ಮೈಸೂರಿನ ಪುರಭವನ ಆವರಣದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಮುಂದೆ ಸಮಾನ ಮನಸ್ಕರ ವೇದಿಕೆ ಹಾಗೂ ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆಯಿಂದ ಹಕ್ಕೊತ್ತಾಯ ಪ್ರತಿಭಟನೆ ನಡೆಯಿತು.
ಇದೇ ಅಕ್ಟೋಬರ್. 09ಕ್ಕೆ ಸೌಜನ್ಯ ಕೊಲೆಗೀಡಾಗಿ 13 ವರ್ಷಗಳೇ ಸಂದುತ್ತಿದೆ. ಆದರೇ, ಇದುವರೆಗೆ ನೈಜ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗಿಲ್ಲ. ಹಾಗೆಯೇ, ಧರ್ಮಸ್ಥಳ ಸುತ್ತಮುತ್ತ ದಾಖಲಾದ ನೂರಾರು ಅಸಹಜ ಸಾವು, ಕೊಲೆ, ಅತ್ಯಾಚಾರ, ಭೂ ಹಗರಣ, ದಲಿತರಿಗೆ ಸೇರಿದ ಭೂಮಿಯ ಕಬಳಿಕೆ, ಬಡ್ಡಿ ದಂಧೆ, ಸಂತ್ರಸ್ತರಿಗೆ ನ್ಯಾಯ ದೊರಕದ ಹಿನ್ನಲೆಯಲ್ಲಿ ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ ರಾಜ್ಯವ್ಯಾಪಿ ‘ನ್ಯಾಯಕ್ಕಾಗಿ ಜನಾಗ್ರಹ’ ಪ್ರತಿಭಟನೆ ಹಮ್ಮಿಕೊಂಡಿದ್ದು ಇದರ ಬಾಗವಾಗಿ ಮೈಸೂರಿನಲ್ಲಿಯೂ ಸಹ ಹಾಕ್ಕೋತ್ತಾಯ ಮಂಡಿಸಿದರು.

ಹಕ್ಕೊತ್ತಾಯಗಳು:
- ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣದ ನೈಜ ಆರೋಪಿಗಳನ್ನು ಬಂಧಿಸದ. ಪ್ರಕರಣದಲ್ಲಿ ಸೂಕ್ತ ತನಿಖೆ ನಡೆಸದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ಸೂಕ್ತ ಎಂಬ ವಿಶೇಷ ನ್ಯಾಯಾಲಯದ ಆದೇಶವನ್ನು ಸರ್ಕಾರ ಪಾಲಿಸುವುದು.
- ‘ಅತ್ಯಾಚಾರದ ನಂತರ ವೈದ್ಯರು ಸಂಗ್ರಹಿಸಿದ ಮಾದರಿಗಳು ಪ್ರಕರಣಕ್ಕೆ ಪೂರಕವಾಗಿರಲಿಲ್ಲ. ಆದ್ದರಿಂದ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲು ಖುಲಾಸೆ ಸಮಿತಿಯ ಮುಂದೆ ಇಡಲು ಇದು ಸೂಕ್ತವಾದ ಪ್ರಕರಣವಾಗಿದೆ’ಎಂಬ ನ್ಯಾಯಾಲಯದ ಆದೇಶ ಜಾರಿಯಾಗಬೇಕು.
- ವಿಶೇಷ ನ್ಯಾಯಾಲಯವು ಗುರುತಿಸಿದಂತೆ ‘ಸೌಜನ್ಯ ಅತ್ಯಾಚಾರ-ಕೊಲೆಯ ವೈದ್ಯಕೀಯ ಸಾಕ್ಷ್ಯಗಳನ್ನು ಸಂಗ್ರಹಿಸದ, ಘಟನಾ ಸ್ಥಳದಿಂದ ಪೂರಕ ಸಾಕ್ಷ್ಯಗಳನ್ನು ಸಂಗ್ರಹಿಸದೇ ಸಾಕ್ಷ್ಯ ನಾಶ ಮಾಡಿದ ವೈದ್ಯಕೀಯ ಅಧಿಕಾರಿಗಳು ಮತ್ತು ಪೊಲೀಸರ’ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು.
