2025-26 ನೇ ಸಾಲಿಗೆ ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷರಾಗಿ ಮಂಗಳೂರಿನ ಸಾಮಾಜಿಕ ಕಾರ್ಯಕರ್ತ ಝಾಕಿರ್ ಹುಸೇನ್ ಉಚ್ಚಿಲ್ಲ ಮತ್ತು ಕಾರ್ಯದರ್ಶಿಯಾಗಿ ರೆಹಮತುಲ್ಲಾ ದಾವಣಗೆರೆ ಆಯ್ಕೆಯಾಗಿದ್ದಾರೆ. ಮುಸ್ಲಿಂ ಬಾಂಧವ್ಯ ವೇದಿಕೆಯು ಕಳೆದ ಮೂರು ವರ್ಷಗಳಿಂದ ರಾಜ್ಯಾದ್ಯಂತ ವ್ಯಾಪಕವಾದ ಸೌಹಾರ್ದ ಕಾರ್ಯಕ್ರಮಗಳ ಮೂಲಕ ದೊಡ್ಡಮಟ್ಟದಲ್ಲಿ ಸಾರ್ವಜನಿಕರ ಗಮನ ಸೆಳೆದಿದೆ. ರಾಜ್ಯದ ಪ್ರಮುಖ ಮಠಾಧೀಶರು, ವಿವಿಧ ಸಮುದಾಯದ ಮುಖಂಡರು ಮತ್ತು ಜಾತ್ಯತೀತ ರಾಜಕಾರಣಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಈ ವೇದಿಕೆಯು ರಾಜ್ಯದಲ್ಲಿ ಅತ್ಯಂತ ಕ್ಷಿಪ್ರಗತಿಯಲ್ಲಿ ಸಮಾಜದ ಎಲ್ಲ ವರ್ಗದವರಿಗೆ ಪರಿಚಿತಗೊಂಡ ವೇದಿಕೆ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ರಾಜ್ಯದ ಮುಸ್ಲಿಂ ಲೇಖಕರು ಚಿಂತಕರು ಸಾಹಿತಿಗಳು ಸಾಧಕರು ಸೈನಿಕರು ಹಾಗೂ ನಿವ್ರತ್ತ ಸರ್ಕಾರಿ ಅಧಿಕಾರಿಗಳಿಂದ ಕೂಡಿದ ಅಪರೂಪದ ವಿಶಿಷ್ಟ ವೇದಿಕೆ ಇದು. ಜೂನ್ ತಿಂಗಳ 28ರಂದು ವಿಜಯಪುರದಲ್ಲಿ ನಡೆಯಲಿರುವ ಪದಗ್ರಹಣ ಸಮಾರಂಭದಲ್ಲಿ ಆಯ್ಕೆಯಾದ ಪದಾಧಿಕಾರಿಗಳು ಸಂಘಟನೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಸಂಘಟನೆಯ ಕೋರ್ ಕಮಿಟಿ ಸಭೆಯ ನಂತರ ಆಯ್ಕೆಯಾದ ಸದಸ್ಯರ ವಿವರವನ್ನು ವಕ್ತಾರ ಮುಷ್ತಾಕ್ ಹೆನ್ನಾಬೈಲ್ ತಮ್ಮ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




