ಹಾಸನಾಂಬ ದೇವಾಲಯದಲ್ಲಿ ಕೆಂಡದ ಮೇಲೆ ನಡೆಯುವ ವಿಧಿ ಕುರಿತಾಗಿ ರಾಷ್ಟ್ರೀಯ ವಿಚಾರವಾದಿಗಳ ಸಂಘದ ರಾಜ್ಯಾಧ್ಯಕ್ಷ ಪ್ರೊ. ನರೇಂದ್ರ ನಾಯಕ್ ಅವರು ಹಾಸನ ಜಿಲ್ಲಾಧಿಕಾರಿ ಲತಾ ಕುಮಾರಿಗೆ ಬಹಿರಂಗ ಪತ್ರವನ್ನು ಬರೆದಿದ್ದಾರೆ. ಈ ವಿಧಿಯು “ತಾಳ್ಮೆಯ ಪರೀಕ್ಷೆಯೂ ಅಲ್ಲ, ನಂಬಿಕೆಯ ಪರೀಕ್ಷೆಯೂ ಅಲ್ಲ. ಸಂಪೂರ್ಣವಾಗಿ ವಿಜ್ಞಾನಾಧಾರಿತ ಪ್ರಕ್ರಿಯೆ” ಎಂದು ಹೇಳಿದ್ದಾರೆ.
ಹಾಸನಾಂಬ ದೇವಾಲಯದಲ್ಲಿ ಸಿದ್ದೇಶ್ವರ ಸ್ವಾಮಿ ರಥೋತ್ಸವ ಹಾಗೂ ಕೆಂಡೋತ್ಸವ ಸಂಭ್ರಮದಲ್ಲಿ ಭಾಗಿಯಾಗಿದ್ದ ಜಿಲ್ಲಾಧಿಕಾರಿ ಲತಾ ಕುಮಾರಿ ಅವರೂ ಕೆಂಡ ಹಾಯ್ದಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ್ದ ಲತಾ ಅವರು, “ಜನರು ಕೆಂಡ ಹಾಯುವುದು ನೋಡಿ ನಾನೂ ಹಾಯಬೇಕು ಎಂದುಕೊಂಡೆ. ಮೊದಲು ಭಯ ಇತ್ತು. ಆದರೆ ದೇವರ ಮೇಲಿನ ಭಕ್ತಿಯಿಂದ ಕೈ ಮುಗಿದು ಹೋದೆ. ಏನೂ ಆಗಲಿಲ್ಲ” ಎಂದು ಹೇಳಿಕೊಂಡಿದ್ದರು.
ಇದನ್ನು ಓದಿದ್ದೀರಾ? ಹಾಸನ | ಹಾಸನಾಂಬ ದೇವಾಲಯ; 9 ದಿನದಲ್ಲಿ 5.5 ಕೋಟಿ ರೂ. ಸಂಗ್ರಹ
ಹಾಸನ ಜಿಲ್ಲಾಧಿಕಾರಿಯ ಈ ಹೇಳಿಕೆ ಕುರಿತಾಗಿ ಬಹಿರಂಗ ಪತ್ರ ಬರೆದಿರುವ ಪ್ರೊಫೆಸರ್ ನರೇಂದ್ರ ನಾಯಕ್, “ಪತ್ರಿಕಾ ವರದಿಗಳಲ್ಲಿ ನೀವು ದೇವಾಲಯದ ಹಬ್ಬದಲ್ಲಿ ‘ಕೆಂಡದ ಮೇಲೆ ನಡೆಯುವ ವಿಧಿ’ ನೆರವೇರಿಸಿದ್ದೀರಿ ಎಂಬುದು ನನ್ನ ಗಮನಕ್ಕೆ ಬಂದಿದೆ. ಅದನ್ನು ‘ನಂಬಿಕೆ ಮತ್ತು ತಾಳ್ಮೆಯ ಪರೀಕ್ಷೆ’ ಎಂದು ನೀವು ವರ್ಣಿಸಿದ್ದೀರಿ ಎಂದು ವರದಿಯಾಗಿದೆ. ಆದರೆ ಕೆಂಡ ಹಾಯುವ ಕೆಲಸ ‘ತಾಳ್ಮೆಯ ಪರೀಕ್ಷೆಯೂ ಅಲ್ಲ, ನಂಬಿಕೆಯ ಪರೀಕ್ಷೆಯೂ ಅಲ್ಲ’. ಅದು ಸಂಪೂರ್ಣವಾಗಿ ವಿಜ್ಞಾನಾಧಾರಿತ ಪ್ರಕ್ರಿಯೆ. ಈ ಘಟನೆ ‘Leidenfrost Effect’ ಎನ್ನುವ ಪ್ರಕೃತಿಶಾಸ್ತ್ರೀಯ ಪರಿಣಾಮದಿಂದ ಸಂಭವಿಸುತ್ತದೆ. ಇದರ ವಿವರವನ್ನು ‘Leidenfrost effect – Wikipedia’ ಪುಟದಲ್ಲಿ ನೋಡಿ ತಿಳಿಯಬಹುದು” ಎಂದು ಹೇಳಿದ್ದಾರೆ.
“ನಾವು ಅದನ್ನು ವರ್ಷಗಳ ಹಿಂದೆ ‘ಪವಾಡಗಳ ರಹಸ್ಯ ಬಯಲು- ಹಿಂದಿರುವ ವಿಜ್ಞಾನ’ ಎಂಬ ಕಾರ್ಯಕ್ರಮಗಳಲ್ಲಿ ಬಯಲು ಮಾಡಿ ಪ್ರದರ್ಶಿಸಿದ್ದೇವೆ. ಜನರು ಅದು ದೈವಿಕ ಶಕ್ತಿಯಿಂದ ಆಗುವುದಿಲ್ಲವೆಂಬುದನ್ನು ಅರ್ಥಮಾಡಿಕೊಂಡ ನಂತರ ಆ ಪ್ರದರ್ಶನಗಳನ್ನು ನಿಲ್ಲಿಸಿದ್ದೇವೆ. ಆ ಸಮಯದ ಒಂದು ವೀಡಿಯೋ ಯೂಟ್ಯೂಬ್‌ನಲ್ಲಿ ಇದೆ” ಎಂದಿರುವ ನರೇಂದ್ರ ನಾಯಕ್ ಅವರು ಲಿಂಕ್ ಅನ್ನೂ ಉಲ್ಲೇಖಿಸಿದ್ದಾರೆ. (https://www.youtube.com/watch?v=EYZbTjBsVyU)
“ಅದರಲ್ಲೂ, ಎಲ್ಲ ವರ್ಗದ ಜನರೂ ಯಾವುದೇ ಅತೀಂದ್ರಿಯ ಶಕ್ತಿಯ ಅವಲಂಬನೆಯಿಲ್ಲದೆ ಅಗ್ನಿಯ ಮೇಲೆ ನಡೆಯುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ನೀವು ಗಮನಿಸಬೇಕಾದ ಮತ್ತೊಂದು ಅಂಶವೆಂದರೆ, ಇದು ‘ಕರ್ನಾಟಕ ಮಾನವ ವಿರೋಧಿ ಮತ್ತು ಅಮಾನವೀಯ ಕಪಟಾಚರಣೆಗಳು ಹಾಗೂ ಕಪ್ಪುಮ್ಯಾಜಿಕ್(ಮಾಟ,ಮಂತ್ರ) ನಿಷೇಧ ಮತ್ತು ನಿರ್ಮೂಲನೆ ಕಾಯ್ದೆ, 2017’ ಅಡಿಯಲ್ಲಿ ಅಪರಾಧ ಕಾರ್ಯವಾಗಿದೆ” ಎಂದು ತಿಳಿಸಿದ್ದಾರೆ.