- ಸೌಜನ್ಯ ಅತ್ಯಾಚಾರ-ಕೊಲೆಯ ನೈಜ ಆರೋಪಿಗಳನ್ನು ಬಂಧಿಸಲು ಸೂಕ್ತ ರೀತಿಯ ಕ್ರಮ, ತನಿಖೆಗೆ ಸರ್ಕಾರ ಆದೇಶಿಸಬೇಕು.
- ಸರ್ಕಾರವು 19-07-2025 ರಂದು ಧರ್ಮಸ್ಥಳ ಮತ್ತು ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ 20 ವರ್ಷಗಳಿಂದ (2005 ರಿಂದ 2025) ದಾಖಲಾದ ಅಸಹಜ ಸಾವು, ಅತ್ಯಾಚಾರ, ಹಲ್ಲೆ, ಕೊಲೆ, ಶವ ಹೂತಿಟ್ಟ ಪ್ರಕರಣ, ನೂರಾರು ಹುಡುಗಿಯರ ನಾಪತ್ತೆ ಪ್ರಕರಣವನ್ನು ಭೇದಿಸಲು ಎಸ್.ಐ.ಟಿ. ರಚಿಸಿದೆ. ಅದರಂತೆ, ಕಳೆದ 20 ವರ್ಷಗಳಲ್ಲಿ ಧರ್ಮಸ್ಥಳದಲ್ಲಿ ನಡೆದಿರುವ ಅಸಹಜ ಸಾವು, ಕೊಲೆ, ನಾಪತ್ತೆ ಪ್ರಕರಣಗಳ ಜೊತೆಗೆ ರಾಜ್ಯದ ಯಾವುದೇ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದಾಖಲಾದ ಪ್ರಕರಣಗಳ ತನಿಖೆಯನ್ನು ಎಸ್.ಐ.ಟಿ.ನಡೆಸಬೇಕು.
- ಬಿಜೆಪಿ ಹಾಗೂ ಪಟ್ಟಭದ್ರ ಶಕ್ತಿಗಳು ತನಿಖೆಯನ್ನು ಸ್ಥಗಿತಗೊಳಿಸಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದು, ಒತ್ತಡಕ್ಕೆ ಒಳಪಡಿಸಲು, ದೂರುದಾರರು, ಸಾಕ್ಷಿದಾರರನ್ನು ಬೆದರಿಸುವ, ತೇಜೋವಧೆ ನಡೆಸಿ ಹಿಮ್ಮಟ್ಟಿಸುವ ಯತ್ನವೂ ಆಗುತ್ತಿದೆ. ಇವೆಲ್ಲ ಪಿತೂರಿಯನ್ನು ನಿಲ್ಲಿಸಲು ಕ್ರಮ ತೆಗೆದುಕೊಳ್ಳಬೇಕು.
- ಸೌಜನ್ಯ ಹೋರಾಟಗಾರರ ಮೇಲೆ ಧರ್ಮಸ್ಥಳ, ಬೆಳ್ತಂಗಡಿ ಸೇರಿದತೆ-ರಾಜ್ಯದ ಯಾವುದೇ ಠಾಣೆಯಲ್ಲಿ ದಾಖಲಾದ ಪ್ರಕರಣವನ್ನು ಸರ್ಕಾರ ರದ್ದುಗೊಳಿಸಲು ಕ್ರಮವಹಿಸಬೇಕು.
- ಸಂತ್ರಸ್ತರು, ದೂರುದಾರರು ನೀಡಿದ ದೂರಿನಲ್ಲಿ ಇರುವ ಅಂಶಗಳನ್ನು ಪರಿಗಣಿಸಿ ವಿಚಾರಣೆ ನಡೆಸಬೇಕೇ ಹೊರತು ದೂರಿನ ಹಿಂದಿರುವ ಹೋರಾಟಗಾರರನ್ನು ಗುರಿಯಾಗಿಸುವ ಕ್ರಮಗಳನ್ನು ರಾಜ್ಯದ ಪೊಲೀಸರು ನಿಲ್ಲಿಸಬೇಕು.
