ಚಿಕ್ಕಬಳ್ಳಾಪುರ ಜಿಲ್ಲೆಯ ಅಲಿಪುರ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಅದ್ದೂರಿಯಾಗಿ ಮೊಹರಂ ಆಚರಿಸಲಾಯಿತು.
ಗ್ರಾಮದ ಆಸ್ತಾನಾ ಹುಸೈನಿ ಬಳಿ ಸುಮಾರು ಹತ್ತು ಸಾವಿರ ಜನ ಜಮಾವಣೆಗೊಂಡು ಧರ್ಮ ಗುರುಗಳ ಭಾಷಣ ಮುಕ್ತಾಯವಾದ ನಂತರ ಮುಸ್ತಫಾ ಸರ್ಕಲ್ ವರವಿಗೂ ಮೆರವಣಿಗೆ ನಡೆಸಿದರು.
ಮೊಹರಂ ಹಬ್ಬ ಮುಸ್ಲಿಮರಿಗೆ ದುಃಖವನ್ನು ಸೂಚಿಸುವ ಹಾಗೂ ಶೋಕಾಚರಣೆಯ ಹಬ್ಬ. ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ಮೊದಲ ತಿಂಗಳಾದ ಹಾಗೂ ಹೊಸ ಇಸ್ಲಾಮಿಕ್ ವರ್ಷದ ಆರಂಭವನ್ನು ಸೂಚಿಸುವ ಮೊಹರಂ ತಿಂಗಳಲ್ಲಿ ಆಚರಿಸುವ ಪವಿತ್ರ ಮೊಹರಂ ಹಬ್ಬವನ್ನು ದುಃಖದ ಹಬ್ಬ, ಕಣ್ಣೀರಿನ ಹಬ್ಬವಾಗಿ ಮುಸ್ಲಿಮರು ಆಚರಿಸುತ್ತಾರೆ. ಈ ತಿಂಗಳಲ್ಲಿ ಮುಸ್ಲಿಮರು ಧಾರ್ಮಿಕ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಕೊಳ್ಳುತ್ತಾರೆ. ಮೊಹರಂ ಹಿಂದೂ-ಮುಸ್ಲಿಂರ ಭಾವೈಕ್ಯತೆ ಸಾರುವ ಹಬ್ಬ. ಈ ಹಬ್ಬದಲ್ಲಿ ಯಾವುದೇ ತಾರತಮ್ಯವಿಲ್ಲದೇ, ಸರ್ವಧರ್ಮೀಯರು ಪಾಲ್ಗೊಂಡು ಹಬ್ಬವನ್ನು ಆಚರಿಸುತ್ತಾರೆ. ಹತ್ತು ದಿನಗಳವರೆಗೆ ಮೊಹರಂ ಆಚರಣೆ ಮಾಡಲಾಗುತ್ತದೆ.
ಮೆರವಣಿಗೆಯಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ಯುವಕರು ವೃದ್ಧರು ಭಾಗವಹಿಸಿ ಎದೆ ಬರೆದುಕೊಂಡು ರಕ್ತ ಸುರಿಸಿ ಶೋಕಾಚರಣೆ ಮಾಡಿದರು. ಗ್ರಾಮದಲ್ಲಿ ಸುಮಾರು 300 ವರ್ಷ ಗಳಿಂದ ಶೋಕಾಚರಣೆಯ ಮೊಹರಂ ಆಚರಣೆ ಮಾಡಲಾಗುತ್ತಿದ್ದು,ಈ ಪದ್ಧತಿ ಈಗಲೂ ಸಹ ಜಾರಿಯಲ್ಲಿದೆ.

ಸುಮಾರು ನಾಲ್ಕು ತಾಸು ನಡೆದ ಮೆರವಣಿಗೆಯಲ್ಲಿ ಮಕ್ಕಳು, ಯುವಕರು ಮತ್ತು ವೃದ್ಧರು ದೇಹದಂಡನೆ ಮಾಡಿಕೊಂಡರು. ‘ಆಲಿ ದೂಲಾ’ ಎಂದು ಕೂಗುತ್ತಾ ದಾರಕ್ಕೆ ಕಟ್ಟಿದ್ದ ಬ್ಲೇಡ್‌ಗಳ ಗೊಂಚಲನ್ನು ಜನರು ತಮ್ಮ ಎದೆಗೆ ಹಾಗೂ ಬೆನ್ನಿಗೆ ಬಡಿದುಕೊಂಡರು. ಆಗ ಅವರ ದೇಹದಿಂದ ರಕ್ತ ಚಿಮ್ಮುತ್ತಿತ್ತು. ಬಹುತೇಕರು ಎದೆಗೆ ಕೈಗಳಿಂದ ಬಡಿದುಕೊಂಡು ಶೋಕ ಗೀತೆಗಳನ್ನು ಹಾಡಿದರು.
ಇದನ್ನೂ ಓದಿ: ಚಿಕ್ಕಬಳ್ಳಾಪುರ | ʼಬಯಲು ಸೀಮೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಿʼ
ಈ ಸಂದರ್ಭದಲ್ಲಿ ಅಂಜುಮನ್ ಜಾಫರಿಯ್ ಅಧ್ಯಕ್ಷ ಅಲಿ ಅಬ್ಬಾಸ್, ಕಾರ್ಯದರ್ಶಿ ಫಾಝಿಲ್ ರಜಾ, ಗ್ರಾಮ ಪಂಚಾಯತಿ ಬಕರ್ ರಜಾ, ಸೈಯದ್ ನಾಥಿಕ್ ಅಲಿ, ಸೈಯದ್ ನಸೀಹ್ ರಜಾ, ಪ್ರಧಾನ ಮಂತ್ರಿ 14 ನೇ ಸಮಿತಿಯ ಸದಸ್ಯ ಸಾಖಿ ಅಹ್ಮದ್, ಅಲಬಾಲ್ಗ್ ಫೌಂಡೇಶನ್ ಹಾಗೂ ಮೊಹರಂ ಕಮಿಟಿಯ ಪದಾಧಿಕಾರಿಗಳು ಹಾಜರಿದ್ದರು.