“ಈ ಕಾಯ್ದೆಯ ಕಾಲಂ 10 ಪ್ರಕಾರ: ಜನರನ್ನು ಬಲವಂತವಾಗಿ ಕೆಂಡದ ಮೇಲೆ ನಡೆಯುವಂತೆ ಮಾಡುವ ಕಾರ್ಯವನ್ನು ನಿಷೇಧಿಸಲಾಗಿದೆ. ನಿಮಗೆ ಈ ಕಾಯ್ದೆಯ ಉಳಿದ ವಿಧಿಗಳ (1 ರಿಂದ 9) ಬಗ್ಗೆ ಸಹ ಸೂಕ್ತ ಅರಿವಿರಲಿದೆ ಎಂದು ನಾನು ನಂಬಿದ್ದೇನೆ. ಹಾಗೆಯೇ ಭಾರತ ಸಂವಿಧಾನದ ವಿಧಿ 51ಎ(ಎಚ್) ಪ್ರಕಾರ, ಪ್ರತಿಯೊಬ್ಬ ನಾಗರಿಕನ ಕರ್ತವ್ಯಗಳಲ್ಲಿ ಒಂದಾದದ್ದು ವೈಜ್ಞಾನಿಕ ಮನೋಭಾವ, ವಿಚಾರಶೀಲತೆ ಮತ್ತು ಮಾನವೀಯತೆಯ ಅಭಿವೃದ್ಧಿ ಬೆಳೆಸಿಕೊಳ್ಳುವುದು. ಹಾಗಾಗಿ ಕೆಂಡದ ಮೇಲೆ ನಡೆದು ಅದನ್ನು ದೈವಿಕ ಶಕ್ತಿ ಅಥವಾ ಅತೀಂದ್ರಿಯ ಕಾರಣಗಳಿಗೆ ಸಂಬಂಧಿಸಿದಂತೆ ತೋರಿಸುವುದು ಅವೈಜ್ಞಾನಿಕ” ಎಂದು ಸ್ಪಷ್ಟಪಡಿಸಿದ್ದಾರೆ.
“ನಾನು ಹಾಸನದಲ್ಲಿ ‘ವೈಜ್ಞಾನಿಕ ಮನೋಭಾವ ಬೆಳೆಸುವ ಕಾರ್ಯಕ್ರಮ’ ಆಯೋಜಿಸಲು ಉದ್ದೇಶಿಸಿದ್ದೇನೆ. ಆ ಕಾರ್ಯಕ್ರಮದಲ್ಲಿ ಯಾವುದೇ ಧಾರ್ಮಿಕ ವಿಧಿ ಅಥವಾ ದೇವತಾ ನಂಬಿಕೆಯಿಲ್ಲದೆ ಕೆಂಡದ ಮೇಲೆ ನಡೆಯುವ ಪ್ರಾತ್ಯಕ್ಷಿಕೆ ಕೂಡ ಇರಲಿದೆ. ಈ ಕಾರ್ಯಕ್ರಮವನ್ನು ‘ವೈಜ್ಞಾನಿಕ ಮನೋಭಾವದ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುವ ಸಂಘಟನೆಗಳು’ ಸಹಯೋಗದಲ್ಲಿ ಆಯೋಜಿಸಲಾಗುವುದು. ಇದು ಸಂಪೂರ್ಣವಾಗಿ ಧರ್ಮರಹಿತ ಹಾಗೂ ವೈಜ್ಞಾನಿಕ ಮನೋಭಾವದ ಪ್ರಚಾರಕ್ಕಾಗಿ ಮಾತ್ರ ಉದ್ದೇಶಿತವಾಗಿರುತ್ತದೆ. ಈ ಪ್ರಯತ್ನಕ್ಕೆ ಅಗತ್ಯವಿರುವ ವ್ಯವಸ್ಥೆಗಳನ್ನು ಕಲ್ಪಿಸಿ” ಎಂದು ಜಿಲ್ಲಾಧಿಕಾರಿ ಬಳಿ ಮನವಿ ಮಾಡಿದ್ದಾರೆ.





