ಮೈಸೂರು | ಪಾದಯಾತ್ರೆಗೂ ಸ್ಪಂದಿಸದ ಜಿಲ್ಲಾಡಳಿತ: ಆದಿವಾಸಿಗಳ ಹಕ್ಕುಗಳನ್ನು ಕೊಲ್ಲುತ್ತಿದೆಯೇ?

Date:

‘ಆದಿವಾಸಿ’ಗೆಳೆಂದರೆ ನೆಲಮೂಲ ವಾಸಿಗಳು ಎಂದರ್ಥ. ಆದಿ-ಮೊದಲಿಗ, ವಾಸಿ-ಸ್ಥಳೀಯ ಅಂದರೆ ಆರಂಭದಿಂದಲೂ ಈ ನೆಲದಲ್ಲಿ ನೆಲೆ ಕಂಡುಕೊಂಡಿರುವ ಸಮುದಾಯಗಳು. ಕಾಡಿನಲ್ಲಿಯೇ ಹುಟ್ಟಿ ತನ್ನ ಅಸ್ತಿತ್ವಕ್ಕಾಗಿ ದಿನೇ ದಿನೆ ಹೋರಾಡುವ ಸ್ಥಿತಿ ತಲುಪಿದ ಅತಂತ್ರ ಸಮುದಾಯ. ಇದ್ದರೂ ಇಲ್ಲದಂತಹ ಪರಿಸ್ಥಿತಿಯಲ್ಲಿ ಶೋಚನೀಯ ಬದುಕನ್ನು ಕಂಡವರು. ಗೊತ್ತು, ಗುರಿ ಇಲ್ಲದವರಂತೆ ನಡೆಸಿಕೊಳ್ಳುತ್ತ, ಇವರನ್ನು ಕೇವಲ ದುಡಿಮೆಗೆ ಗಾಣದ ಎತ್ತುಗಳಂತೆ ಕಂಡರೇ… ವಿನಃ ಮನುಷ್ಯರಂತೆ ಕಾಣಲಿಲಲ್ಲ. ಈವರೆಗೆ ಬದುಕುವ ಹಕ್ಕಿಗಾಗಿ ಬಡಿದಾಡುತ್ತಿರುವ ಆದಿವಾಸಿ ಸಮುದಾಯ 13 ದಿನಗಳ ಪಾದಯಾತ್ರೆ ನಡೆಸಿ ಬೇಡಿಕೆಗಳನ್ನು ಮುಂದಿಟ್ಟರೂ ಮೈಸೂರು ಜಿಲ್ಲಾಡಳಿತ ಯಾವುದೇ ಸ್ಪಂದನೆಯಾಗಲಿ, ಪ್ರತಿಕ್ರಿಯೆಯಾಗಲಿ ನೀಡಿಲ್ಲ.

ವಿಶೇಷವಾಗಿ, ಕೊಡಗಿನ ಆದಿವಾಸಿಗಳು ಆಧುನಿಕ ಸಮಾಜದ ನೆರಳಲ್ಲಿ ‘ಲೈನ್ ಮನೆ’ ಜೀತದಲ್ಲೇ ಜೀವನ ಸವೆಸಿ ಮಣ್ಣಾಗುತ್ತಿರುವವರು. ಕಾಡಿನಲ್ಲೇ ಹುಟ್ಟಿ ಕಾಡು ನಮ್ಮದಲ್ಲ ಎನ್ನುವಂತಾದ ಪರಿಸ್ಥಿತಿ. ‘ನಂಗ ಕಾಡ್, ನಂಗ ಜಮ್ಮಾ’ ಭೂಮಿಯ ಹಕ್ಕುಗಳಿಗೆ ಸದಾ ಮಿಡಿಯುತ್ತಿರುವ ಜೀವಗಳಿವು. ಸಂವಿಧಾನ ಕೊಟ್ಟಂತಹ ಯಾವುದೇ ಹಕ್ಕುಗಳು ಇಂದಿಗೂ ಸಿಗದಿರುವುದು, ಸ್ವಾತಂತ್ರ್ಯ ಬಂದು 75 ವರ್ಷಗಳೇ ಉರುಳಿದರೂ ಕೂಡ ನಾಗರಿಕ ಸಮಾಜಕ್ಕೆ ತೆರೆದುಕೊಳ್ಳದೆ ನಿರಂತರ ದೌರ್ಜನ್ಯಕ್ಕೊಳಗಾಗಿ, ಕನಿಷ್ಠ ಮೂಲ ಸೌಕರ್ಯವನ್ನೂ ಹೊಂದಿರದ ಸಮುದಾಯ ಆದಿವಾಸಿ ಬುಡಕಟ್ಟು ಸಮುದಾಯ.

