ಮೈಸೂರಿನ ಅಂಬಾವಿಲಾಸ ಅರಮನೆ ಮುಂಭಾಗದ, ಜಯಮಾರ್ತಾಂಡ ದ್ವಾರದ ಬಳಿ ಬಲೂನಿಗೆ ಗ್ಯಾಸ್ ತುಂಬುವ ವೇಳೆ ಹಿಲಿಯಂ ಸಿಲಿಂಡರ್ ಸ್ಫೋಟಗೊಂಡು ಓರ್ವ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಇದೀಗ, ಮೃತರ ಸಂಖ್ಯೆ 3ಕ್ಕೆ ಏರಿದೆ. ಘಟನಾ ಸ್ಥಳಕ್ಕೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ, ಮಾಹಿತಿ ಕಲೆ ಹಾಕಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ನಂಜನಗೂಡು ಪಟ್ಟಣದ, ಚಾಮಲಾಪುರ ಬೀದಿಯ ನಿವಾಸಿ ಮಂಜುಳಾ(28) ಹಾಗೂ ಬೆಂಗಳೂರಿನ ಕಾಮಾಕ್ಷಿ ಪಾಳ್ಯದ ನಿವಾಸಿ ಲಕ್ಷ್ಮಿ(43) ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಗಾಯಳುಗಳಾದ ಕೊಲ್ಕತ್ತಾ ಮೂಲದ ಶಮಿನ ಶಬ್ಬೀರ್, ರಂಜಿತಾ ಹಾಗೂ ರಾಣೆಬೆನ್ನೂರಿನ ಕೊಟ್ರೇಶ್ ಚಿಕಿತ್ಸೆ ಪಡೆಯುತಿದ್ದಾರೆ.
ಸದರಿ ಪ್ರಕರಣ ಸಂಬಂಧ ದೇವರಾಜ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು. ಗಾಯಾಳು ಕೊಟ್ರೇಶ್ ಬೀರಪ್ಪ ಗುತ್ತೇದಾರ್ ಅವರ ಹೇಳಿಕೆ ಅನುಸಾರ ತನಿಖೆ ಕೈಗೊಂಡಿದ್ದಾರೆ. ಲಷ್ಕರ್ ಮೊಹಲ್ಲಾದ ಶರೀಫ್ ಲಾಡ್ಜ್ ನಲ್ಲಿ ಮೃತ ಸಲೀಮ್ ಜೊತೆಗಿದ್ದ ಅರ್ಬಾಜ್, ರಿಜ್ವಾನ್ ಹಾಗೂ ರಾಜು ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಇದೇ ಸಮಯದಲ್ಲಿ ಬಿಳಿ ಪೌಡರ್ ದೊರೆತಿದ್ದು ಬಲೂನಿಗೆ ತುಂಬಲು ಸೋಡಿಯಂ ಹೈಡ್ರಾಕ್ಸೈಡ್ ಹಾಗೂ ಕಾಸ್ಟಿಕ್ ಸೋಡಾ ಬಳಸಲಾಗಿದೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಮೈಸೂರು ಅರಮನೆ ಬಳಿ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಫೋಟ: ಬಲೂನ್ ವ್ಯಾಪಾರಿ ಸಾವು: ಹಲವರು ಗಂಭೀರ
ಮೈಸೂರು ಉಸ್ತುವಾರಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಕೆ. ಆರ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸುರಕ್ಷತೆ ದೃಷ್ಟಿಯಿಂದ, ಅರಮನೆ ಸುತ್ತಮುತ್ತ ವ್ಯಾಪಾರಿಗಳಿಗೆ ಪ್ರತ್ಯೇಕ ಝೋನ್ ಮಾಡಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತರಿಗೆ ಒತ್ತಾಯಿಸಿದ್ದೇವೆ, ಆದರೇ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.