- ಸ್ಥಳೀಯ ಪ್ಯೂಡಲ್ ಶಕ್ತಿಗಳ ಅಲಿಖಿತ ನಿಯವನ್ನು ಮುರಿದು ಮಂಡಲ ಪಂಚಾಯತ್ ಗೆ ಚುನಾವಣೆಗೆ ಸ್ಪರ್ಧಿಸಿದ್ದು ಮಾತ್ರವಲ್ಲದೆ, ಮಲೆಕುಡಿಯರ ಒಕ್ಕಲೆಬ್ಬಿಸುವಿಕೆಯ ವಿರುದ್ಧ ಚಳವಳಿ ಕಟ್ಟಿದ ಧರ್ಮಸ್ಥಳ ಗ್ರಾಮದ ಸಿಪಿಐಎಂ ಶಾಖಾ ಕಾರ್ಯದರ್ಶಿ ಎಂ. ಕೆ. ದೇವಾನಂದರ ಹದಿಹರೆಯದ ಪುತ್ರಿಯನ್ನು 1986 ಡಿಸೆಂಬರ್ ತಿಂಗಳಲ್ಲಿ ಅಪಹರಿಸಿ ತಿಂಗಳ ತರುವಾಯ ನೆರಿಯಾ ಹೊಳೆಗೆ ಎಸೆದ ಪ್ರಕರಣದಲ್ಲಿ ಈ ವರೆಗೂ ನ್ಯಾಯ ಒದಗಿಸಿಲ್ಲ. ಪದ್ಮಲತಾ ಅವರ ಸಹೋದರಿ ಎಸ್‌ಐಟಿಗೆ ಈ ಬಗ್ಗೆ ದೂರು ನೀಡಿದ್ದು, ಪ್ರಕರಣದ ಮರು ತನಿಖೆಗೆ ಸೂಚಿಸಬೇಕು.
- 2012 ಸೆಪ್ಟೆಂಬರ್ ನಲ್ಲಿ ಧರ್ಮಸ್ಥಳದಲ್ಲಿ ಆನೆಮಾವುತ ಆಗಿದ್ದ ನಾರಾಯಣ ಹಾಗು ಅವರ ಸಹೋದರಿಯನ್ನು ಕಲ್ಲಿನಿಂದ ಜಜ್ಜಿ ಕೊಲೆ ನಡೆಸಲಾಗುತ್ತದೆ. ಆ ಕೊಲೆ ಪ್ರಕರಣವನ್ನು ಪೊಲೀಸ್ ಇಲಾಖೆ ಪತ್ತೆಯಾಗದ ಪ್ರಕರಣ ಎಂದು ವರದಿ ನೀಡಿ ಮುಚ್ಚಿಹಾಕುತ್ತದೆ. ಆನೆ ಮಾವುತ ನಾರಾಯಣ ವಾಸ ಇದ್ದ ಜಮೀನಿನ ಮೇಲೆ ಊರಿನ ಪ್ರಭಾವಿಗಳಿಗೆ ಆಸಕ್ತಿ ಇತ್ತು. ಪ್ರಭಾವಿಗಳ ಒತ್ತಡಕ್ಕೆ ಮಣಿಯದ ಕಾರಣ ಈ ಜೋಡಿ ಕೊಲೆ ನಡೆದಿದೆ ಎಂದು ನಾರಾಯಣ ಕುಟುಂಬ ಅಂದಿನಿಂದಲೂ ಆರೋಪಿಸುತ್ತಾ ಬಂದಿದೆ. ಮಾವುತ ನಾರಾಯಣ ವಾಸ ಇದ್ದ ಜಮೀನಿನಲ್ಲಿ ಈಗ ಪ್ರಭಾವಿಗಳ ಭವ್ಯ ಕಟ್ಟಡ ತಲೆ ಎತ್ತಿರುವುದು ಆ ಆರೋಪವನ್ನು ಪುಷ್ಟಿಕರಿಸುತ್ತದೆ. ಪತ್ತೆಯಾಗದ ಪ್ರಕರಣವನ್ನು ರೀ ಓಪನ್ ಮಾಡುವ ಕಾನೂನಾತ್ಮಕ ಅವಕಾಶವಿದ್ದು ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯತತ್ಪರವಾಗಬೇಕು.