“ಜೇನು ಕುರುಬ, ಬೆಟ್ಟ ಕುರುಬ, ಪಣಿಯ, ಎರವ, ಪಂಜಿರ ಇವರೆಲ್ಲ ನೆಲಮೂಲ ವಾಸಿಗಳು. ಎಲ್ಲಿಂದಲೋ ಬಂದವರಲ್ಲ, ಇನ್ನೆಲ್ಲಿಗೋ ಹೋದವರು ಅಲ್ಲಾ. ಇದಿಲ್ಲಿಯೇ ಹುಟ್ಟಿ, ಇಲ್ಲಿಯೇ ಮಣ್ಣಾದವರು. ಕಾಡನ್ನೇ ನಂಬಿ, ಪ್ರಾಣಿಗಳನ್ನೇ ದೈವವಾಗಿ ಕಂಡವರು. ಯಾವುದೇ ಐಷರಾಮಿ ಬದುಕಿಗೆ ಅಂಟದೆ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಅತ್ಯಂತ ಹಿಂದುಳಿದವರು. ಅಂದೇ ದುಡಿದು ಅಂದಿನ ಕೂಳು ಹೊಂದಿಸಿಕೊಳ್ಳುವ ಜನರಿವರು. ಆಳುವ ಸರ್ಕಾರಗಳು ಜನಸಂಖ್ಯೆ ಭಾಗವಾಗಿ ಲೆಕ್ಕ ಇರಿಸಿರಬಹುದೇ ಹೊರತು, ದೇಶದ ಪ್ರಜೆಯಾಗಿ, ಸಕಲರಿಗೆ ಏನೆಲ್ಲ ಸವಲತ್ತು ದಕ್ಕಿತೋ, ಅಂತಹದೊಂದು ಬದುಕು ಇಂದಿಗೂ ಸಿಗದಿರುವುದು ಶೋಚನಿಯ ಸಂಗತಿ. ಕಟ್ಟಕಡೆಯ ವ್ಯಕ್ತಿಗೂ ಘನತೆಯ ಬದುಕು ಸಿಗಬೇಕು ಎಂದು ಪುಂಖಾನುಪುಂಖವಾಗಿ ಸಾರಿಕೊಳ್ಳುವ ಸರ್ಕಾರಗಳು ಸೂರನ್ನು ಸಹ ನೀಡಲಾಗಲಿಲ್ಲ, ಶೌಚಾಲಯದ ಮಾತು ಇನ್ನೆಲ್ಲಿ”.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪ್ರಸ್ತುತದಲ್ಲಿಯೂ ತಾಟು(ಪ್ಲಾಸ್ಟಿಕ್, ಟಾರ್ಪಲ್) ಹೊದಿಕೆಯಲ್ಲಿಯೇ ಜೀವನ. ಗ್ಯಾಸ್ ಕಂಡಿಲ್ಲ, ವಿದ್ಯುತ್ ಬಂದಿಲ್ಲ, ಶೌಚಾಲಯ, ಸ್ನಾನಗೃಹ ಗೊತ್ತೇ ಇಲ್ಲ. ಇದುವೇ ಸರ್ಕಾರಗಳ ಸಾಧನೆ. ‘ಶೌಚಮುಕ್ತ ಭಾರತ’ ಅದೆಲ್ಲಿ ಜಾರಿ ಮಾಡಿದರೋ ಒಂದೂ ತಿಳಿಯದು. ‘ನಮ್ಮ ಶೌಚ ನಮ್ಮ ಹೆಮ್ಮೆ’ ಅಧಿಕಾರಿಗಳು ಪಟ್ಟಣ ಬಿಟ್ಟು ಹೊರಗೆ ಕಾಲಿಟ್ಟಿರದ ಕಾರ್ಯಕ್ರಮ. ಹೀಗಿರುವಾಗ, ʼದೇಶದ ನಾಗರಿಕ ಮನೆಯಿಲ್ಲ ಎನ್ನುವಂತಿಲ್ಲ, ಎಲ್ಲರಿಗೂ ಮನೆ ನೀಡುವುದೇ ನಮ್ಮ ಗುರಿʼ ಎಂಬುದು ಕೇಂದ್ರ ಸರ್ಕಾರದ ಸುಳ್ಳು ಭರವಸೆಗಳಲ್ಲೊಂದು. ಇದೆಲ್ಲ ಅರ್ಥವಾಗುವುದೇ ಆದಿವಾಸಿ ಜನರ ಬದುಕನ್ನು ಕಂಡಾಗ. ದೇಶದಲ್ಲಿ, ರಾಜ್ಯದಲ್ಲಿ ಯೋಜನೆಗಳು ಭೇದಭಾವ ತೋರುವಂತಿವೆ. ರಾಜ್ಯದೆಲ್ಲೆಡೆ ಅನುಷ್ಠಾನವಾಗುವ ಯೋಜನೆಗಳು ಆದಿವಾಸಿಗಳ ಕದ ತಟ್ಟದೇ ಇರುವುದು ಸೋಜಗವೇ ಸರಿ.

ಇಂತಹ ಪ್ರಹಸನ ಕಾಣುವಾಗ ದೇಶದ ರಾಷ್ಟ್ರಪತಿಗಳು ಆದಿವಾಸಿ, ಇದಕ್ಕೊಂದು ಸಚಿವಾಲಯ ಯಾವ ಪುರುಷಾರ್ಥಕೆ ಎನಿಸಿರಲಾರದ್ದೇನೋ. ಅರಣ್ಯ, ವನ್ಯಜೀವಿ ಸಂರಕ್ಷಣೆ ಹೆಸರಿನಲ್ಲಿ ಆದಿವಾಸಿ ಬದುಕನ್ನು ಕಸಿಯುತ್ತಿರುವುದು ಬಾಲಿಶದ ಕೆಲಸ. ಅರಣ್ಯ ಹಕ್ಕು ಹೊಂದಿದ ಸಮುದಾಯ, ಅರಣ್ಯದಾಚೆ ರೋಧಿಸುತ್ತಿದೆ. ಸರ್ಕಾರಗಳು ಪ್ರಾಣಿಗೆ ಕೊಟ್ಟಿರುವ ಮಹತ್ವ ಆದಿವಾಸಿ ಜೀವಕ್ಕೆ ನೀಡಿಲ್ಲ. ಒಂದು ಕಾಡು ಪ್ರಾಣಿಯನ್ನು ಕೊಂದರೆ ಕಠಿಣ ಶಿಕ್ಷೆಯಿದೆ, ಹಾಗೇ, ಸತ್ತರೆ ಅದಕ್ಕೆ ಕಾನೂನಾತ್ಮಕ ವಿಧಿವಿಧಾನವಿದೆ. ಅದೇ ಆದಿವಾಸಿ ಮನುಷ್ಯ ಸತ್ತರೂ ಸರಿ, ಬದುಕಿದ್ದರೂ ಸರಿ ನೋಡಲು ದಿಕ್ಕಿಲ್ಲದ ಪರಿಸ್ಥಿತಿ ನಿರ್ಮಾಣವಾಗಿರುವುದು ಸಾಮಾಜಿಕ ನ್ಯಾಯದ ವೈಫಲ್ಯ. ಇದರಲ್ಲಿ ಕಾನೂನು ತೊಡಕುಗಳು ಇರುವುದು ವಾಸ್ತವ.

ಇಂತಹ ಹೊತ್ತಿನಲ್ಲಿ ಗ್ರಾಮ ಸಭೆಗಳ ಒಕ್ಕೂಟವಾದ ನಾಗರಹೊಳೆ ಆದಿವಾಸಿ ಜಮ್ಮ-ಪಾಳೆ ಹಕ್ಕು ಸ್ಥಾಪನಾ ಸಮಿತಿ ದಿನಾಂಕ 2025ರ ಡಿಸೆಂಬರ್‌ 21ರಂದು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ತಿತಿಮತಿ ವ್ಯಾಪ್ತಿಯ ಆಯಿರಸುಳಿ ಹಾಡಿಯಿಂದ ಆದಿವಾಸಿ ಸಮುದಾಯ ಸಾಂಪ್ರದಾಯಿಕ ಗಡಿ, ಜಮ್ಮಗಳ ಮೇಲೆ ನೇರವಾಗಿ ಬೀರುತ್ತಿರುವ, ಅದರಿಂದಾಗುತ್ತಿರುವ ಗಂಭೀರ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಪಾದಯಾತ್ರೆ ಆರಂಭಿಸಿತ್ತು. 13 ದಿನಗಳ ಕಾಲ ಕಾಲ್ನಡಿಗೆಯಲ್ಲಿ ಸಾಗಿ, ಹತ್ತಾರು ಹಾಡಿಗಳಲ್ಲಿ ಗ್ರಾಮ ಸಭೆ ನಡೆಸಿ, ನಿರ್ಣಯ ಕೈಗೊಂಡು 2026ರ ಜನವರಿ 2ರಂದು ಮೈಸೂರು ಜಿಲ್ಲೆಯ ಹೆಗ್ಗಡದೇವನಕೊಟೆ ತಾಲೂಕಿನ ಕೆರೆಹಾಡಿ ಸಮೀಪದ ಉದ್ಬೂರು ಚೆಕ್ ಪೋಸ್ಟ್ ಬಳಿ ಸೇರಿ ಅಪರ ಜಿಲ್ಲಾಧಿಕಾರಿ ಡಾ. ಶಿವರಾಜ್ ಅವರಿಗೆ ಅರಣ್ಯ ಹಕ್ಕುಗಳ ಕಾಯ್ದೆ 2006ರ ಕುರಿತು ಮನವಿ ಸಲ್ಲಿಸಿ ಸರ್ಕಾರಕ್ಕೆ ಕಳುಹಿಸುವಂತೆ ಒತ್ತಾಯಿಸಿದ್ದರು.

