ಮನುಷ್ಯ ಮೂಲತಃ ಸಂಘಜೀವಿ. ಕುಟುಂಬ, ಗ್ರಾಮ, ಸಮಾಜ ಎಲ್ಲದರ ಅಂತರಾಳದಲ್ಲಿ ಸಂಬಂಧ ಎಂಬ ನಂಟೇ ಮಾನವ ಸಮಾಜದ ಬುನಾದಿ. ವಿಭಿನ್ನ ಭಾಷೆ, ಧರ್ಮ, ಸಂಸ್ಕೃತಿಯ ಜನರು ಪಕ್ಕದಲ್ಲೇ ವಾಸಿಸುತ್ತಿದ್ದರೂ ನೆರೆಹೊರೆಯ ಸಂಬಂಧ ಮಾತ್ರ ಅತ್ಯಂತ ನಿಕಟ. ಆದರೆ ಇತ್ತೀಚಿನ ನಗರೀಕರಣ, ಖಾಸಗೀತನ ಮತ್ತು ವೇಗದ ಜೀವನಶೈಲಿಯಿಂದ ನೆರೆಹೊರೆಯ ಮೌಲ್ಯಗಳು ಕುಂದುತ್ತಿರುವ ಹಿನ್ನೆಲೆ ಈ ಸಂಬಂಧಗಳನ್ನು ಪುನಃ ಬಲಪಡಿಸುವ ಅಗತ್ಯ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆಯು ನೆವಂಬರ್ 21ರಿಂದ 30ರವರೆಗೆ ದೇಶವ್ಯಾಪಿ “ಮಾದರಿ ನೆರೆಹೊರೆ, ಮಾದರಿ ಸಮಾಜ” ಎಂಬ ಅಭಿಯಾನ ಹಮ್ಮಿಕೊಂಡಿದೆ. ಸಮಾಜದಲ್ಲಿ ಸೌಹಾರ್ದ, ಸಹಅಸ್ತಿತ್ವ, ಪರಸ್ಪರ ಸಹಕಾರ ಮತ್ತು ಮಾನವೀಯತೆಯನ್ನು ವೃದ್ಧಿಸುವ ಉದ್ದೇಶವು ಅಭಿಯಾನ ರೂಪ ಪಡೆದಿದ್ದು, ಇದರಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಸಂಘಟನೆ ಮನವಿ ಮಾಡಿದೆ.
ಈ ಕುರಿತು ಪತ್ರಿಕಾಗೋಷ್ಠಿ ನಡೆಸಿರುವ ಸಂಘಟನೆಯ ಮುಖಂಡರು, “ಇಸ್ಲಾಮಿಕ್ ಗ್ರಂಥಗಳಲ್ಲೂ ನೆರೆಹೊರೆಯವರ ಹಕ್ಕುಗಳಿಗೆ ಅತ್ಯಂತ ಮಹತ್ವ ನೀಡಲಾಗಿದೆ. ಪವಿತ್ರ ಕುರ್‌ಆನ್ ನಲ್ಲಿ ಆಪ್ತ ನೆರೆಹೊರೆಯವರಿಗೂ, ಅಪರಿಚಿತ ನೆರೆಹೊರೆಯವರಿಗೂ ಉತ್ತಮ ರೀತಿಯಲ್ಲಿ ವರ್ತಿಸಿರಿ (ಅನ್ನಿಸಾ: 36) ಎಂದು ತಿಳಿಸಲಾಗಿದೆ. ಪ್ರವಾದಿ ಮುಹಮ್ಮದ್ (ಸ)ರ ವಚನದಲ್ಲೂ ʼಯಾರ ಕಾರಣದಿಂದ ನೆರೆಹೊರೆಯವರು ಸುರಕ್ಷಿತವಾಗಿಲ್ಲವೋ, ಅವರು ಸತ್ಯ ವಿಶ್ವಾಸಿಯಲ್ಲʼ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಈ ಪವಿತ್ರ ಮಾರ್ಗದರ್ಶಕ ತತ್ವಗಳನ್ನು ಸಮಾಜದಲ್ಲಿ ಜಾಗೃತಿಗೊಳಿಸುವುದೂ ಈ ಅಭಿಯಾನದ ಪ್ರಮುಖ ಗುರಿಯಾಗಿದೆ” ಎಂದಿದ್ದಾರೆ.