- ಧರ್ಮಸ್ಥಳದಲ್ಲಿ ದುಡಿಯುವ ಸ್ವಚ್ಚತಾ ಕಾರ್ಮಿಕರಿಗೆಂದೇ ಧರ್ಮಸ್ಥಳದಲ್ಲಿ ಅಶೋಕ ನಗರ ದಲಿತ ಕಾಲೋನಿಯನ್ನು ನಿರ್ಮಿಸಲಾಗಿದೆ. ತಲೆತಲಾಂತರಗಳಿಂದ ಅಶೋಕನಗರದಲ್ಲೇ ವಾಸಿಸುತ್ತಿದ್ದರೂ ಇನ್ನೂ ಮನೆಯ ಅಡಿಸ್ಥಳವನ್ನು ದಲಿತರ ಹೆಸರಿಗೆ ಹಕ್ಕು ಪತ್ರ ನೀಡಲಾಗಿಲ್ಲ. ಸ್ವಚ್ಚತಾ ಕಾರ್ಮಿಕರು ಕುಸಿದಿರುವ, ತೂತಾಗಿರುವ ಮನೆಗಳಲ್ಲಿ ಹೀನಾಯ ಸ್ಥಿತಿಯಲ್ಲಿ ವಾಸಿಸುತ್ತಿದ್ದಾರೆ. ಸ್ವಚ್ಚತಾ ಕಾರ್ಮಿಕರಿಗೆ ಕಾರ್ಮಿಕ ಕಾಯ್ದೆಯಂತೆ ಸಂಬಳ ನೀಡಲಾಗುತ್ತಿದೆಯೇ ಎಂಬುದನ್ನು ಖಾತರಿಪಡಿಸಬೇಕು. ಧರ್ಮಸ್ಥಳ ಅಶೋಕನಗರದ 128 ದಲಿತ ಕುಟುಂಬಗಳು, ಮುಂಡುಪಾಡಿಯ 42 ದಲಿತ ಕುಟುಂಬಗಳು ಮತ್ತು ಗ್ರಾಮದ ಇತರ ದಲಿತ ಕುಟುಂಬಗಳಿಗೆ ತಲಾ ಒಂದು ಎಕೆ ಸರಕಾರಿ ಭೂಮಿಯನ್ನು ಸರ್ಕಾರ ಕೊಡಿಸಬೇಕು. ದಲಿತರ ಮೀಸಲು ಭೂಮಿಯೂ ಸೇರಿದಂತೆ ನೂರಾರು ಎಕೆ ಸರಕಾರಿ ಭೂಮಿಯನ್ನು ಟ್ರಸ್ಟ್ ಅತಿಕ್ರಮಿಸಿದ್ದು, ಇದನ್ನು ತೆರವುಗೊಳಿಸಿ ಭೂಮಂಜೂರಾತಿ ಕಾಯ್ದೆ ಪ್ರಕಾರವೇ ದಲಿತರಿಗೆ ಕೊಡಬೇಕು.