ಆದರೆ, ಇದೀಗ ಒಂದೂವರೆ ತಿಂಗಳು ಕಳೆದರೂ ಕೂಡ ಜಿಲ್ಲಾಡಳಿತದಿಂದ ಯಾವುದೇ ಸ್ಪಂದನೆ ಇಲ್ಲ. ಜಾಣ ಕುರುಡು ಪ್ರದರ್ಶಿಸುತ್ತಿರುವ ಜಿಲ್ಲಾಡಳಿತ, ಸರ್ಕಾರ ಮೌನವಹಿಸಿವೆ, ಆದಿವಾಸಿಗಳ ವಿಚಾರವಾಗಿ ತುಟಿ ಬಿಚ್ಚಿಲ್ಲ. ಅದೇ ‘ಅಂತಾರಾಷ್ಟ್ರೀಯ ಬಿಗ್ ಕ್ಯಾಟ್ ಅಲಯನ್ಸ್ ಶೃಂಗಸಭೆ’ ನಾಗರಹೊಳೆ-ಬಂಡೀಪುರದಲ್ಲಿ ಇತ್ತೀಚಿಗೆ ತರಾತುರಿಯಲ್ಲಿ ನಡೆಸಲಾಗಿದೆ. ವಿದೇಶಿ ಪ್ರತಿನಿಧಿಗಳನ್ನು ಒಳಗೊಂಡಂತೆ, ವ್ಯವಸ್ಥಿತವಾಗಿ ಕೇಂದ್ರ ಸರ್ಕಾರದ ಬಜೆಟ್‌ನಲ್ಲಿಯೇ ಘೋಷಿಸಿ, ಕೇವಲ ವಾರ ಕಳೆಯುವುದರೊಳಗೆ ನಡೆಸಿದ್ದರ ಹಿಂದೆ ‘ಅರಣ್ಯ ಖಾಸಗೀಕರಣ’ ಹಾಗೂ ‘ಆದಿವಾಸಿ ಸಮುದಾಯಗಳ ಒಕ್ಕಲೆಬ್ಬಿಸುವ ಹುನ್ನಾರ’ ನಡೆದಿರಬಹುದೆಂಬ ಅನುಮಾನಕ್ಕೆ ತೆರೆ ಬಿದ್ದಂತಾಗಿದ್ದು, ಆದಿವಾಸಿಗಳ ಮನವಿಗೆ ಸ್ಪಂದಿಸದಿರುವ ಕಾರಣ ಬಹಿರಂಗವಾಗಿದೆ.

2006ರ ಅರಣ್ಯ ಹಕ್ಕುಗಳ ಕಾಯ್ದೆ (FRA ACT) ಈವರೆಗೆ ಜಾರಿಯಾಗಲಿಲ್ಲ. ಹುಲಿ ಸಂರಕ್ಷಣಾ ಅಧಿಕಾರಿಗಳು ಆದಿವಾಸಿ ಸಮುದಾಯಗಳ ಹಕ್ಕು, ವಾಸದ ಹಕ್ಕು(PVTG) ಹಕ್ಕುಗಳನ್ನು ನೀಡಿಲ್ಲ. ಎಫ್‌ಆರ್‌ಎ ಕಾಯ್ದೆಯ ಕಲಂ 5ರ ಅಡಿಯಲ್ಲಿ ಮಾನ್ಯತೆಗಳಿವೆ, ಪಾಲನೆಯಾಗಿಲ್ಲ. ಪೆಸಾ ಕಾಯ್ದೆ 1996ರ ಪ್ರಕಾರ ರಾಜ್ಯದಲ್ಲಿ ಅನುಷ್ಠಾನವಾಗಬೇಕಿದ್ದ ಅನುಸೂಚಿತ ಪ್ರದೇಶಗಳನ್ನು ಘೋಷಿಸುವಲ್ಲಿ ಸರ್ಕಾರ ಯಾವುದೇ ತರಹದ ತೀರ್ಮಾನ ಕೈಗೊಳ್ಳುತ್ತಿಲ್ಲ. ಇಂತಹ ನಡೆ ಸಹಜವಾಗಿ ಆತಂಕಕಾರಿಯಾಗಿದೆ.

ಇದರ ನಡುವೆ ಇಲಾಖೆ, ಸರ್ಕಾರವಷ್ಟೇ ಅಲ್ಲದೇ ಕೂರ್ಗ್ ವೈಲ್ಡ್ ಲೈಫ್ ಸೊಸೈಟಿ(CWS), ಸೆಂಟರ್ ಫಾರ್ ವೈಲ್ಡ್ ಲೈಫ್ ಸ್ಟಡೀಸ್(CWS), ವೈಲ್ಡ್ ಲೈಫ್ ಟ್ರಸ್ಟ್ ಆಫ್ ಇಂಡಿಯಾ(WTI), ವೈಲ್ಡ್ ಲೈಫ್ ಕನ್ಸರ್ವೇಷನ್ ಸೊಸೈಟಿ(WCS) ಸೇರಿದಂತೆ ಇತರೆ ವನ್ಯಜೀವಿ ಸಂರಕ್ಷಣಾ ಸಂಘಟನೆಗಳ ಪ್ರಭಾವಕ್ಕೆ ಒಳಗಾಗುತ್ತಿರುವುದು, ಇವರ ಮೂಲಕ ದೌರ್ಜನ್ಯ ಎಲ್ಲೆ ಮೀರಿದ್ದಲ್ಲದೆ, ಆದಿವಾಸಿಗಳ ಎತ್ತಂಗಡಿಗೆ ನಡೆಸುತ್ತಿರುವ ಹುನ್ನಾರಗಳು ಈಗ ಜಗಜ್ಜಾಹೀರಾಗಿವೆ.

