ಮೈಸೂರು ನಗರ ಪಾಲಿಕೆ ಪ್ರಾಣಿಗಳ ಕಲ್ಯಾಣದತ್ತ ಬದ್ಧತೆಯ ಭಾಗವಾಗಿ ಇಂದು ನಗರದ ಟೌನ್ ಹಾಲ್‌ನಲ್ಲಿ ಬೀದಿ ನಾಯಿಮರಿಗಳ ದತ್ತು ಸ್ವೀಕಾರ ಅಭಿಯಾನವನ್ನು ಆಯೋಜಿಸಿತ್ತು. ಈ ಮೂಲಕ ಬೀದಿ ನಾಯಿಮರಿಗಳಿಗೆ ಸುರಕ್ಷಿತ ಮನೆ ಒದಗಿಸುವುದರ ಜೊತೆಗೆ ಜವಾಬ್ದಾರಿಯುತ ದತ್ತು ಸ್ವೀಕಾರದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮುಂದಾಗಿದೆ.
ಆಯುಕ್ತರಾದ ಶೇಖ್ ತನ್ವಿರ್ ಆಸೀಫ್ ಮಾತನಾಡಿ, ಸಕ್ರಿಯ ದತ್ತು ಸ್ವೀಕಾರ (Active Adoption) ಮತ್ತು ನಿಷ್ಕ್ರಿಯ ದತ್ತು ಸ್ವೀಕಾರ (Passive Adoption) ಎರಡೂ ಮಹತ್ವವುಳ್ಳವು. ಸಕ್ರಿಯ ದತ್ತು ಸ್ವೀಕಾರದ ಮೂಲಕ ನಾಗರಿಕರು ಬೀದಿ ನಾಯಿಮರಿಗಳಿಗೆ ಶಾಶ್ವತ ಮನೆ ಒದಗಿಸಬಹುದಾದರೆ, ನಿಷ್ಕ್ರಿಯ ದತ್ತು ಸ್ವೀಕಾರದಲ್ಲಿ ಬೀದಿ ಪ್ರಾಣಿಗಳ ಆರೈಕೆ, ಆಹಾರ ಪೂರೈಕೆ, ಲಸಿಕೀಕರಣ, ವಂಧ್ಯಕರಣ ಹಾಗೂ ಮಾನವೀಯ ಸಹಬಾಳ್ವೆ ಸೇರಿವೆ. ನಗರದಲ್ಲಿ ಮಾನವೀಯ ಹಾಗೂ ದೀರ್ಘಕಾಲಿಕ ಬೀದಿ ಪ್ರಾಣಿ ನಿರ್ವಹಣೆಗೆ ಸಾರ್ವಜನಿಕರ ಸಕ್ರಿಯ ಭಾಗವಹಿಸುವಿಕೆ ಅತ್ಯಂತ ಅಗತ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಣಿ ಪ್ರಿಯರು, ಸ್ವಯಂಸೇವಕರು ಹಾಗೂ ವಿವಿಧ ಪ್ರಾಣಿ ಕಲ್ಯಾಣ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿ, ದತ್ತು ಸ್ವೀಕಾರ ಹಾಗೂ ಪ್ರಾಣಿ ಕಲ್ಯಾಣ ಚಟುವಟಿಕೆಗಳಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.

ಮೈಸೂರು ನಗರ ಪಾಲಿಕೆಯು ಪಶುಸಂಗೋಪನಾ ಇಲಾಖೆ ಮತ್ತು ಪೀಪಲ್ ಫಾರ್ ಅನಿಮಲ್ಸ್ (ಪಿಎಫ್ಎ) ಸಂಸ್ಥೆಯ ಸಹಯೋಗದೊಂದಿಗೆ ಮುಂದಿನ ದಿನಗಳಲ್ಲಿ ಇಂತಹ ದತ್ತು ಸ್ವೀಕಾರ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲಿದ್ದೇವೆ ಎಂದು ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ಹಾಸನ | ಸುಭಾಷ್ ಪಾಳೇಕಾರ್ ಕೃಷಿ ಪದ್ಧತಿ ಕಾರ್ಯಾಗಾರ; ಜನವರಿ.3 ರಿಂದ 6ರವರೆಗೆ: ಚುಕ್ಕಿ ನಂಜುಂಡಸ್ವಾಮಿ
ಕಾರ್ಯಕ್ರಮದಲ್ಲಿ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಪೂರ್ಣದಾ, ನಿವೃತ್ತ ಉಪ ನಿರ್ದೇಶಕ ಡಾ. ತಿರುಮಲೇಶ್, ನಿವೃತ್ತ ಪಶುವೈದ್ಯ ಡಾ. ಸುರೇಶ್, ಪೀಪಲ್ ಫಾರ್ ಅನಿಮಲ್ಸ್ (PFA) ಸಂಸ್ಥೆಯ ಸವಿತಾ ನಾಗಭೂಷಣ್, ಪಾಲಿಕೆ ಆರೋಗ್ಯಾಧಿಕಾರಿ ಡಾ. ಎನ್.ಪಿ. ವೆಂಕಟೇಶ್ ಸೇರಿದಂತೆ ಹಲವರು ಇದ್ದರು.





