ಜಿಎಸ್‌ಎಸ್ ಯೋಗಿಕ್ ಫೌಂಡೇಷನ್ ವತಿಯಿಂದ ‘2050ರ ದೃಷ್ಠಿಕೋನದಲ್ಲಿ ಉತ್ತಮ ಮೈಸೂರು ನಿರ್ಮಾಣ’ ವಿಷಯ ಕುರಿತು ಕೃಷ್ಣಮೂರ್ತಿಪುರಂ ಬಿಎಸ್‌ಎಸ್ ವಿದ್ಯೋದಯ ಸಂಸ್ಥೆಯ ಸಭಾಂಗಣದಲ್ಲಿ ʻಮೈಸೂರು ಸಿಎಸ್‌ಆರ್ ಕಾನ್ಲೇವ್ʼ ಶೀರ್ಷಿಕೆಯಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಚಾರವಾದಿ ಪ್ರೊ ಎಂ. ಕೃಷ್ಣೆಗೌಡ ಮೈಸೂರಿಗೆ ವೇಗ, ಒತ್ತಡದ ಬೆಳವಣಿಗೆ ಬೇಡ ಎಂದರು.
ಅರಸರ ದೂರದೃಷ್ಠಿಯೊಂದಿಗೆ ಶತಮಾನಗಳ ಇತಿಹಾಸ ಮತ್ತು ಐತಿಹಾಸಿಕ ಹಿನ್ನಲೆ ಹೊಂದಿರುವ ಮೈಸೂರು ವಿಶ್ವದೆಲ್ಲೆಡೆ ತನ್ನದೇ ಛಾಪು ಮೂಡಿಸಿದೆ. ಕಲೆ, ಸಂಸ್ಕೃತಿ ಮತ್ತು ಪರಂಪರೆಗಳಿಂದ ಗಮನ ಸೆಳೆದಿರುವ ಸಾಂಸ್ಕೃತಿಕ ನಗರಿಯನ್ನು ಭವಿಷ್ಯದ ಉದ್ದೇಶದೊಂದಿಗೆ ಸುಸಜ್ಜಿತವಾಗಿ ನಿರ್ಮಿಸುವ ಕುರಿತಂತೆ ವಿವಿಧ ಕ್ಷೇತ್ರಗಳ ಪ್ರಮುಖರೊಂದಿಗೆ ಭಾನುವಾರ ಮುಕ್ತ ಚರ್ಚೆ ನಡೆಸಲಾಯಿತು.
“ಇತ್ತೀಚೆಗೆ ಎಲ್ಲೆಡೆ ವೇಗ, ಗದ್ದಲ ಹಾಗೂ ಅಭಿವೃದ್ಧಿಯ ಹುಚ್ಚು ಹೆಚ್ಚಾಗಿದೆ. ಯಾವುದೇ ನಗರದ ಅಭಿವೃದ್ಧಿ ಜತೆಗೆ ಕ್ರಾಂತಿಯೂ ಆಗಬೇಕು. ಆ ಮೂಲಕವಾಗಿ ಒಂದು ಊರನ್ನು ತಾನಾಗಿಯೇ ಬೆಳೆಯಲು ಬಿಡಬೇಕು, ನಮ್ಮ ಊರು ಹೇಗಿರಬೇಕೆಂದು ಅರಿತು ಅದರ ಬೆಳವಣಿಗೆಗೆ ಬಿಡಬೇಕಿದೆ. ಮೈಸೂರಿಗೆ ತನ್ನದೇ ಆದ ವಿಶೇಷತೆ ಇದೆ. ಭಾರತ ಎಂದಿಗೂ ದುಃಖದಲ್ಲಿನ ಅಂತ್ಯವನ್ನು ಬಯಸದೆ, ಪ್ರತಿ ವಿಷಯದಲ್ಲೂ ಸುಖಾಂತ್ಯ ಬಯಸುತ್ತದೆ. ಈ ನಿಟ್ಟಿನಲ್ಲಿ ಅಭಿವೃದ್ಧಿ ನಮಗೆ ಬೇಕೇ? ಎಂದು ಯೋಚಿಸಬೇಕಿದೆ” ಎಂದರು.