- ಧರ್ಮಸ್ಥಳ ಹಾಗು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಕಬಳಿಕೆ ಪ್ರಕರಣಗಳು ವ್ಯಾಪಕವಾಗಿ ನಡೆದಿರುವ ಆರೋಪ ನಾಲೈದು ದಶಕಗಳಿಂದ ವ್ಯಾಪಕವಾಗಿ ಕೇಳಿ ಬರುತ್ತಿದೆ. ಅಲ್ಲಿ ನಡೆದಿರುವ ಕೊಲೆ ಸಹಿತ ಅಪರಾಧ ಪ್ರಕರಣಗಳನ್ನು ಭೂ ಹಗರಣಗಳಿಂದ ಪ್ರತ್ಯೇಕಿಸಿ ನೋಡಲು ಸಾಧ್ಯವಾಗದು. ಸರಕಾರಿ ಜಮೀನುಗಳ ಕಬಳಿಕೆ, ದಲಿತರು, ಆದಿವಾಸಿಗಳು, ಹಿಂದುಳಿದವರು ಸಹಿತ ದುರ್ಬಲ ವಿಭಾಗದ ಜನರನ್ನು ಬಲವಂತವಾಗಿ ಒಕ್ಕಲೆಬ್ಬಿಸಿದ, ಅವರ ಜಮೀನು ಸ್ವಾಧೀನ ಪಡಿಸಿದ ಆರೋಪಗಳು ಹಲವಾರು ಇವೆ. ಧರ್ಮಸ್ಥಳ ಹಾಗು ಆಸುಪಾಸಿನ ಗ್ರಾಮದಲ್ಲಿ ನಾಲೈದು ದಶಕದಲ್ಲಿ ನಡೆದಿರುವ ಜಮೀನು ಪರಭಾರೆಯನ್ನೂ ಸೇರಿಸಿ, ಭೂಕಬಳಿಕೆ ಆರೋಪಗಳನ್ನು ಸಮಗ್ರವಾದ ತನಿಖೆಗೆ ಒಳಪಡಿಸಬೇಕಿದೆ.
- ಧರ್ಮಸ್ಥಳದ ಪ್ರಭಾವಿಗಳು ಟ್ರಸ್ಟ್ ನಡೆಸುತ್ತಿರುವ ಲಾಭದಾಯಕ ಶಿಕ್ಷಣ ಸಂಸ್ಥೆಗಳಿಗೆ ದಲಿತರಿಗೆ ಮೀಸಲಾಗಿರುವ ಡೀಸಿ ಮನ್ನ (DEPRESSED CLASS RESERVE) ಜಮೀನನ್ನು ಸರ್ಕಾರ ನೀಡಿದೆ. ಉಜಿರೆ ಗ್ರಾಮದಲ್ಲಿ ವಿವಿಧ ಸರ್ವೆ ನಂಬರ್‌ಗಳಲ್ಲಿ 43.90 ಎಕ್ರೆ ಡಿ.ಸಿ ಮನ್ನಾ(ತುಳಿತಕ್ಕೊಳಗಾದ ವರ್ಗಕ್ಕೆ ಮೀಸಲು) ಭೂಮಿಯನ್ನು ಧರ್ಮಸ್ಥಳ ಎಜುಕೇಶನಲ್ ಟ್ರಸ್ಟ್ ಮತ್ತು ಸಿದ್ಧವನ ಗುರುಕುಲಕ್ಕೆ ನೀಡಲಾಗಿದೆ. ಈ ಬಗ್ಗೆ ಪದೇ ಪದೇ ವಿವಿಧ ದಲಿತ ಸಂಘಟನೆಗಳು, ಎಡ ಸಂಘಟನೆಗಳು ಒತ್ತಾಯಿಸುತ್ತಾ ಬಂದಿವೆ. ಆ ಭೂಮಿಯನ್ನು ತಕ್ಷಣ ದಲಿತ ಸಮುದಾಯಕ್ಕೆ ನೀಡಬೇಕು. ಮುಖ್ಯರಸ್ತೆಯ ಬದಿಯ ಭೂಮಿಯನ್ನು ಪುಕ್ಕಟೆ ದರಕ್ಕೆ ನೀಡಲಾಗಿದ್ದು, ಅವಧಿಪೂರ್ವ ಈ ಒಪ್ಪಂದವನ್ನು ರದ್ದುಗೊಳಿಸಿ, ಅರ್ಹ ಭೂರಹಿತರಿಗೆ ಭೂಮಿಯನ್ನು ಹಂಚಬೇಕು.