ನಾಗರಹೊಳೆ ಆದಿವಾಸಿ ಜಮ್ಮ-ಪಾಳೆ ಹಕ್ಕು ಸ್ಥಾಪನಾ ಸಮಿತಿ ಹಾಗೂ ನಾಗರಹೊಳೆ ಗ್ರಾಮ ಸಭೆಗಳ ಒಕ್ಕೂಟದ ಅಧ್ಯಕ್ಷ ಜೆ ಕೆ ತಿಮ್ಮ ಅವರು ಈ ದಿನ.ಕಾಮ್ ಜತೆಗೆ ಮಾತನಾಡಿ, “ಪಾದಯಾತ್ರೆ ಸಂದರ್ಭದಲ್ಲಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಹಾಗೂ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ ಅಕ್ರಮ ಘೋಷಣೆಗಳಾಗಿದ್ದು, ಡಿಸೆಂಬರ್ 20ನ್ನು ‘ಹುಲಿ ಸಂರಕ್ಷಣೆಯ ಹೆಸರಿನಲ್ಲಿ ಪಾರಂಪರಿಕ ಭೂಮಿಗಳ ಕಳ್ಳತನದ ದಿನ’ವೆಂದು ಘೋಷಿಸಲು ಗ್ರಾಮ ಸಭೆಯಲ್ಲಿ ನಿರ್ಣಯಿಸಿದ್ದೇವೆ. ಏಕೆಂದರೆ 2007ರಲ್ಲಿ ಇದೇ ದಿನ ಏಕಾಏಕಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶವೆಂದು ಅಕ್ರಮವಾಗಿ ಘೋಷಿಸಲಾಯಿತು. ಸಂರಕ್ಷಣೆಯ ಹೆಸರಿನಲ್ಲಿ ಆದಿವಾಸಿಗಳ ಭೂಮಿ ಮತ್ತು ಅರಣ್ಯ ಅಕ್ರಮತೆಯನ್ನು ಪುನರೆಚ್ಚರಿಸಲು ನಿರ್ಧರಿಸಿ ಆಯಿರಸುಳಿ ಹಾಡಿ, ಚೀಣಿ ಹಡ್ಲು ಹಾಡಿ, ಜಂಗಲ್ ಹಾಡಿ ಸೇರಿದಂತೆ ಹಲವು ಗ್ರಾಮ ಸಭೆಗಳಲ್ಲಿ ನಿರ್ಣಯ ಅಂಗೀಕರಿಸಲಾಗಿದೆ” ಎಂದು ಮಾಹಿತಿ ಹಂಚಿಕೊಂಡರು.

ಜೆ.ಎ. ಶಿವು ಮಾತನಾಡಿ, “ಕಾನೂನಿನ ಯಥಾವಿಧಿ ಪ್ರಕ್ರಿಯೆ ಹಾಗೂ ಅರಣ್ಯ ಹಕ್ಕು ಕಾಯ್ದೆ 2006 ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಪ್ರಕಾರ ಅಗತ್ಯ ಒಪ್ಪಿಗೆಯನ್ನು ಪಾಲನೆ ಮಾಡದೆ, ರಾಷ್ಟ್ರೀಯ ಉದ್ಯಾನವನ ಮತ್ತು ಹುಲಿ ಸಂರಕ್ಷಿತ ಪ್ರದೇಶಗಳನ್ನು ಘೋಷಿಸುವ ಮೂಲಕ ಸರ್ಕಾರ ಐತಿಹಾಸಿಕ ಅನ್ಯಾಯ ಎಸಗಿದೆ. ಅರಣ್ಯ ಹಾಗೂ ವನ್ಯಜೀವಿಗಳನ್ನು ಆದಿವಾಸಿಗಳು ಸಂಸ್ಕಾರದ ಭಾಗವಾಗಿ ದೈವಗಳಾಗಿ ನಂಬಿದ್ದು, ಅತ್ಯಂತ ಗೌರವದಿಂದ ಪೂಜಿಸಲ್ಪಡುತ್ತೇವೆ. ಸಾಂಪ್ರದಾಯಿಕ ಆಚರಣೆಗಳಲ್ಲಿ ಅರಣ್ಯವೇ ಪ್ರಧಾನ. ಹೀಗಿರುವಾಗ, ಆದಿವಾಸಿಗಳು ಎಂದಿಗೂ ಅರಣ್ಯಕ್ಕೆ ಮಾರಕವಾಗಿಲ್ಲ. ಅರಣ್ಯವನ್ನು ಉಳಿಸಿದ್ದೆ ಆದಿವಾಸಿ ಸಮುದಾಯ. ವನ್ಯಜೀವಿಗಳು ಭಯವಿರದೆ ಓಡಾಟ ನಡೆಸುತ್ತವೆ ಎಂದರೆ ಹಾಡಿಗಳಲ್ಲಿ ವಾಸಿಸುವ ಆದಿವಾಸಿಗಳ ದೈರ್ಯದಿಂದ. ಇದುವರೆಗೂ ಯಾವುದೇ ವನ್ಯಜೀವಿ-ಮಾನವ ಸಂಘರ್ಷ ನಮ್ಮಗಳ ನಡುವೆ ಏರ್ಪಟ್ಟಿಲ್ಲ. ನಮ್ಮಗಳ ಜೊತೆ ಸಹ ಜೀವನ ನಡೆಸುತ್ತಿವೆ. ಇಂತಹದ್ದರಲ್ಲಿ, ಸರ್ಕಾರಗಳು ಇನ್ನಿಲ್ಲದ ಕಾಯ್ದೆ ತರುವ ಮೂಲಕ ಆದಿವಾಸಿ ಸಮುದಾಯಗಳನ್ನು ಒಕ್ಕಲೆಬ್ಬಿಸಲು ಹೊರಟಿವೆ”.

