ಆಡಳಿತಾತ್ಮಕ ಹಿತದೃಷ್ಠಿಯಿಂದ ಮೈಸೂರು ವಿಶ್ವವಿದ್ಯಾಲಯಕ್ಕೆ ಕುಲಪತಿ ಅಥವಾ ಪ್ರಭಾರ ಕುಲಪತಿಯನ್ನು ಕೂಡಲೇ ನೇಮಕ ಮಾಡಬೇಕು ಎಂದು ಒತ್ತಾಯಿಸಿ ಸಂಶೋಧಕರ ಸಂಘದ ಸದಸ್ಯರು ಮೈಸೂರು ನಗರದ ಕ್ರಾಫರ್ಡ್ ಭವನದ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ರಾಜ್ಯ ಸಂಶೋಧಕ ಸಂಘದ ಅಧ್ಯಕ್ಷ ಮರಿದೇವಯ್ಯ ಎಸ್ ಮಾತನಾಡಿ, “ವಿಶ್ವವಿದ್ಯಾಲಯದಲ್ಲಿ ಕಳೆದ ಮೂರು ತಿಂಗಳಿನಿಂದ ಕುಲಪತಿಗಳಿಲ್ಲದೆ, ಸಂಶೋಧಕರ ಹಾಗೂ ವಿದ್ಯಾರ್ಥಿಗಳ ಸಣ್ಣಪುಟ್ಟ ಸಮಸ್ಯೆಗಳೂ ಬಗೆಹರಿಯದ ಪರಿಸ್ಥಿತಿ ಎದುರಾಗಿದೆ. ಕುಲಸಚಿವರಿಗೆ ಅಧಿಕಾರ ನೀಡಿದ್ದರೂ ಅವರು ಸಮಸ್ಯೆಗೆ ಸ್ಪಂದಿಸುತ್ತಿಲ್ಲ” ಎಂದು ಆರೋಪಿಸಿದರು.
“ವಿಶ್ವವಿದ್ಯಾನಿಲಯದ ಸ್ವಜನಪಕ್ಷಪಾತ, ಭ್ರಷ್ಟಾಚಾರ, ವಿದ್ಯಾರ್ಥಿ ವಿರೋಧಿ ನಡೆಯಿಂದ ಪದವಿ ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಮೂಲಸೌಕರ್ಯಗಳಿಲ್ಲದೆ ಬೀದಿಗೆ ಬರುವಂತಾಗಿದೆ. ಸೆ.21ರವರೆಗೆ ಯುವರಾಜ ಕಾಲೇಜಿನಲ್ಲಿ ಪರೀಕ್ಷೆಗಳಿದ್ದರೂ ಹಾಸ್ಟೆಲ್‌ಗಳನ್ನು ಈಗಾಗಲೇ ಮುಚ್ಚಿರುವುದು ಖಂಡನಿಯ” ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಎಸ್‌ಸಿಪಿ, ಟಿಎಸ್‌ಪಿ ಅನುದಾನ ಸಂಪೂರ್ಣ ಬಳಸಿ; ಜಿಲ್ಲಾಧಿಕಾರಿ ಸೂಚನೆ
“ನ್ಯಾಯಾಲಯದ ಆದೇಶ ಬರುವವರೆಗೆ ವಿಶ್ವವಿದ್ಯಾಲಯಕ್ಕೆ ಪ್ರಭಾರ ಕುಲಪತಿ ಅಥವಾ ಪ್ರಾದೇಶಿಕ ಆಯುಕ್ತರನ್ನು ಮೇಲಸ್ತುವಾರಿಯನ್ನಾಗಿ ನೇಮಕ ಮಾಡಿ, ಸಮಸ್ಯೆ ಬಗೆಹರಿಸಬೇಕು” ಎಂದು ಆಗ್ರಹಿಸಿದರು.
ಈ ವೇಳೆ ಸಂಶೋಧಕ ಸದಸ್ಯರು, ವಿದ್ಯಾರ್ಥಿಗಳು ಇದ್ದರು.