“ಅಭಿಯಾನದ ಅಂಗವಾಗಿ ದೇಶಾದ್ಯಂತ ಬೃಹತ್ ಪ್ರಮಾಣದ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಪ್ರವಚನಗಳು, ಮೊಹಲ್ಲಾ ಸಭೆಗಳು, ಕರಪತ್ರ ವಿತರಣೆ, ಮನೆಮನೆಗೆ ಭೇಟಿ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಚಾರ ನಿಯಮ ಜಾಗೃತಿ ಸಮಾವೇಶಗಳು, ವಿದ್ಯಾರ್ಥಿ-ಯುವಕರ ರ್ಯಾಲಿಗಳು ಸೇರಿದಂತೆ ಮುಂತಾದ ವೈವಿಧ್ಯಮಯ ಚಟುವಟಿಕೆಗಳು ನಡೆಯಲಿವೆ. ನೆರೆಹೊರೆಯವರ ಮಧ್ಯೆ ಇರುವ ಅಂತರಗಳನ್ನು ಕಡಿಮೆ ಮಾಡಿ, ಸಮಾಜದಲ್ಲಿ ಸೌಹಾರ್ದ ಮತ್ತು ಪರಸ್ಪರ ಗೌರವವನ್ನು ಬೇರೂರಿಸುವುದು ಈ ಕಾರ್ಯಕ್ರಮದ ಮುಖ್ಯ ಧ್ಯೇಯ” ಎಂದು ವಿವರಿಸಿದ್ದಾರೆ.
ಇದನ್ನೂ ಓದಿ: ಕಲಬುರಗಿ | ಗುಲ್ಬರ್ಗಾ ವಿವಿಗೆ ಅಂಬೇಡ್ಕರ್ ಹೆಸರಿಡುವಂತೆ ದಸಂಸ ಆಗ್ರಹ
“ಈ ಅಭಿಯಾನದಲ್ಲಿ ವ್ಯಾಪಕವಾಗಿ ಜನತೆ, ವಿಶೇಷವಾಗಿ ಯುವಕರು ಮತ್ತು ವಿದ್ಯಾರ್ಥಿಗಳು ಶ್ರದ್ಧೆಯಿಂದ ಪಾಲ್ಗೊಂಡರೆ, ಸಮಾಜದ ಒಳಗೆ ಪ್ರೀತಿ–ವಿಶ್ವಾಸದ ನಂಟುಗಳು ಮತ್ತಷ್ಟು ಬಲವಾಗಲಿವೆ” ಎಂದು ಜಮಾಅತೆ ಇಸ್ಲಾಮೀ ಹಿಂದ್ ಆಶಾಭಾವನೆ ವ್ಯಕ್ತಪಡಿಸಿದೆ. ಈ ಗಂಭೀರ ಸಾಮಾಜಿಕ ಅಭಿಯಾನಕ್ಕೆ ಎಲ್ಲಾ ಮಾಧ್ಯಮ ಮಿತ್ರರು ಸಹಕರಿಸಬೇಕೆಂದು ಸಂಘಟನೆಯು ಕಳಕಳಿ ಮನವಿ ಸಲ್ಲಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯಾಧ್ಯಕ್ಷ ಡಾ. ಮುಹಮ್ಮದ್ ಸಾದ್ ಬೆಳ್ಳಾಮಿ, ರಾಜ್ಯ ಕಾರ್ಯದರ್ಶಿಗಳಾದ ಮೌಲಾನಾ ಅಬ್ದುಲ್ ಗಫಾರ್ ಹಾಮಿದ್ ಉಮ್ರ, ಮೌಲಾನಾ ವಹೀದುದ್ದೀನ್ ಖಾನ್ ಉಮ್ರ ಮದನಿ, ಜನಾಬ್ ಯೂಸುಫ್ ಕನ್ನಿ, ಮೌಲಾನಾ ಲಬೀದ್ ಶಾಫಿ ಹಾಗೂ ತಲಾ ಖಾನಂ ಉಪಸ್ಥಿತರಿದ್ದರು.