“ಆಧುನಿಕ ಸಮಾಜದಲ್ಲಿ ಒಗ್ಗಟ್ಟು ಇಲ್ಲ, ಬುದ್ದಿವಂತ ಜನರು ಇರುವೆಡೆ ಒಗ್ಗಟ್ಟು ಸಾಧ್ಯವಿಲ್ಲ. ನನ್ನ ಪ್ರಕಾರ ಪ್ರವಾಸೋದ್ಯಮ ಅಸಹ್ಯಕರವಾಗಿದ್ದು, ಊರು ಇರುವುದು ನಿವಾಸಿಗಳಿಗೆ ಹೊರತು, ಪ್ರವಾಸಿಗರಿಗಾಗಿ ಅಲ್ಲ. ಇಂದು ಪ್ರವಾಸೋದ್ಯಮದಿಂದ ಹಲವು ಊರುಗಳ ಸಂಸ್ಕೃತಿ, ಹಿನ್ನೆಲೆಯೇ ನಶಿಸಿದೆ ಎಂದು ಕಳವಳ ವ್ಯಕ್ತಪಡಿಸಿದರು, ನಮ್ಮ ಜೀವನಶೈಲಿಯ ಅಗತ್ಯತೆಗೆ ತಕ್ಕಂತೆ ನಗರದ ಅಭಿವೃದ್ಧಿ ಮಾಡದೆ, ಊರಿಗೆ ನಾವು ಹೊಂದುಕೊಳ್ಳಬೇಕು” ಎಂದು ಸಲಹೆ ನೀಡಿದರು.
ತಪೋವನ ಸಂಸ್ಥೆ ಸಂಸ್ಥಾಪಕ ಕೆ. ಶ್ರೀರಾಮ್ ಮಾತನಾಡಿ, “ಇತ್ತೀಚೆಗೆ ಎಲ್ಲಾ ಕಡೆಗಳಲ್ಲೂ ಅಭಿವೃದ್ಧಿ, ಮೂಲಸೌರ್ಕಯದ ಚರ್ಚೆಗಳು ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಮೈಸೂರಿನ ಅಭಿವೃದ್ಧಿಗೆ ಇಂತಹ ಚರ್ಚೆಗಳ ಅಗತ್ಯವಿದೆ. ಮೈಸೂರು ಸುಂದರ ಹಾಗೂ ಉತ್ತಮವಾಗಿ ನಿರ್ಮಿಸಿರುವ ನಗರವಾಗಿದ್ದು, ಪ್ರವಾಸೋದ್ಯಮ, ರಸ್ತೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಇತರೆ ರಾಜ್ಯಗಳಿಗಿಂತ ಹಿಂದುಳಿದಿದೆ. ಮೈಸೂರಿನಲ್ಲಿ ಸಾಕಷ್ಟು ಆಕರ್ಷಕ ಸ್ಥಳವಿದ್ದು, ಈ ನಿಟ್ಟಿನಲ್ಲಿ ಪ್ರವಾಸೋದ್ಯಮಕ್ಕೆ ಮನ್ನಣೆ ನೀಡಬೇಕಾಗಿದೆ. ಇದರಿಂದ ಹೆಚ್ಚಿನ ಉದ್ಯೋಗಗಳ ಸೃಷ್ಟಿಗೂ ಅನುಕೂಲವಾಗಲಿದೆ” ಎಂದರು.
ಇತ್ತೀಚೆಗೆ ಮೈಸೂರಿನಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಗಳಿಗೆ ಫ್ಲೈ ಓವರ್ ನಿರ್ಮಾಣವೊಂದೇ ಉತ್ತರವಲ್ಲ. ಲಂಡನ್ ಸೇರಿದಂತೆ ಹಲವು ನಗರಗಳಲ್ಲಿ ಇಂದಿಗೂ ಫ್ಲೈ ಓವರ್ ನಿರ್ಮಿಸಿಲ್ಲ. ಬದಲಾಗಿ ಟ್ರಾಫಿಕ್ ಸಮಸ್ಯೆ ತಪ್ಪಿಸಲು ʻಪಾರ್ಕ್ ಅಂಡ್ ರೈಡ್ʼ ನಂತಹ ಸೇವೆಗಳನ್ನು ಪ್ರವಾಸಿಗರಿಗೆ ನೀಡಿದರೆ, ಮೈಸೂರಿನಲ್ಲಿ ವಾರಾಂತ್ಯ ಹಾಗೂ ಸಾರ್ವತ್ರಿಕ ರಜಾ ದಿನಗಳಲ್ಲಿ ಹೆಚ್ಚುವ ಪ್ರವಾಸಿಗರಿಂದ ಉಂಟಾಗುತ್ತಿರುವ ಟ್ರಾಫಿಕ್ ಸಮಸ್ಯೆ ಪರಿಹಾರ ದೊರಕಲಿದೆ ಎಂದು ಅಭಿಪ್ರಾಯಪಟ್ಟರು.