- ಗ್ರಾಮೀಣಾಭಿವೃದ್ಧಿ ಯೋಜನೆಯ ಹೆಸರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಅಪರಾಧ ನಡೆದಿರುವುದು, ಮೈಕ್ರೋ ಫೈನಾನ್ಸ್ ನಡೆಸಿರುವ ಆರೋಪಗಳು ವ್ಯಾಪಕವಾಗಿದೆ. ಸಾಲ ನೀಡಿಕೆ, ವಸೂಲಾತಿ ವಿಧಾನದಲ್ಲಿ ಕಾನೂನು, ನಿಯಮಗಳನ್ನು ಉಲ್ಲಂಘಿಸುವುದು, ತೀರಾ ಅವಮಾನಕಾರಿಯಾಗಿ, ಅಮಾನವೀಯವಾಗಿ ವಸೂಲಾತಿ ನಡೆಸುವ ದೂರುಗಳು ರಾಜ್ಯದ ಹಲವು ಭಾಗಗಳಲ್ಲಿ ಕೇಳಿಬಂದಿವೆ. ವಸೂಲಾತಿಯ ಸಂದರ್ಭದ ಅಪಮಾನ, ಹಿಂಸೆ ಭರಿಸಲಾಗದೆ ಆತ್ಮಹತ್ಯೆಗಳು ಘಟಿಸಿರುವುದು, ಮರ ಮಟ್ಟು ಸಹಿತ ಅವರ ಸ್ವತ್ತುಗಳನ್ನು ಬಲವಂತವಾಗಿ ಸ್ವಾಧೀನ ಪಡಿಸಿರುವ ಪ್ರಕರಣಗಳು ಹತ್ತಾರು ಸಂಖ್ಯೆಯಲ್ಲಿ ನಡೆದಿದೆ. ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಇವು ಗಂಭೀರವಾದ ಆರ್ಥಿಕ ಅಪರಾಧಗಳಾಗಿವೆ. ಗ್ರಾಮೀಣ ಭಾಗದಲ್ಲಿ ಶ್ರಮಿಕ ಜನರ, ಕೂಲಿಕಾರರ, ಸಣ್ಣ ರೈತರು ಸೇರಿದಂತೆ ಜನ ಸಾಮಾನ್ಯರ ನೆಮ್ಮದಿಗೆ ಭಂಗ ತಂದಿದೆ. ಈ ಕುರಿತು ಸರಿಯಾದ ತನಿಖೆ ಅಗತ್ಯ ಇದೆ.
- ಧರ್ಮಸ್ಥಳ ವ್ಯಾಪ್ತಿಯಲ್ಲಿ ಕಳೆದ 20 ವರ್ಷಗಳಲ್ಲಿ ನೂರಾರು ಅಸಹಜ ಸಾವುಗಳು, ಆತ್ಮಹತ್ಯೆಗಳು, ಕೊಲೆಗಳು ನಡೆದಿವೆ ಎಂದು ಚರ್ಚೆಗಳು ನಡೆಯುತ್ತಿದ್ದಂತೆ, ಧರ್ಮಸ್ಥಳ ಗ್ರಾಮ ಪಂಚಾಯತ್ ನೀಡಿರುವ ಮಾಹಿತಿ ಹಕ್ಕು ದಾಖಲೆಗಳು ನಮ್ಮ ಆತಂಕವನ್ನು ಇಮ್ಮಡಿಗೊಳಿಸಿದೆ. 