ಮೈಸೂರು ನಗರದ ಶೇಷಾದ್ರಿಪುರಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎನ್‌ಎಸ್‌ಎಸ್ ಘಟಕ, ಶ್ರೀರಂಗಪಟ್ಟಣ ರೋಟರಿ ಕ್ಲಬ್ ಹಾಗೂ ಅಚೀವರ್ಸ್ ಅಕಾಡೆಮಿ ನೇತೃತ್ವದೊಂದಿಗೆ ಪಟಾಕಿಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ಮಾಡಲಾಯಿತು.
ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ತೆರಳಿ ಘೋಷ ವಾಕ್ಯವನ್ನು ಕೂಗಲಾಯಿತು ಮತ್ತು ಮಾನವ ಸರಪಳಿಯನ್ನು ಮಾಡಿ ಪಟಾಕಿಯ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು. ಹಾಗೆಯೇ ವಿದ್ಯಾರ್ಥಿಗಳು ದೀಪಾವಳಿಯ ಸುರಕ್ಷತೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ಜತೆಗೆ ದೀಪಾವಳಿಯ ಸುರಕ್ಷತೆ ಬಗ್ಗೆ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಲಾಯಿತು.
ಎನ್ಎಸ್ಎಸ್ ಅಧಿಕಾರಿ ಡಾ ರಾಘವೇಂದ್ರ ಮಾತನಾಡಿ, “ಪಟಾಕಿಗಳನ್ನು ಸಿಡಿಸುವುದರಿಂದ ಪರಿಸರಕ್ಕೆ ಅರಿವಿಲ್ಲದೆ ಹಾನಿಕಾರಕ ಅನಿಲಗಳು ಮತ್ತು ವಿಷಕಾರಿ ವಸ್ತುಗಳು ಬಿಡುಗಡೆಯಾಗುತ್ತವೆ. ಇದರಿಂದ ವಾಯುಮಾಲಿನ್ಯವಾಗುತ್ತದೆ. ಹಾಗೆಯೇ ಪಟಾಕಿ ಸಿಡಿಸುವುದರಿಂದ ವಾಯುಮಾಲಿನ್ಯ ಮಾತ್ರವಲ್ಲದೆ ಶಬ್ದಮಾಲಿನ್ಯವೂ ಉಂಟಾಗುತ್ತದೆ” ಎಂದು ತಿಳಿಸಿದರು.
“ಈ ರೀತಿಯ ಶಬ್ದಗಳು ನವಜಾತ ಶಿಶುಗಳಿಗೆ, ಪ್ರಾಣಿ-ಪಕ್ಷಿಗಳಿಗೆ ತುಂಬಾ ಹಾನಿಕಾರಕವಾಗಿವೆ. ಪಟಾಕಿಯ ದೊಡ್ಡ ಶಬ್ದವು ತಾತ್ಕಾಲಿಕ ಕಿವುಡುತನ, ಆಘಾತ ಮತ್ತು ಅಧಿಕ ರಕ್ತದೊತ್ತಡವನ್ನು ಉಂಟುಮಾಡುತ್ತದೆ. ಆದುದರಿಂದ ಪರಿಸರ ಸಂರಕ್ಷಣೆ ಮಾಡಲು ಎಲ್ಲರೂ ಕೈಜೋಡಿಸಬೇಕು” ಎಂದು ಎಲ್ಲ ಸಾರ್ವಜನಿಕರಲ್ಲಿ ಮನವಿ ಮಾಡಿದ ಅವರು ಸಮಸ್ತ ನಾಡಿನ ಜನತೆಗೆ ದೀಪಾವಳಿಯ ಶುಭಾಶಯಗಳನ್ನು ಕೋರಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸುಮನಹಳ್ಳಿ ವಿದ್ಯುತ್ ಚಿತಾಗಾರ 12 ದಿನ ತಾತ್ಕಾಲಿಕ ಸ್ಥಗಿತ
ಇದೇ ಸಂದರ್ಭದಲ್ಲಿ ಶಾರದ ವಿಲಾಸ್ ಕಾನೂನು ಕಾಲೇಜಿನ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಸವಿತ, ಮಹಾದೇವಮ್ಮ, ಹೃದಯ್, ಕರ್ಣ, ಪ್ರಜ್ವಲ್, ದೀಕ್ಷಿತ, ದಿವಿತ್, ಅಶ್ವಿನಿ, ರವಿಕುಮಾರ್, ಸುಚಿತ್ರ, ಪ್ರಶಾಂತ್, ಚಂದನ್ ಸೇರಿದಂತೆ ಇತರರು ಇದ್ದರು.