“ಇದಷ್ಟೇ ಅಲ್ಲದೆ ಶೃಂಗಸಭೆ ನಡೆಸುವ ಮೂಲಕ ಅರಣ್ಯವನ್ನು ಖಾಸಗೀಕರಣಗೊಳಿಸಿ, ಆದಿವಾಸಿಗಳು ಅರಣ್ಯದೊಳಗೆ ಪ್ರವೇಶ ಮಾಡದಂತೆ ಹುನ್ನಾರ ನಡೆಸಲಾಗಿದೆ. ಜತೆಗೆ ವಿದೇಶಿ ಹಣ ಸಂಗ್ರಹದಿಂದ ಕಾಡನ್ನು ನಾಶ ಮಾಡುವುದೇ ಉದ್ದೇಶವಾಗಿರುವಂತೆ ಕಂಡುಬರುತ್ತಿದೆ. ಇಂತಹ ಹುನ್ನಾರಗಳಿಗೆಲ್ಲ ಅವಕಾಶ ಮಾಡಿಕೊಡುವುದಿಲ್ಲ. ಪಾದಯಾತ್ರೆ ನಡೆಸಿ ಮನವಿ ಸಲ್ಲಿಸಿದ ಬಳಿಕ ಜಿಲ್ಲಾಡಳಿತ ಪತ್ರ ವ್ಯವಹಾರ ನಡೆಸಿದೆಯೇ ಹೊರತು ಸಂಬಂಧವೇ ಇರದ ಐಟಿಡಿಪಿ ಹಾಗೂ ಅರಣ್ಯ ಇಲಾಖೆಯನ್ನು ಮಧ್ಯಕ್ಕೆ ತಂದು ಕಾಲಹರಣ ಮಾಡುವುದರ ಜತೆಗೆ, ಆದಿವಾಸಿಗಳ ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳ್ಳುವಂತೆ ಮಾಡುತ್ತಿದ್ದಾರೆ. ಕೊಡಗು ಜಿಲ್ಲಾಡಳಿತ ಏನೂ ಗೊತ್ತಿರದ ರೀತಿ ವರ್ತಿಸುತ್ತಿದೆ. ಇದು ಹೀಗೇ ಮುಂದುವರೆದರೆ ಮುಂಬರುವ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ಸಂಘಟಿಸಿ ಬೀದಿಗಿಳಿಯಬೇಕಾಗುತ್ತದೆ” ಎಂದು ಎಚ್ಚರಿಸಿದರು.

ಚಂದನಕೆರೆ ಹಾಡಿಯ ಪಿ ವಿ ರಮೇಶ್ ಮಾತನಾಡಿ, “ಅರಣ್ಯದಿಂದ ಹೊರ ಹಾಕಿ ನಲವತ್ತು ವರ್ಷಗಳೇ ಕಳೆದಿವೆ. ಅರಣ್ಯ ಸಂರಕ್ಷಣೆ ಹೆಸರಲ್ಲಿ ಹೊರ ಹಾಕಿದರೇ ಹೊರತು, ಯಾವುದೇ ಸವಲತ್ತು ಕಲ್ಪಿಸಿಕೊಡಲಿಲ್ಲ. ಪುನರ್ವಸತಿ ಹೆಸರನ್ನು ಹೇಳುತ್ತಾರೆ. ಆದರೆ ಸಂತ್ರಸ್ತರನ್ನು ಎಷ್ಟು ಕೆಟ್ಟದಾಗಿ ನಡೆಸಿಕೊಳ್ಳುತ್ತಾರೆಂದರೆ ಎಲ್ಲದಕ್ಕೂ ಬಲವಂತ ಮಾಡುತ್ತಾರೆ. ಒಪ್ಪಿಗೆಯಿಂದ ಯಾವುದೂ ನಡೆಯುವುದಿಲ್ಲ. ನಮಗೆ ಭಯ ಹುಟ್ಟಿಸಿ ಕಾಡಿನಿಂದ ಹೊರ ಹಾಕುತಾರೆ, ಇರಲು ಮನೆ, ಜಾಗ, ಭೂಮಿ ಏನೆಂದರೆ ಏನೂ ಕೊಡುವುದಿಲ್ಲ. ಮನೆ ಕೊಡುತ್ತಾರೆ ಅದರಲ್ಲಿ ಏನೂ ಇರುವುದಿಲ್ಲ, ವಾಸಕ್ಕೆ ಯೋಗ್ಯವಾಗಿಯೂ ಇರುವುದಿಲ್ಲ. ಎಲ್ಲದರಲ್ಲೂ ಮೋಸ ಮಾಡಿರುವ ಆಡಳಿತ ವರ್ಗ ನಮ್ಮನ್ನು ಮನುಷ್ಯರಂತೆ ಕಾಣುವುದೇ ಇಲ್ಲ. ಮತ ಕೇಳುವ ಪ್ರಭುತ್ವವಾದರೂ ನಮಗೆ ಸಿಗಬೇಕಾದ ಸವಲತ್ತು ತಲುಪಿಸಲಿಲ್ಲ, ನಮ್ಮ ಕಡೆ ತಿರುಗಿಯೂ ನೋಡುವುದಿಲ್ಲ. ನಾವೇನಾದರೂ ಹೋದರೆ ಹತ್ತಿರಕ್ಕೂ ಸೇರಿಸುವುದಿಲ್ಲ, ಮಾತಾಡುವುದೂ ಇಲ್ಲ. ನಮ್ಮನ್ನು ಕಂಡರೆ ಕೀಳುಮಟ್ಟದಲ್ಲಿ ಕಾಣುತ್ತಾರೆ” ಎಂದು ಬೇಸರ ವ್ಯಕ್ತಪಡಿಸಿದರು.

ಕೋಡಂಗಿ ಹಾಡಿಯ ಜೆ ಕೆ ಜಯ ಮಾತನಾಡಿ, “ಕಾಲ್ನಡಿಗೆ ಮೂಲಕ ತೆರಳಿ ಮನವಿ ನೀಡಿದ್ದೇವೆ. ಆದರೆ, ಸಂಬಂಧಪಟ್ಟ ಇಲಾಖೆ ಈವರೆಗೆ ನಮ್ಮ ಅಹವಾಲನ್ನು ಆಲಿಸಿ ಸ್ಪಂದಿಸಿಲ್ಲ. ಈವರೆಗೆ ಯಾವುದೇ ವ್ಯವಸ್ಥೆ ಮಾಡಿಲ್ಲ. ಇಷ್ಟೆಲ್ಲ ತೊಂದರೆ ಇದ್ದರೂ ಸರ್ಕಾರ, ಜಿಲ್ಲಾಡಳಿತಕ್ಕೆ ತಿಳಿಯದೆ ಇರುವಂತಿರುವುದು ನಾಟಕೀಯವಾಗಿದೆ. ಮತ ಬೇಕಂದಾಗ ಕಾಲಿಗೆ ಬೀಳುತ್ತಾರೆ. ಗೆದ್ದ ಮೇಲೆ ಜುಟ್ಟು ಹಿಡೀತಾರೆ. ನಾವು ಬೇಡವೆನ್ನುವುದಾದರೆ ಆದಿವಾಸಿ ಸಮುದಾಯವರನ್ನು ಕೊಂದು ಬಿಡಿ. ನಿಮಗೆ ತಲೆ ನೋವೇ ಇರುವುದಿಲ್ಲ. ಕೇಳಲು ನಾವೂ ಇರುವುದಿಲ್ಲ. ಸರ್ಕಾರಗಳು ನಮಗೆ ಸೌಲಭ್ಯವನ್ನು ಕೊಡುವಂತೆಯೂ ಇರುವುದಿಲ್ಲ” ಎಂದು ನೋವು ತೋಡಿಕೊಂಡರು.