15 ವರ್ಷದ ಹೆಣ್ಣು ಮಗುವಿನ ಶವ ದೇವಸ್ಥಾನದ ಸ್ನಾನಘಟ್ಟದಲ್ಲಿ ಪತ್ತೆಯಾದ ದಿನವೇ ಪೋಸ್ಟ್ಮಾಟರ್ಂ ನಡೆಸಿ ದಫನ ಮಾಡಲು ಗ್ರಾಮ ಪಂಚಾಯತ್‌ಗೆ ಪೊಲೀಸರು ಸೂಚಿಸಿದ್ದಾರೆ. ಮೃತ ಹೆಣ್ಣು ಮಗುವಿನ ಪೊಷಕರ ಪತ್ತೆಗೆ ಪೊಲೀಸರು ಕಾನೂನಿನ ಯಾವ ಕ್ರಮವನ್ನೂ ಕೈಗೊಳ್ಳದೇ, ಕನಿಷ್ಠ ಒಂದೆರಡು ದಿನ ಕಾಯುವ ವ್ಯವಧಾನವೂ ಇಲ್ಲದೇ ಶವ ಪತ್ತೆಯಾದ ದಿನವೇ ತರಾತುರಿಯಲ್ಲಿ ಕಾನೂನು ಮೀರಿ ದಫನ ಮಾಡಿರುವ ದಾಖಲೆ ಹಲವು ಅನುಮಾನಗಳನ್ನೂ, ಅಮಾನವೀಯತೆಯ ಬಗೆಗೆ ಆಕ್ರೋಶವನ್ನೂ ತರಿಸುತ್ತದೆ. ಇನ್ನೊಂದು ದಾಖಲೆ ಹೇಳುವ ಪ್ರಕಾರ, ಸುಮಾರು 45 ವರ್ಷದ ಮಹಿಳೆಯನ್ನು ಧರ್ಮಸ್ಥಳ ದೇವಸ್ಥಾನದ ಶರಾವತಿ ಲಾಡ್ಜ್‌ನಲ್ಲಿ ಕೊಲೆ ಮಾಡಲಾಗಿದ್ದು, ಪೊಲೀಸರು ಆ ಮಹಿಳೆಯನ್ನು ಅಪರಿಚಿತ ಎಂದು ಘೋಷಿಸಿದ್ದಾರೆ. ವಸತಿಗೃಹದಲ್ಲಿ ಪತ್ತೆಯಾದ ಮಹಿಳೆಯ ಅಪರಿಚಿತೆ ಆಗಲು ಹೇಗೆ ಸಾದ್ಯ ? ಅದಲ್ಲದೇ, ಪತ್ತೆಯಾದ ಬಹುತೇಕ ಎಲ್ಲಾ ಶವಗಳನ್ನು ಹೂಳಲು ಸೂಚಿಸಿರುವ ಪೊಲೀಸರು, ಹೂಳಲೇಬೇಕಾದ ಕೊಲೆಯಾದ ಮಹಿಳೆಯ ಶವವನ್ನು ದಹನ ಮಾಡಲು ಸೂಚಿಸುತ್ತಾರೆ. ಗ್ರಾಮ ಪಂಚಾಯತ್‌ನವರು ಸಹಜವೆಂಬಂತೆ ಹೂತು ಹಾಕಬಹುದು ಎಂಬ ಕಾರಣಕ್ಕಾಗಿ ಪೊಲೀಸರು ದಘನ ಎಂದು ಬರೆದು ಆವರಣದಲ್ಲಿ ಸ್ಪಷ್ಟವಾಗಿ ದಹನ ಎಂದು ಬರೆಯುವ ಮೂಲಕ ಶವದ ಸಾಕ್ಷ್ಯ ನಾಶಮಾಡಿದ್ದಾರೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇಂತಹ ಹಲವು ದಾಖಲೆಗಳು ಆರ್‌ಟಿಐ ಮೂಲಕ ಅಧಿಕೃತವಾಗಿ ಲಭ್ಯವಾಗಿದ್ದು, ಎಸ್‌ಐಟಿ ರಚನೆಯ ಹೊರಡಿಸಲಾದ ಆದೇಶದಲ್ಲಿರುವ ನಿಯಮಗಳಂತೆ ಇವೆಲ್ಲವೂ ತನಿಖೆಯಾಗಬೇಕಿದೆ.
