ಮುಂಡಗೋಡ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಜಾಬ್ ಕಾರ್ಡ್ ಹೊಂದಿರುವ ಪ್ರತಿ ಗ್ರಾಮೀಣ ಕುಟುಂಬಕ್ಕೆ ವರ್ಷಕ್ಕೆ ಕನಿಷ್ಠ 100 ದಿನಗಳ ಉದ್ಯೋಗದ ಜೊತೆಗೆ, 5 ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಕಾಮಗಾರಿಗಳ ಸೌಲಭ್ಯ ಪಡೆಯಲು ಅವಕಾಶವಿದೆ ಎಂದು ತಾಲ್ಲೂಕು ಪಂಚಾಯತಿಯ ಐಇಸಿ ಸಂಯೋಜಕ ಕಿರಣ ಜೋತೆಪ್ಪನವರ ತಿಳಿಸಿದರು.
ತಾಲ್ಲೂಕಿನ ಮೈನಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಳ್ಳಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ನರೇಗಾ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಈ ಮಾಹಿತಿ ನೀಡಿದರು. ಈ ಯೋಜನೆಯು ಗ್ರಾಮೀಣ ಭಾಗದ ಆರ್ಥಿಕತೆಯನ್ನು ಬಲಪಡಿಸುವುದಲ್ಲದೆ, ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಹಿರಿಯ ನಾಗರಿಕರು, ವಿಶೇಷ ಚೇತನರು ಹಾಗೂ ಮಹಿಳೆಯರಿಗೆ ಯೋಜನೆಯಲ್ಲಿ ಸಿಗುವ ವಿಶೇಷ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ಯೋಜನೆಯ ಪಾರದರ್ಶಕತೆಗಾಗಿ ಅಳವಡಿಸಿರುವ ಎನ್.ಎಮ್.ಎಮ್.ಎಸ್ ಹಾಜರಾತಿ, ವೇತನ ಪಾವತಿ ಪ್ರಕ್ರಿಯೆ ಮತ್ತು ದೂರುಗಳ ನಿವಾರಣೆಗೆ ಇರುವ ಸಹಾಯವಾಣಿ ಸಂಖ್ಯೆಗಳ ಕುರಿತು ಸಮಗ್ರ ಮಾಹಿತಿ ನೀಡಲಾಯಿತು. ಹಿರಿಯ ನಾಗರಿಕರಿಗೆ ಲಭ್ಯವಿರುವ ಸವಲತ್ತುಗಳು ಮತ್ತು ಸಾಮಾಜಿಕ ಪರಿಶೋಧನೆಯ ಮಹತ್ವವನ್ನು ತಿಳಿಸಿದ ಅವರು, ಗ್ರಾಮದ ಅರ್ಹ ಫಲಾನುಭವಿಗಳು ಈ ಯೋಜನೆಯ ಪ್ರಯೋಜನ ಪಡೆಯಲು ಮುಂದಾಗಬೇಕು ಎಂದು ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | ನರೇಗಾ ರದ್ದತಿ ಕೇವಲ ವದಂತಿ; ಆತಂಕ ಬಿಟ್ಟು ಕೆಲಸ ಮಾಡಿ ಇಒ ಟಿ.ವಾಯ್. ದಾಸನಕೊಪ್ಪ ಭರವಸೆ
ಬಳಿಕ ತಾಂತ್ರಿಕ ಸಂಯೋಜಕರಾದ ಅಲೋಕ್ ನಾಯ್ಕ್ ಮತ್ತು ವಿನಾಯಕ ಆಚಾರಿ ಅವರು 2026-27ನೇ ಸಾಲಿನ ಕಾರ್ಮಿಕ ಆಯವ್ಯಯದ ಬಗ್ಗೆ ಚರ್ಚಿಸಿ, ಗ್ರಾಮಸ್ಥರಿಂದ ಹೆಚ್ಚುವರಿ ಕಾಮಗಾರಿಗಳ ಬೇಡಿಕೆಯನ್ನು ಪಡೆದುಕೊಂಡರು. ನಂತರ ಮುಂದಿನ ವರ್ಷದ ಕಾಮಗಾರಿಗಳಿಗಾಗಿ ಗುರುತಿಸಲಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ನಾಗರಾಜ ಪೂಜಾರ, ಕಾಯಕ ಬಂಧು ಮಹಾಬಲೇಶ್ವರ ಸನ್ನಳಿಮನೆ, ಮಂಜುನಾಥ ಪೂಜಾರ ಸೇರಿದಂತೆ ಹಲವು ಗ್ರಾಮಸ್ಥರು ಉಪಸ್ಥಿತರಿದ್ದರು.