ಡಾ. ಜಾವೇದ್ ಮಾತನಾಡಿ, “ಯಾವುದೇ ಕೆಲಸದಲ್ಲಿ ಕೇವಲ ಒಬ್ಬರಿಗೆ ಹೆಗ್ಗಳಿಕೆ ಸಿಗಬೇಕೆಂಬ ಮನಸ್ಥಿತಿ ಇಲ್ಲದೇ, ಎಲ್ಲರೂ ಒಗ್ಗೂಡಿ ಸಾಗಿದರೆ ಧೀರ್ಘಕಾಲ ಮುನ್ನಡೆಬಹುದು. ಒಂದು ನಗರ, ರಾಜ್ಯ, ದೇಶ ಅಥವಾ ಜಗತ್ತು ಮನುಷ್ಯನ ದೇಹದಂತಿದ್ದು, ಒಂದು ಅಂಗದಲ್ಲಿ ಸಣ್ಣ ಸಮಸ್ಯೆ ಆದರೆ, ಇಡೀ ದೇಹಕ್ಕೆ ಸಮಸ್ಯೆ ಎದುರಾಗಲಿದೆ. ಶಾಂತಿ ಇಲ್ಲದೇ ಸಮಾಜ ಸುಖಮಯವಾಗಿರಲು ಸಾಧ್ಯವಿಲ್ಲ ಹಾಗೂ ಮೈಸೂರಿನ ಚಿತ್ರಣ ಉತ್ತಮವಾಗಿರಬೇಕೆಂಬ ಕಾರಣಕ್ಕೆ ದಶಕಗಳ ಹಿಂದೆ ʻಆಕ್ಟ್ʼ ಸಂಘಟನೆ ಅನುಷ್ಠಾನಗೊಳಿಸಲಾಯಿತು. ಇದರ ಮೂಲಕ ನಾವೆಲ್ಲರೂ ಜಾತಿ, ಧರ್ಮ, ಸ್ಥಾನಮಾನವನ್ನು ಬದಿಗಿಟ್ಟು ಕೆಲಸ ಮಾಡುತ್ತಾ ಬಂದಿದ್ದೇವೆ” ಎಂದು ಹೇಳಿದರು.
ಪ್ರತಿನಿಧಿ ಪತ್ರಿಕೆ ಪ್ರಧಾನ ಸಂಪಾದಕರಾದ ಸಿ.ಕೆ. ಮಹೇಂದ್ರ ಮಾತನಾಡಿ, “ಮೈಸೂರು ಅರಸರ ದೂರದೃಷ್ಟಿ, ವಿಶಾಲ ಮನೋಭಾವದಿಂದ ನಗರದ ನಿರ್ಮಾಣ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಮೈಸೂರು ಸಿಎಸ್‌ಆರ್ ಕಾನ್ಲೇವ್‌ನ ಮೂಲಕ ಕ್ಲೀನ್ ಮೈಸೂರು, ಸ್ಕಿಲ್ ಮೈಸೂರು, ಎಜುಕೇಷನ್ ಮೈಸೂರು ಸೇರಿದಂತೆ ಪ್ರಮುಖ ವಿಚಾರಗಳ ಗುರಿ ಹೊಂದಿರುವುದು ಉತ್ತಮ ಬೆಳವಣಿಗೆ. ಮೈಸೂರನ್ನು ಮುಂದಿನ 50 ವರ್ಷಗಳಲ್ಲಿ ಹೇಗೆ ಅಭಿವೃದ್ಧಿಪಡಿಸಬೇಕೆಂಬ ಚರ್ಚೆ ಉತ್ತಮ ಬೆಳವಣಿಗೆಯಾಗಿದೆ. ನಾಗರಿಕರ ಸಾಮಾಜಿಕ ಜವಾಬ್ದಾರಿ ಏನಿದೆ? ಎಂದು ಚರ್ಚಿಸಿ, ನಿರ್ಣಯಕೈಗೊಂಡು, ನಿರಂತರ ಸಭೆಯೊಂದಿಗೆ ಪರಿಣಾಮಕಾರಿ ಅನುಷ್ಠಾನಗೊಳಿಸಬೇಕು” ಎಂದರು.