ಗೋಳೂರು ಹಾಡಿಯ ಮಂಜುಳ ಮಾತನಾಡಿ, “ಇವತ್ತಿಗೂ ಶೆಡ್‌ನಲ್ಲಿ ಬದುಕು ನಡೆಸುತ್ತಿದ್ದೇವೆ. ನೂರಾರು ವರ್ಷಗಳಿಂದ ಇಲ್ಲಿಯೇ ಹುಟ್ಟಿ ಬೆಳೆದ ನಮಗೆ ಅರಣ್ಯ ಇಲಾಖೆಯವರಿಂದ ನಿತ್ಯವೂ ಕಿರುಕುಳವಾಗುತ್ತಿದೆ. ವ್ಯವಸಾಯ ಮಾಡಬೇಕು, ಏನಾದರೂ ಟ್ರ್ಯಾಕ್ಟರ್‌ನಲ್ಲಿ ಉಳುಮೆ ಮಾಡಿಸಬೇಕು, ಏನೇ ಮಾಡಬೇಕೆಂದರೂ ಪರ್ಮಿಷನ್ ತೆಗೆದುಕೊಳ್ಳಬೇಕು. ಇಲ್ಲಾಂದ್ರೆ ಏನೂ ಕೆಲಸ ಮಾಡಲು ಬಿಡುವುದಿಲ್ಲ. ಕೆಲವರಿಗೆ ಹಕ್ಕುಪತ್ರ ಸಿಕ್ಕಿದೆ. ಇನ್ನೂ ಕೆಲವರಿಗೆ ಅದೂ ಇಲ್ಲ. ಒಂದೊಂದು ಗುಂಟೆ ಜಾಗ. ಅದರಲ್ಲಿ ಮನೆ ಮಾಡೋದ?, ಶೌಚಾಲಯ ಮಾಡೋದ?, ಇಲ್ಲ ವ್ಯವಸಾಯ ಮಾಡೋದ?. ನಮಗೆ ಭೂಮಿನೇ ಇಲ್ಲ. ಈವರೆಗೆ ವ್ಯವಸಾಯ ಮಾಡಿ ಜೀವನ ಮಾಡೋಕೆ ಭೂಮಿ ಕೊಟ್ಟಿಲ್ಲ. ಇನ್ನು ಇಷ್ಟ ಬಂದಂತೆ ಹಕ್ಕುಪತ್ರ ಕೊಟ್ಟಿದ್ದಾರೆ. ಗಂಡನ ಹೆಸರು ಇದ್ದರೆ, ಹೆಂಡತಿಯದು ಇಲ್ಲ. ಹೆಂಡತಿಯದ್ದು ಇದ್ದರೆ ಗಂಡನ ಹೆಸರೇ ಇಲ್ಲ. ಇನ್ನ ಕೆಲವರ ಪರಿಸ್ಥಿತಿಯಂತು ಯಾರ್ ಯಾರದ್ದೋ ಹೆಸರು ಇದೆ. ಹೀಗೆಲ್ಲ ಅವಾಂತರ ಮಾಡಿಟ್ಟಿದ್ದಾರೆ. ಕೇಳಿದರೆ ಅಧಿಕಾರಿಗಳು ಸ್ಪಂದಿಸೋದಿಲ್ಲ, ಅಲ್ಲೋಗಿ, ಇಲ್ಲೋಗಿ ಅವರ ಕೇಳಿ, ಇವರ ಕೇಳಿ ಹೀಗೆ ಸತಾಯಿಸುತ್ತಾರೆ” ಎಂದು ಅಳಲು ತೋಡಿಕೊಂಡರು.

ಮಾನಂದವಾಡಿ ಹಾಡಿಯ ಪ್ರೇಮ ಮಾತನಾಡಿ, “ಪಾದಯಾತ್ರೆ ಮಾಡಿದ್ದೀವಿ, ಮನವಿ ಕೊಟ್ಟಿದ್ದೀವಿ. ಈವರೆಗೆ ಏನೂ ಉತ್ತರ ಕೊಟ್ಟಿಲ್ಲ. ನಮಗೆ ಮನೆ, ಮೂಲಸೌಕರ್ಯ ಸಿಕ್ಕಿಲ್ಲ. ಇಷ್ಟು ವರ್ಷಕ್ಕೆ ಇದೀಗ ಕರೆಂಟ್ ಬಂದಿದೆ. ಈ ಸೌಲಭ್ಯಗಳು ಎಲ್ಲರಿಗೂ ದಕ್ಕಿಲ್ಲ. ಮತ ಬೇಕು ನಾವು ಬೇಡ, ನಮ್ಮನ್ನೆಲ್ಲ ಲೆಕ್ಕಕ್ಕೆ ಇಟ್ಟಿಲ್ಲ, ಬೇಕಾಬಿಟ್ಟಿ ನೋಡ್ತಾರೆ. ಅದೇ ಬೇರೆ ಸಮುದಾಯದವರನ್ನೂ ಹೀಗೇ ನೋಡ್ತಾರ? ಅವರ ಕೆಲಸ ಅಂದರೆ ಹೋಗ್ತಾರೆ. ಅದೇ ನಮ್ಮ ಕೆಲಸ ಅಂದ್ರೆ ಅವರಿಗೆಲ್ಲ ಉದಾಸೀನ. ಈಗಲಾದರೂ ನಮ್ಮ ಕಷ್ಟ ತಿಳಿದು ನಮ್ಮ ನೆರವಿಗೆ ಧಾವಿಸಬೇಕು” ಎಂದು ಮನವಿ ಮಾಡಿದರು.

ನಾಣಚ್ಚಿ ಗದ್ದೆ ಹಾಡಿ ರಮೇಶ್ ಮಾತನಾಡಿ, “ಪಾದಯಾತ್ರೆ ಮೂಲಕ ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಈವರೆಗೆ ಸ್ಪಂದನೆ ಇಲ್ಲ, ತೀರಾ ನಿರ್ಲಕ್ಷ್ಯ. ಬುಡಕಟ್ಟು ಸಮುದಾಯಗಳನ್ನ ಕಡೆಗಣಿಸಿ 43 ಹಾಡಿಗಳನ್ನು ಒಕ್ಕಲೆಬ್ಬಿಸುವ ಹುನ್ನಾರದಲ್ಲಿ ನೇರವಾಗಿ ಸರ್ಕಾರವೇ ಪ್ರಮುಖ ಪಾತ್ರ ವಹಿಸಿದಂತಿದೆ. ನಮ್ಮ ಸಂಪ್ರದಾಯ, ಅಸ್ತಿತ್ವ ಉಳಿಸಿಕೊಳ್ಳಲು ಹೋರಾಟಕ್ಕೆ ಮುಂದಾಗಬೇಕಿದೆ. ಯಾಕಂದರೆ ಕಾಡನ್ನು ಯಾರೂ ಬೆಳೆಸಿಲ್ಲ, ಯಾರೂ ಉಳಿಸಿಲ್ಲ. ಅರಣ್ಯವನ್ನು ಕಾಪಾಡಿಕೊಂಡು ಬಂದಿರುವುದು ಆದಿವಾಸಿಗಳು ಮಾತ್ರ. ಈಗ ಅರಣ್ಯ ಸಂರಕ್ಷಕರು ಅಂರ ಬರುತ್ತಾರಲ್ಲ, ಇವರೆಲ್ಲ ಇಷ್ಟು ದಿನ ಎಲ್ಲಿ ಹೋಗಿದ್ರು. ಇವರೆಲ್ಲ ಗಿಡ ನೆಟ್ಟು, ನೀರು ಕೊಟ್ಟು ಬೆಳೆಸಿದವರ” ಎಂದು ಗುಡುಗಿದರು.

