ಪಿಡಿಒವೊಬ್ಬರು ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳಿಗೆ ‘ರೆಡ್‌ಹ್ಯಾಂಡ್’ಆಗಿ ಸಿಕ್ಕಿಬಿದ್ದಿದ್ದು, ತಪ್ಪಿಸಿಕೊಳ್ಳಲು ಕಚೇರಿಯಲ್ಲೇ ಕೈ ಕೊಯ್ದುಕೊಂಡು ರಂಪಾಟ ಮಾಡಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಮುಳ್ಳೂರು ಗ್ರಾಮ ಪಂಚಾಯಿತಿ ಪಿಡಿಒ ಮಂಜುಳಾ ಬಂಧಿತ ಅಧಿಕಾರಿ. ಅವರು, ಪಂಚಾಯತಿ ಸಿಬ್ಬಂದಿಯೊಬ್ಬರ ಬಾಕಿ ವೇತನ ಬಿಡುಗಡೆ ಮಾಡಲು ಲಂಚ ಕೇಳಿದ್ದರು. ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ ಎಂದು ವರದಿಯಾಗಿದೆ.
ಮುಳ್ಳೂರು ಗ್ರಾಮದಲ್ಲಿ ನೀರುಗಂಟಿಯಾಗಿದ್ದ ಸ್ವಾಮಿ ಎಂಬುವವರು ಇತ್ತೀಚೆಗೆ ಮೃತಪಟ್ಟಿದ್ದರು. ಉದ್ಯೋಗದಲ್ಲಿದ್ದಾಗಲೇ ಮೃತಪಟ್ಟಿದ್ದರಿಂದ ಪುತ್ರ ಮಹದೇವ್ ಅವರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಲಾಗಿತ್ತು. ಅಲ್ಲದೆ, ಮಹದೇವ್ ಅವರು ತಮ್ಮ ತಂದೆಯ ಎರಡು ವರ್ಷಗಳ ಬಾಕಿ ವೇತನ ಸುಮಾರು 4 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಬೇಕೆಂದು ಪಿಡಿಒಗೆ ಮನವಿ ಮಾಡಿದ್ದರು. ಆ ಬಾಕಿ ವೇತನವನ್ನು ಬಿಡುಗಡೆ ಮಾಡಲು ಪಿಡಿಒ ಮಂಜುಳಾ ಅವರು 50 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಲಂಚ ನೀಡಲು ನಿರಾಕರಿಸಿದ ಮಹದೇವ್, ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಲೋಕಾಯುಕ್ತ ಅಧಿಕಾರಿಗಳ ಯೋಜನೆಯಂತೆ, ಕಚೇರಿಯಲ್ಲಿ ಮಂಜುಳಾ ಅವರು ಮುಂಗಡವಾಗಿ 25 ಸಾವಿರ ರೂ. ಹಣವನ್ನು ಲಂಚವಾಗಿ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪಿಡಿಒ ಮಂಜುಳಾ ಅವರನ್ನು ವಶಕ್ಕೆ ಪಡೆದಿದ್ದಾರೆ.
ಈ ಲೇಖನ ಓದಿದ್ದೀರಾ?: ಇರಾನ್ ಯುದ್ಧ: ಭಾರತ ಕಲಿಯಬೇಕಿರುವ ಪಾಠವೇನು?
ರೆಡ್‌ಹ್ಯಾಂಡ್‌ಆಗಿ ಸಿಕ್ಕಿಬಿದ್ದ ಮಂಜುಳಾ ಅವರು ಕಂಗಾಲಾಗಿದ್ದಾರೆ. ಬಂಧನದಿಂದ ತಪ್ಪಿಸಿಕೊಳ್ಳಲು ಚಾಕುವಿನಿಂದ ತಮ್ಮ ಕೈಯನ್ನು ತಾವೇ ಕೊಯ್ದುಕೊಂಡು ರಾದ್ಧಾಂತ ಮಾಡಿದ್ದಾರೆ. ರಕ್ತಸಿಕ್ತ ಸ್ಥಿತಿಯಲ್ಲಿದ್ದ ಮಂಜುಳಾ ಅವರನ್ನು ತಕ್ಷಣವೇ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಂಜುಳಾ ವಿರುದ್ಧ ಲಂಚ ಪ್ರಕರಣದ ಜೊತೆಗೆ, ತನಿಖೆಗೆ ಅಡ್ಡಿಪಡಿಸಿದ ಪ್ರಕರಣವನ್ನೂ ಲೋಕಾಯುಕ್ತ ಪೊಲೀಸರು ದಾಖಲಿಸಿದ್ದಾರೆ. ಅವರು ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ವಿಚಾರಣೆ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.




