ಮುಂಡಗೋಡ: ತಾಲೂಕಿನ ಕಲಕೋಪ್ಪ ಕ್ರಾಸ್ ಬಳಿ ಟಿಪ್ಪರ್ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬ ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಹಾನಗಲ್ ತಾಲೂಕಿನ ಕೊಪ್ಪರಿಸಿಕೊಪ್ಪ ಗ್ರಾಮದ ಎಲ್ಲಪ್ಪ ಎಸ್. ಕೊಡದ್ (ಮೃತ) ಹಾಗೂ ವಿಟ್ಟಲ್ ಎಸ್. ಚೋಳಪ್ಪನವರ್ (ಗಾಯಾಳು) ಎಂದು ಗುರುತಿಸಲಾಗಿದೆ. ಗಾಯಾಳು ವಿಟ್ಟಲ್ ಅವರ ಸ್ಥಿತಿ ಚಿಂತಾಜನಕವಾಗಿದ್ದು, ಪ್ರಾಥಮಿಕ ಚಿಕಿತ್ಸೆಯ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಮುಂಡಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶಿರಸಿ-ಹುಬ್ಬಳ್ಳಿ ರಸ್ತೆಯಲ್ಲಿ ಇತ್ತೀಚಿನ ದಿನಗಳಲ್ಲಿ ಟಿಪ್ಪರ್‌ಗಳ ಸಂಚಾರ ಮಿತಿಮೀರಿದ್ದು, ಸಾರ್ವಜನಿಕರ ಜೀವಕ್ಕೆ ಸಂಚಕಾರ ತರುತ್ತಿವೆ. ಹಾನಗಲ್‌ನಿಂದ ಪಾಳಾ ಮಾರ್ಗವಾಗಿ ಶಿರಸಿಗೆ ಪ್ರತಿನಿತ್ಯ ನೂರಾರು ಟಿಪ್ಪರ್‌ಗಳು ಕಲ್ಲು ಗಣಿಗಾರಿಕೆಯ ಜೆಲ್ಲಿ ತುಂಬಿಕೊಂಡು ಸಂಚರಿಸುತ್ತಿವೆ.
ಈ ಸುದ್ದಿ ಓದಿದ್ದೀರಾ ? ಉತ್ತರ ಕನ್ನಡ | ಯುದ್ಧದ ಆತಂಕದ ನಡುವೆಯೂ ಕಾರವಾರಕ್ಕೆ ಬಂದಿಳಿದ ಯುಎಇ ಬಿಟುಮೆನ್ ಹಡಗು
ಹಗಲು-ರಾತ್ರಿ ಎನ್ನದೆ ಅತಿ ವೇಗವಾಗಿ ಮತ್ತು ಬೇಕಾಬಿಟ್ಟಿಯಾಗಿ ವಾಹನ ಚಲಾಯಿಸುತ್ತಿರುವುದು ಈ ಭಾಗದ ವಾಹನ ಸವಾರರಲ್ಲಿ ಭೀತಿ ಹುಟ್ಟಿಸಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮತ್ತು ಪೊಲೀಸರು ತಕ್ಷಣವೇ ಎಚ್ಚೆತ್ತುಕೊಂಡು ಈ ರಸ್ತೆಯಲ್ಲಿ ಸಂಚರಿಸುವ ಟಿಪ್ಪರ್ ಟ್ರಕ್‌ಗಳ ಮೇಲೆ ಕಟ್ಟುನಿಟ್ಟಿನ ನಿಗಾ ಇಡಬೇಕಿದೆ.
ವೇಗದ ಮಿತಿ ಮೀರುವ ಮತ್ತು ಸಮಯದ ಪ್ರಜ್ಞೆಯಿಲ್ಲದೆ ಸಂಚರಿಸುವ ಟಿಪ್ಪರ್ ಚಾಲಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಸರಣಿ ಅಪಘಾತಗಳನ್ನು ತಡೆಯಲು ಮತ್ತು ಅಮಾಯಕರ ಜೀವ ರಕ್ಷಿಸಲು ಅತಿ ವೇಗಕ್ಕೆ ಬ್ರೇಕ್ ಹಾಕುವ ಅಗತ್ಯವಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.





