ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಹಂಚೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಡದಹಳ್ಳಿ ಹಾಡಿಗೆ ನುಗ್ಗಿದ್ದ ಕಾಡಾನೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳೀಯರೊಂದಿಗೆ ಸೇರಿ ಹಿಮ್ಮೆಟ್ಟಿಸಿದ ಘಟನೆ ಬುಧವಾರ ನಡೆದಿದೆ.
ಕಬಿನಿ ಹಿನ್ನೀರಿನ ಪ್ರದೇಶದ ವ್ಯಾಪ್ತಿಗೆ ಹೊಂದಿಕೊಂಡಂತೆ ಇರುವ ಮೊಳೆಯೂರು ಅರಣ್ಯ ಪ್ರದೇಶದಿಂದ ಹಂಚೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಡದಹಳ್ಳಿ ಹಾಡಿಗೆ ಕಾಡಾನೆ ನುಗ್ಗಿತ್ತು. ಕಾಡಾನೆಯನ್ನು ಕಂಡ ಕೂಡಲೇ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಗ್ರಾಮಸ್ಥರ ಸಹಕಾರದೊಂದಿಗೆ ಆನೆಯನ್ನು ಕಾಡಿಗೆ ಅಟ್ಟಿದ್ದಾರೆ. ಈ ಮೂಲಕ ಗ್ರಾಮಸ್ಥರ ಆತಂಕವನ್ನು ದೂರ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಒಳಮೀಸಲಾತಿ ಜಾರಿಗೆ ಸಚಿವರಿಗೆ ಘೇರಾವ್, ಕಪ್ಪುಬಾವುಟ ಪ್ರದರ್ಶನ; ಮಾದಿಗ ಮೀಸಲಾತಿ ಎಚ್ಚರಿಕೆ
ಆದರೆ, ಗ್ರಾಮದ ಸುತ್ತಮುತ್ತ ಆಗಾಗ್ಗೆ ಕಾಡುಪ್ರಾಣಿಗಳು ಕಾಣಿಸಿಕೊಳ್ಳುತ್ತವೆ. ಕಾಡುಪ್ರಾಣಿಗಳು ಕಾಡಿನಿಂದ ಬರದಂತೆ ತಡೆಯಬೇಕೆಂದು ಹಂಚೀಪುರ ಗ್ರಾಮಸ್ಥರು ಅರಣ್ಯ ಇಲಾಖೆಗೆ ಒತ್ತಾಯಿಸಿದರು.





