ಮುರುಡೇಶ್ವರ: ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ಹಾಗೂ ಪುಣ್ಯಕ್ಷೇತ್ರವಾದ ಮುರುಡೇಶ್ವರಕ್ಕೆ ರಾಜ್ಯದ ವಿವಿಧ ಮೂಲೆಗಳಿಂದ ಶೈಕ್ಷಣಿಕ ಪ್ರವಾಸಕ್ಕಾಗಿ ಸಾವಿರಾರು ಶಾಲಾ ವಿದ್ಯಾರ್ಥಿಗಳು ಮತ್ತು ಪ್ರವಾಸಿಗರು ನಿರಂತರವಾಗಿ ಭೇಟಿ ನೀಡುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ, ಕಡಲತೀರದಲ್ಲಿ ಸಂಭವಿಸಬಹುದಾದ ಅನಾಹುತಗಳನ್ನು ತಡೆಗಟ್ಟಲು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯು ವಿಶೇಷ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿದೆ. ಮುರುಡೇಶ್ವರದ ಕಡಲತೀರದಲ್ಲಿ ಸಮುದ್ರದ ಅಲೆಗಳ ಅಬ್ಬರ ಮತ್ತು ನೀರಿನ ಒಳಗಿನ ಸೆಳೆತ ಹೆಚ್ಚಾಗಿರುವುದರಿಂದ, ಈ ಹಿಂದೆ ಈಜಲು ಹೋದ ಹಲವಾರು ಪ್ರವಾಸಿಗರು ಹಾಗೂ ವಿದ್ಯಾರ್ಥಿಗಳು ಅನಾಹುತಕ್ಕೆ ಈಡಾದ ಘಟನೆಗಳು ನಡೆದಿವೆ.
ಎಚ್ಚರಿಕೆ ಫಲಕಗಳನ್ನು ನಿರ್ಲಕ್ಷಿಸುವುದು ಮತ್ತು ಲೈಫ್‌ಗಾರ್ಡ್‌ಗಳಿಲ್ಲದ ಜಾಗದಲ್ಲಿ ಸಮುದ್ರಕ್ಕೆ ಇಳಿಯುವುದು ಇಂತಹ ದುರ್ಘಟನೆಗಳಿಗೆ ಪ್ರಮುಖ ಕಾರಣವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ, ಪ್ರವಾಸಕ್ಕೆ ಬರುವ ತಂಡಗಳಿಗೆ ಸ್ಥಳದಲ್ಲೇ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ.

ಚಿಕ್ಕಬಳ್ಳಾಪುರ, ಮಂಡ್ಯ, ಹಾಸನ, ದಾವಣಗೆರೆ, ಶಿವಮೊಗ್ಗ, ಹಾವೇರಿ ಹಾಗೂ ತುಮಕೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಬರುವ ಶಾಲಾ ಮಕ್ಕಳನ್ನು ಮತ್ತು ಶಿಕ್ಷಕರನ್ನು ಕಡಲತೀರದಲ್ಲಿ ಭೇಟಿ ಮಾಡುವ ಪೊಲೀಸರು, ಸಮುದ್ರದ ಆಳ ಹಾಗೂ ಅಪಾಯದ ಬಗ್ಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ. ಇಲ್ಲಿಯವರೆಗೆ ಸುಮಾರು 5000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಜಾಗೃತಿ ಕಾರ್ಯಕ್ರಮದ ಪ್ರಯೋಜನ ಪಡೆದಿದ್ದು, ಇಲಾಖೆಯ ಈ ಸತತ ಪ್ರಯತ್ನದಿಂದಾಗಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಅಂಗನವಾಡಿಗಳಿಗೆ ಹೈಟೆಕ್ ಸ್ಪರ್ಶ: ಖಾಸಗಿ ಶಾಲೆಗಳ ಮಾದರಿಯಲ್ಲಿ ಎಲ್‌ಕೆಜಿ, ಯುಕೆಜಿ ಆರಂಭ
ಪ್ರವಾಸಿಗರಿಗೆ ಮತ್ತು ವಿದ್ಯಾರ್ಥಿಗಳಿಗೆ ಪೊಲೀಸ್ ಇಲಾಖೆಯ ಪ್ರಮುಖ ಸೂಚನೆಗಳು: ಸಮುದ್ರದ ಅಲೆಗಳ ಅಬ್ಬರ ಮತ್ತು ನೀರಿನ ಸೆಳೆತ ಅಪಾಯಕಾರಿಯಾಗಿರುವುದರಿಂದ ಸಾಧ್ಯವಾದಷ್ಟು ಸಮುದ್ರಕ್ಕೆ ಇಳಿಯುವುದನ್ನು ತಪ್ಪಿಸಬೇಕು, ಕಡಲತೀರದಲ್ಲಿ ಅಳವಡಿಸಲಾಗಿರುವ ‘ಈಜಲು ನಿಷೇಧ’ ಅಥವಾ ‘ಅಪಾಯ’ದ ಎಚ್ಚರಿಕೆ ಫಲಕಗಳನ್ನು ಕಡ್ಡಾಯವಾಗಿ ಪಾಲಿಸಬೇಕು, ವಿಶೇಷವಾಗಿ ಸೆಲ್ಫಿ ಅಥವಾ ವಿಡಿಯೋಗಾಗಿ ಸಮುದ್ರದ ಅಲೆಗಳ ಹತ್ತಿರ ಹೋಗಿ ಪ್ರಾಣಾಪಾಯ ತಂದುಕೊಳ್ಳಬಾರದು, ಮಕ್ಕಳನ್ನು ಸಮುದ್ರದ ಹತ್ತಿರ ಒಂಟಿಯಾಗಿ ಬಿಡದೆ ಶಿಕ್ಷಕರು ಮತ್ತು ಪೋಷಕರು ಹೆಚ್ಚಿನ ನಿಗಾ ವಹಿಸಬೇಕು, ಮದ್ಯಪಾನ ಮಾಡಿ ಸಮುದ್ರಕ್ಕೆ ಇಳಿಯುವುದು ಶಿಕ್ಷಾರ್ಹ ಅಪರಾಧ ಹಾಗೂ ಅತ್ಯಂತ ಅಪಾಯಕಾರಿ ಎಂದು ಪೊಲೀಸರು ಎಚ್ಚರಿಸಿದ್ದಾರೆ.
ಯಾವುದೇ ತುರ್ತು ಪರಿಸ್ಥಿತಿಯಲ್ಲಿ ತಕ್ಷಣವೇ ಸ್ಥಳೀಯ ಪೊಲೀಸ್ ಠಾಣೆಗೆ ಅಥವಾ 112 ಸಹಾಯವಾಣಿಗೆ ಕರೆ ಮಾಡುವಂತೆ ತಿಳಿಸಲಾಗಿದೆ. ಸಾರ್ವಜನಿಕರ ಪ್ರಾಣ ರಕ್ಷಣೆಯೇ ನಮ್ಮ ಆದ್ಯತೆಯಾಗಿದ್ದು, ಪ್ರವಾಸಿಗರು ಪೊಲೀಸರ ಮತ್ತು ಲೈಫ್‌ಗಾರ್ಡ್‌ಗಳ ಸೂಚನೆಗಳನ್ನು ಪಾಲಿಸಿ ಪ್ರವಾಸವನ್ನು ಸುಖಕರವಾಗಿಸಿಕೊಳ್ಳಬೇಕು ಎಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ವಿನಂತಿಸಿದೆ.





