ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮೈಸೂರು ನಗರ ಮತ್ತು ತಾಲೂಕು ಪತ್ರ ಬರಹಗಾರರ ಒಕ್ಕೂಟ ಉತ್ತರ ಉಪನೋಂದಣಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ, ಜಿಲ್ಲಾ ಉಪನೋಂದಣಾಧಿಕಾರಿ ಹಾಗೂ ಮೈಸೂರು ತಾಲ್ಲೂಕು ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಿದರು.
ಮುದ್ರಾಂಕ ಹಾಗೂ ನೋಂದಣಿ ಇಲಾಖೆಯು ಈಗಾಗಲೇ ಕಾವೇರಿ 2.0 ತಂತ್ರಾಂಶದ ಮೂಲಕ ದಾಖಲಾತಿಗಳನ್ನು ರವಾನಿಸುವ ಬಗ್ಗೆ ಕ್ರಮ ಕೈಗೊಂಡಿದ್ದು, ಈ ಸಂಬಂಧ ಆಗಿದ್ದಾಂಗ್ಲೆ ಸುಧಾರಣೆ ವಿಷಯದಲ್ಲಿ ಹಲವಾರು ಬದಲಾವಣೆಗಳನ್ನು ತಂದಿರುವುದು ತಿಳಿದಿರುವ ಸಂಗತಿಯಾಗಿರುತ್ತದೆ. ಸುಧಾರಣೆಗಳಿಂದಾಗಿ ಜನಸಾಮಾನ್ಯರ ನೋಂದಣಿ ಪ್ರಕ್ರಿಯೆಯ ವೇಗ ಕುಂಠಿತವಾಗುತ್ತಿದ್ದು, ಪತ್ರ ಬರಹಗಾರರಾದ ನಾವುಗಳು ಸಹ ಸಮರ್ಪಕ ಸೇವೆಯನ್ನು ಜನ ಸಾಮಾನ್ಯರಿಗೆ ನೀಡುವುದು ದುಸ್ಸಾಹಸವಾಗಿದೆ.
ನೋಂದಣಿ ಪ್ರಕ್ರಿಯೆಯಲ್ಲಿ ಈಗಾಗಲೇ ವಿಭಾಗ ಪತ್ರ. ದಾನಪತ್ರ ಹಾಗೂ ಇನ್ನಿತರೆ ದಾಖಲಾತಿಗಳನ್ನು ಅಪ್‌ಲೋಡ್ ಮಾಡುವುದು ಸಹ ಸಾಧ್ಯವಾಗದ ಕಾರಣ ಜನಸಾಮಾನ್ಯರು ತಮ್ಮ ಕುಟುಂಬದ ಸ್ಥಿರಾಸ್ತಿಗಳನ್ನು ನೋಂದಣಿ ಮಾಡಿಕೊಳ್ಳುವುದು ಸಾಧ್ಯವಿಲ್ಲದಂತಾಗಿದೆ. ಸುಧಾರಣೆಯ ನೆಪದಲ್ಲಿ ಪತ್ರಬರಹಗಾರರು, ವಕೀಲರು ಹಾಗೂ ಜನಸಾಮಾನ್ಯರಿಗೆ ಯಾವುದೇ ರೀತಿಯಲ್ಲಿ ವಿಷಯಗಳು ತಿಳಿಯದ ಕಾರಣ ಇಲಾಖೆಯಿಂದ ರಹದಾರಿ ಪಡೆದಿರುವ ಪತ್ರ ಬರಹಗಾರರು ಹಾಗೂ ಜನಸಾಮಾನ್ಯರು ತೀರ್ವ ತೊಂದರೆಯನ್ನು ಅನುಭವಿಸುವಂತಾಗಿದೆ.

ಈ ಎಲ್ಲಾ ಕಾರಣಗಳಿಂದಾಗಿ ಅಧಿಕಾರಿಗಳು ಮೇಲ್ಕಂಡ ವಿಚಾರವನ್ನು ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಸಚಿವರಿಗೆ ಮನದಟ್ಟು ಮಾಡುವ ಮೂಲಕ ಜನಸಾಮಾನ್ಯರ ನೋಂದಣಿ ಪ್ರಕ್ರಿಯೆಯನ್ನು ಪತ್ರ ಬರಹಗಾರರು ಸುಲಲಿತವಾಗಿ ನಡೆಸಲು ಅನುವು ಮಾಡಿಕೊಡಬೇಕು, ಪ್ರತ್ಯೇಕ ಲಾಗಿನ್ ವ್ಯವಸ್ಥೆ ಕಲ್ಪಿಸುವಂತೆ ಪ್ರತಿಭಟನೆಕಾರರು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು ಚಲೋ: ನಾಗಮೋಹನ್ ದಾಸ್ ಆಯೋಗದ ಶಿಫಾರಸ್ಸುಗಳನ್ನು ಯಥಾವತ್ತಾಗಿ ಜಾರಿಗೊಳಿಸಿ
ಪ್ರತಿಭಟನೆಯಲ್ಲಿ ಒಕ್ಕೂಟದ ಅಧ್ಯಕ್ಷ ನಿಸಾರ್ ಅಹಮದ್ ಖಾನ್, ಉಪಾಧ್ಯಕ್ಷ ಎಂ.ಎಸ್. ಧನಂಜಯ್, ಕಾರ್ಯದರ್ಶಿ ಕೆ.ಆರ್. ಉದಯ್ ಕುಮಾರ್, ಖಜಾಂಜಿ ಎಂ.ಎಸ್. ನರಸಿಂಹಮೂರ್ತಿ, ಸಂಚಾಲಕ ಎಂ. ಗಣೇಶ್, ನಿರ್ದೇಶಕರುಗಳಾದ ಕೆ.ಆರ್. ಸತ್ಯನಾರಾಯಣ್, ಎಂ.ಎನ್. ದೇವರಾಜು, ನಾಗಭೂಷಣ ಆರಾಧ್ಯ, ಮಹಾದೇವ್, ಕುಮಾರ್, ಎಸ್.ಪಣಿರಾಜ್, ಎಸ್. ಚಂದ್ರಶೇಖರ್, ಎನ್. ದಿನೇಶ್ ಕುಮಾರ್, ಎಸ್.ಎಸ್. ವೇಣು, ಜಯಲಕ್ಷ್ಮಿ ಸೇರಿದಂತೆ ಇನ್ನಿತರರು ಇದ್ದರು.