“ಸ್ಥಳೀಯವಾಗಿ ಅಧಿಕಾರಿಗಳಾದರೂ ಜವಾಬ್ದಾರಿ ವಹಿಸಬೇಕಿತ್ತು. ಆದಿವಾಸಿ ಸಮುದಾಯಗಳ ಸಂಪ್ರದಾಯ ನಶಿಸಿ ಹೋಗುತ್ತಿದೆ, ಇದನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮಾನವೀಯತೆ ಮೆರೆಯಬೇಕಿತ್ತು. ಆದರೆ, ಪರಿಸ್ಥಿತಿ ಹಾಗಿಲ್ಲ. ಕಾಡನ್ನು ಉಳಿಸುವ, ಬೆಳೆಸುವ ಮಾತನಾಡುವ ಜನರಿಗೆ ಕಾಡಿನ ಅರಿವೇ ಇಲ್ಲ. ಕಾಡಿನ ಪರಿಕಲ್ಪನೆ ಅರಿಯದವರೆಲ್ಲ ಕಾಡಿನ ಸಂರಕ್ಷಕರು. ಇಂಥವರಿಂದಲೇ ಕಾಡಿನ ನಾಶವಾಗುತ್ತಿರುವುದು. ಕಾಡಿನ ಹೆಸರು ಹೇಳಿಕೊಂಡು ದುಡ್ಡು ಮಾಡಿ ಬಂಗಲೆ ಕಟ್ಟಿಕೊಂಡು ಬಾಳುತ್ತಿದ್ದಾರೆ. ನಮ್ಮಗಳಿಗೆ ಕಾಡೇ ಮನೆ, ನಮ್ಮಲ್ಲಿ ಬಂಗಲೆ ಹೋಗಲಿ, ಇರೋಕೆ ಒಂದು ಸೂರು ಕೂಡ ಇಲ್ಲ. ನೀವೇ ಹೇಳಿ ಯಾರು ಕಾಡನ್ನು ರಕ್ಷಣೆ ಮಾಡುತ್ತಿರೋರು? ಎಲ್ಲಿಂದಲೋ ಬರೋದು ಆದಿವಾಸಿಗಳ ಅಸ್ತಿತ್ವಕ್ಕೆ ಕೈ ಹಾಕೋದು ಇದ್ಯಾವ ಸೀಮೆ ನ್ಯಾಯ” ಎಂದು ಕಿಡಿಕಾರಿದರು.

“ಇಲಾಖೆ, ಸರ್ಕಾರ ಕೇಳಿದ್ರೆ ʼಮೊಬೈಲ್ ರಿಪೇರಿ ಮಾಡಿ, ಗಾರೆ ಕೆಲಸ ಮಾಡಿ ಅದು ಇದುʼ ಅಂತೆಲ್ಲ ಹೇಳ್ತಾರೆ. ಅದೆಲ್ಲ ನಮಗೆ ಗೊತ್ತೇ ಇಲ್ಲ. ನಮಗೆ ಕಾಡು ಬಿಟ್ಟರೆ, ನಾಡನ್ನು ಕಂಡವರಲ್ಲ. ನಾವುಗಳು ಗೆಡ್ಡೆ ಗೆಣಸು, ಜೇನು, ಸೀಗೆಕಾಯಿ, ಅಣಬೆ, ನೆಲ್ಲಿಕಾಯಿ ಸೇರಿದಂತೆ ಕಿರು ಉತ್ಪನ್ನ ತೆಗಿತೀವಿ ನಮಗೆ ಮಾರುಕಟ್ಟೆ ಕಲ್ಪಿಸಿ, ಕೃತಕವಾಗಿ ಬೆಳೆಸಿ ಅಣಬೆ ತಿನ್ನೋದಿಕ್ಕಿಂತ ಸಹಜವಾಗಿ ಕಾಡಿನಲ್ಲಿ ಬೆಳೆಯೋದನ್ನ ಕೊಡ್ತೀವಿ. ಅದನ್ನೆಲ್ಲ ನೀವು ಮಾಡಲ್ಲ. ಯಾಕಂದ್ರೆ ನಿಮಗೆ ಮುಖ್ಯವಾಗಿ ಬೇಕಿರೋದು ಕಾರ್ಪೋರೆಟ್ ಕುಳಗಳು. ನಮಗೆ ವಿದ್ಯೆ ಇಲ್ಲ ಅನ್ನೋ ಕಾರಣಕ್ಕೆ ಇಷ್ಟೆಲ್ಲ ಮೋಸ ಮಾಡುತ್ತಿದ್ದೀರ” ಎಂದು ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ವಿಶೇಷ ಸುದ್ದಿ ಓದಿದ್ದೀರಾ? ಅಂತಾರಾಷ್ಟ್ರೀಯ ಬಿಗ್ ಕ್ಯಾಟ್ ಅಲಯನ್ಸ್ ಶೃಂಗಸಭೆ ನಾಗರಹೊಳೆ-ಬಂಡೀಪುರದಲ್ಲಿ : ಹಿಂದಿರುವ ಹುನ್ನಾರವೇನು?

