತಿಗಳ ಮೂಲಕ ಮಕ್ಕಳ ಫಲಿತಾಂಶ ಸುಧಾರಣೆಗೆ ಇಲಾಖೆಯ ಮಾರ್ಗದರ್ಶನದಂತೆ ಶ್ರಮಿಸುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಹಸಿರು ಜಿಲ್ಲೆಯಲ್ಲಿ ಅನ್ನದಾತನ ಅಳಲು; ರೈತರ ಸರಣಿ ಆತ್ಮಹತ್ಯೆ ಕೇಳುವುದೇನು?
ಉಳಿದಿರುವ 36 ದಿನಗಳಲ್ಲಿ ದಿನಕ್ಕೆ ಕನಿಷ್ಠ ಒಂದು ಅಂಕದ ಪ್ರಶ್ನೆಗಳನ್ನು ಅಭ್ಯಾಸ ಮಾಡಿದರೂ 40 ಅಂಕಗಳನ್ನು ಸುಲಭವಾಗಿ ಪಡೆಯಬಹುದು ಎಂದು ಶಿಕ್ಷಕರು ವಿದ್ಯಾರ್ಥಿಗಳಿಗೆ ಸಲಹೆ ನೀಡುತ್ತಾ ಓದುವಂತೆ ಪ್ರೇರೇಪಿಸುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ತಾಲೂಕಾ ಎಸ್‌ಎಸ್‌ಎಲ್‌ಸಿ ನೋಡಲ್ ಅಧಿಕಾರಿ ಶ್ರೀ ನಾಗರಾಜ ನಾಯ್ಕ ಅವರು ಮಾತನಾಡಿ, ಈ ವರ್ಷ ತಾಲೂಕಿನ ಫಲಿತಾಂಶವನ್ನು ಶೇ. 95 ಕ್ಕಿಂತ ಹೆಚ್ಚು ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಈಗಾಗಲೇ ಶಿಕ್ಷಕರು ಗುಂಪು ಅಧ್ಯಯನ, ವಿಶೇಷ ತರಗತಿ ಹಾಗೂ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವ ಮೂಲಕ ಮಕ್ಕಳನ್ನು ಸಿದ್ಧಪಡಿಸುತ್ತಿದ್ದಾರೆ, ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ತರಬೇತಿ ಶಿಬಿರದ ಅಧ್ಯಕ್ಷತೆ ವಹಿಸಿದ್ದ ಶ್ರೀ ಪಿ. ಸಿ. ಕೇಶಪ್ಪನಟ್ಟಿ ಅವರು ಮಾತನಾಡಿ, ವಿವಿಧ ಶಾಲೆಗಳಿಂದ ಆಗಮಿಸಿರುವ ವಿಷಯ ತಜ್ಞರು ನೀಡುವ ಸಲಹೆಗಳನ್ನು ವಿದ್ಯಾರ್ಥಿಗಳು ಮನದಟ್ಟು ಮಾಡಿಕೊಂಡು ಪರೀಕ್ಷೆಯಲ್ಲಿ ಯಶಸ್ಸು ಗಳಿಸಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಬೆಕು ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ರೋಟರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಜಿ. ಎನ್. ಕುಲಕರ್ಣಿ, ಕನ್ನಡ ವಿಷಯದ ಸಂಪನ್ಮೂಲ ಶಿಕ್ಷಕರಾದ ಶ್ರೀ ವಾಸುದೇವ ಮಡ್ಲಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಶ್ರೀ ರಮೇಶ ಪವಾರ ಕಾರ್ಯಕ್ರಮ ನಿರೂಪಿಸಿದರು, ಶ್ರೀ ಬಿ. ಕೆ. ಬಡಗೇರ ಸ್ವಾಗತಿಸಿದರು ಮತ್ತು ಸುನೀಲ್ ಲಮಾಣಿ ವಂದಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥನಾ ಗೀತೆಯನ್ನು ಹಾಡಿದರು.