ಹಿರಿಯ ಪತ್ರಕರ್ತರಾದ ಅಂಶಿ ಪ್ರಸನ್ನಕುಮಾರ್ ಮಾತನಾಡಿ, “ನಾಲ್ವಡಿಯವರು ಕಟ್ಟಿ ಬೆಳೆಸಿರುವ ಮೈಸೂರನ್ನು ಉಳಿಸಿ, ಬೆಳೆಸುವುದನ್ನು ಪ್ರತಿಯೊಬ್ಬರೂ ಮಾಡಬೇಕು. ಮೈಸೂರು ಯೋಜನಾಬದ್ಧ ನಗರವಾಗಿದ್ದು, ಮೈಸೂರಿನ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿದೆ. ಮೈಸೂರನ್ನು ನಿವೃತ್ತರ ಸ್ವರ್ಗ ಎನ್ನುತ್ತಾರೆ. ಆದರೆ, ಕೈಕೆಸರಾದರೆ ಬಾಯಿ ಮೊಸರು ಎಂಬ ರೀತಿಯಲ್ಲಿ ಎಲ್ಲರೂ ದುಡಿಯಬೇಕು. ಶಿಕ್ಷಣ ಕ್ಷೇತ್ರದಲ್ಲಿ ಎಲ್ಲ ಹಂತದ ಶಿಕ್ಷಣ ಮೈಸೂರಿನಲ್ಲಿ ಲಭ್ಯವಿದೆ. ಆದರೆ, ಇಂದು ಸಂಸ್ಕಾರ ಶಿಕ್ಷಣದ ಕಲಿಕೆಯ ಬಗ್ಗೆ ಆದ್ಯತೆ ನೀಡಬೇಕಿದೆ. ಮಕ್ಕಳನ್ನು ಅಂಕಗಳಿಕೆಯ ಯಂತ್ರವನ್ನಾಗಿ ಮಾಡದೆ, ಪ್ರಾಥಮಿಕ ಹಂತದಿಂದಲೇ ಸಂಸ್ಕೃತಿ, ಸಂಸ್ಕಾರ ಕಲಿಸಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಅಸ್ಪೃಶ್ಯತೆ-ತಾರತಮ್ಯದ ವಿರುದ್ಧ; ರಾಜಕೀಯ-ಸಾಂಸ್ಕೃತಿಕ ಸಂವೇದನೆ ಮೂಡಿಸಿದ್ದು ದಲಿತ ಸಂಘರ್ಷ ಸಮಿತಿ
ಬಿಎಸ್‌ಎಸ್ ವಿದ್ಯೋದಯ ಸಂಸ್ಥೆ ಅಧ್ಯಕ್ಷರಾದ ಆರ್. ವಾಸುದೇವ ಭಟ್ ಮಾತನಾಡಿ, “ಮೈಸೂರಿನ ಅಭಿವೃದ್ಧಿಗೆ ಪೂರಕವೆಂಬಂತೆ ಯೋಜನೆ ರೂಪಿಸಬೇಕಿದೆ. ಊರು ಚೆನ್ನಾಗಿದ್ದರೆ ಮುಂದಿನ 25 ವರ್ಷಗಳು ಉತ್ತಮವಾಗಿ ಬದುಕಲು ಸಾಧ್ಯವಿದೆ. ಊರಿನ ಆರೋಗ್ಯ, ಸ್ವಚ್ಛತೆ, ಉದ್ಯೋಗ ಲಭ್ಯತೆ ದೊರೆಯಬೇಕು. ಈ ನಿಟ್ಟಿನಲ್ಲಿ ಸುಸಜ್ಜಿತವಾದ ನಗರವನ್ನು ಕಟ್ಟುವ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿ ಹೆಜ್ಜೆ ಹಾಕೋಣ” ಎಂದು ಹೇಳಿದರು.