“ಆದಿವಾಸಿಗಳು ಇರುವ ಜಾಗದಲ್ಲಿ ಅರಣ್ಯ ನಾಶವಾಗಿದೆ, ವನ್ಯಜೀವಿಗಳಿಗೆ ತೊಂದ್ರೆಯಾಗಿದೆ ಅಂದರೆ ತೋರಿಸಿ, ನಾವು ಹೊರಗೆ ಹೋಗ್ತಿವಿ. ಲೂಟಿ ಹೊಡಿಯೋರು, ಕಾಡಿನ ಹೆಸರಲ್ಲಿ ದುಡ್ಡು ಮಾಡೋರು ನೀವುಗಳು. ಇದಕ್ಕೆಲ್ಲ ಸರ್ಕಾರ, ಇಲಾಖೆ ಕುಮ್ಮಕ್ಕು ಇದೆ. ಅದನ್ನು ಸರಿಪಡಿಸಿಕೊಳ್ಳೋದು ಬಿಟ್ಟು ಮೂಲ ನಿವಾಸಿಗಳ ಅಸ್ತಿತ್ವ ತೆಗೆಯೋಕೆ ನಿಂತಿದ್ದೀರಿ. ಇದನ್ನೆಲ್ಲ ಬಿಟ್ಟು ಕಾಡಿನ ಮೇಲೆ ಕಾಳಜಿ ಇದ್ದರೆ ಆದಿವಾಸಿಗಳನ್ನು ತಮ್ಮ ಪಾಡಿಗೆ ಬದುಕಲು ಬಿಡಿ, ಅರಣ್ಯ ಕೂಡ ಸುರಕ್ಷಿತ, ಪ್ರಾಣಿಗಳು ಸುರಕ್ಷಿತವಾಗಿರುತ್ತವೆ. ವಿದೇಶಿಗರು, ಅಧಿಕಾರಿಗಳು, ನಿಮ್ಮ ಸರ್ಕಾರ ಅರಣ್ಯವನ್ನು ಕಾಪಾಡುವುದಿಲ್ಲ, ನಾವುಗಳೇ ಕಾಪಾಡಬೇಕು” ಎಂದು ಕಿಡಿಕಾರಿದರು.

ಆದಿವಾಸಿ ಸಮುದಾಯ ತಮ್ಮ ಅಸ್ತಿತ್ವಕ್ಕಾಗಿ, ತಮ್ಮ ಹಕ್ಕುಗಳನ್ನು ಮುಂದಿರಿಸಿ ಕೊಡಗು ಜಿಲ್ಲೆಯಿಂದ, ಮೈಸೂರು ಜಿಲ್ಲೆವರೆಗೂ ಪಾದಯಾತ್ರೆ ನಡೆಸಿ, ಗ್ರಾಮಸಭೆಗಳ ನಿರ್ಣಯದಂತೆ ಜಿಲ್ಲಾಡಳಿತಕ್ಕೆ ಅಹವಾಲು ಹೇಳಿಕೊಂಡು, ಸರ್ಕಾರದ ಗಮನಕ್ಕೆ ತರುವಂತೆ ಕೋರಿದ್ದೇವೆ. ಆದರೆ, ಈವರೆಗ ಅಂಥದ್ದೊಂದು ನಡೆ ಕಂಡುಬಂದಿಲ್ಲ. ಈಗಲಾದರೂ ಜಿಲ್ಲಾಡಳಿತ ಆದಿವಾಸಿಗಳ ಸಂಕಷ್ಟಕ್ಕೆ ಸ್ಪಂದಿಸಿ, ಸೂಕ್ತ ಕ್ರಮಕ್ಕೆ ಮುಂದಾಗುವುದೇ, ಆದಿವಾಸಿಗಳ ಜಮ್ಮ ಕಾಪಾಡುವುದೇ ಎಂಬುದನ್ನು ಕಾದು ನೋಡಬೇಕಿದೆ.

ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ‘ಬಾರುಕೋಲು’ ರಾಸುಗಳಿಗಷ್ಟೇ ಅಲ್ಲಾ, ಸರ್ಕಾರ ದಾರಿ ತಪ್ಪಿದಾಗಲು ದಂಡನಾಸ್ತ್ರವೇ: ರಾಕೇಶ್ ಟಿಕಾಯತ್

ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಪ್ರತಿಕ್ರಿಯೆಯೊಂದಿಗೆ ಈ ದಿನ.ಕಾಮ್ ವರದಿ ಮಾಡಲಿದೆ.

ಆದಿವಾಸಿ ಸಮುದಾಯ 13 ದಿನಗಳ ಪಾದಯಾತ್ರೆಯಲ್ಲಿ ತಮ್ಮ ರಕ್ತ-ಬೆವರನ್ನು ಹರಿಸಿ, ತಮ್ಮ ಬದುಕಿನ ಕಥೆಯನ್ನು ತೆರೆದಿಟ್ಟರೂ ಕೂಡ ಮೈಸೂರು ಜಿಲ್ಲಾಡಳಿತ ಇನ್ನೂ ಮೌನ ಮುರಿದಿಲ್ಲ. ಒಂದು ಫೋನ್ ಕರೆಯಿಲ್ಲ, ಒಂದು ಪತ್ರವಿಲ್ಲ, ಒಂದು ಸಭೆಯಿಲ್ಲ. ಇದು ಕೇವಲ ನಿರ್ಲಕ್ಷ್ಯವಲ್ಲ, ಸ್ಪಷ್ಟವಾದ ಅವಹೇಳನ. ‘ನೀವು ಮನುಷ್ಯರೇ ಅಲ್ಲʼ ಎಂಬ ಸಂದೇಶವನ್ನು ನೀಡುವಂತಿದೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.

WhatsApp Image 2025 02 05 at 18.09.20
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಂಡ್ಲುಪೇಟೆ | ಸಿಡಿಪಿಒ ವಿರುದ್ಧ ಜಾರಕಿಹೊಳಿ ಬ್ರಿಗೇಡ್ ಭ್ರಷ್ಟಾಚಾರ ಆರೋಪ; ದೂರು

ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ಸಿಡಿಪಿಓ ಹೇಮಾವತಿ ವಿರುದ್ದ ಜಾರಕಿಹೊಳಿ ಬ್ರಿಗೇಡ್ ಜಿಲ್ಲಾಧಿಕಾರಿಯವರಿಗೆ...

ಗದಗ | SC ST ಜನರ ನಡುವೆ ಗಲಾಟೆ; ಗಾಯಾಳುಗಳು ಆಸ್ಪತ್ರೆಗೆ ದಾಖಲು

ನೀರು ಕುಡಿದ ವಿಚಾರಕ್ಕೆ ಪರಿಶಿಷ್ಟ ಜಾತಿ(SC) ಪರಿಶಿಷ್ಟ(ST) ಜನಾಂಗದವರ ನಡುವೆ ಗಲಾಟೆ...

ದಾವಣಗೆರೆ | ರಾಜಕಾಲುವೆ ಚರಂಡಿ ಹಾಗೂ ತಡೆ ಗೋಡೆ ನಿರ್ಮಾಣ ಕಾಮಗಾರಿ ಸ್ಥಗಿತಕ್ಕೆ ತಹಶೀಲ್ದಾರ್ ಆದೇಶ

ರಾಜಕಾಲುವೆ ಭೂಮಾಪನ ಕಾರ್ಯ ಸಂಪೂರ್ಣಗೊಳ್ಳುವವರೆಗೆ ಹರಿಹರ ನಗರದ ರಾಜ ಕಾಲುವೆಯಲ್ಲಿ ಸಣ್ಣ...

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...