- ಸರ್ಕಾರ ಯಾವುದೇ ಪ್ರಭಾವಿಗಳ ಒತ್ತಡಕ್ಕೆ ಮಣಿಯಬಾರದು. ವಿರೋಧ ಪಕ್ಷವಾಗಿರುವ ಬಿಜೆಪಿಯು ಬಹಿರಂಗವಾಗಿ ಎಸ್‌ಐಟಿ ತನಿಖೆ ಮತ್ತು ಸಾಕ್ಷಿ, ದೂರುದಾರರಿಗೆ ಬೆದರಿಕೆ ಒಡ್ಡುತ್ತಿದ್ದು ಅದನ್ನು ನಿಲ್ಲಿಸಲು ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಸಂತ್ರಸ್ತರ ಪರವಾಗಿ ಕೆಲಸ ಮಾಡುದು ಸರ್ಕಾರದ ಸಾಂವಿಧಾನಿಕ ಕರ್ತವ್ಯವಾಗಿದೆ. ಸರ್ಕಾರ ಮಾಡಬೇಕಿರುವ ಕೆಲಸವನ್ನು ಜನಪರ ಹೋರಾಟಗಾರರು ಮಾಡುತ್ತಿದ್ದಾರೆ. ಆದರೆ ಸರ್ಕಾರದ ಕೆಲ ಪ್ರಭಾವಿಗಳು ಮತ್ತು ಪೊಲೀಸರು ಹೋರಾಟಗಾರರ ವಿರುದ್ಧ ಪ್ರಕರಣ ದಾಖಲಿಸುವ ಬೆದರಿಕೆ ಒಡ್ಡುವ ಮೂಲಕ ದೂರುದಾರರ, ಸಂತರ ಧ್ವನಿ ಅಡಗಿಸಲು ಪ್ರಯತ್ನಿಸುತ್ತಿದ್ದಾರೆ. ಇವೆಲ್ಲವನ್ನೂ ನಿಯಂತ್ರಿಸಿ, ಎಸ್‌ಐಟಿ ತನಿಖೆ ಪ್ರಾಮಾಣಿಕ, ಪಾರದರ್ಶಕವಾಗಿ ನಡೆಯುವಂತೆ ಕ್ರಮ ವಹಿಸಬೇಕು.
ಈ ವಿಶೇಷ ಸುದ್ದಿ ಓದಿದ್ದೀರಾ? ಅಂಗನವಾಡಿಗಾಗಿ ಜಾಗ ಗುರುತು: ಅನಧಿಕೃತವಾಗಿ ದೇವಾಲಯ ನಿರ್ಮಿಸಿ ಶಿಕ್ಷಣ ವಂಚಿತರನ್ನಾಗಿಸುವ ಹುನ್ನಾರ
ಪ್ರತಿಭಟನೆಯಲ್ಲಿ ದಸಂಸ ಹಿರಿಯ ಮುಖಂಡರಾದ ಹರಿಹರ ಆನಂದಸ್ವಾಮಿ, ರಂಗಕರ್ಮಿ ಸಿ. ಬಸವಲಿಂಗಯ್ಯ, ಜನಾರ್ಧನ (ಜನ್ನಿ), ಕಾಳಚನ್ನೇಗೌಡ, ವಿಶ್ರಾಂತ ಉಪಕುಲಪತಿ ಸಬೀಹಾ ಭೂಮಿಗೌಡ, ಭೂಮಿಗೌಡ, ಬೆಟ್ಟಯ್ಯ ಕೋಟೆ, ಜಗದೀಶ್ ಸೂರ್ಯ, ಉಗ್ರ ನರಸಿಂಹೇ ಗೌಡ, ಒಡನಾಡಿ ಸ್ಟ್ಯಾನ್ಲಿ, ಪರಶು, ಜನಮನ ಗೋಪಾಲ್, ಸವಿತಾ ಪಾ ಮಲ್ಲೇಶ್, ರೈತ ಸಂಘದ ಹೊಸಕೋಟೆ ಬಸವರಾಜು, ಪಿ. ಮರಂಕಯ್ಯ, ಅಲಗೂಡು ಶಿವಕುಮಾರ್, ಶಂಭುಲಿಂಗ ಸ್ವಾಮಿ, ರಾಜಣ್ಣ, ಮೋಹನ್, ರಾಘವೇಂದ್ರ ಸೇರಿದಂತೆ ಇನ್ನಿತರರು ಇದ್ದರು.





