ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಎಐಸಿಸಿ ವರಿಷ್ಟರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ಸಿಲುಕಿಸಲು ಪಿತೂರಿ ನಡೆಸಿರುವ ಕೇಂದ್ರ ಸರ್ಕಾರದ ನಡೆ ಖಂಡಿಸಿ ಮಂಡ್ಯ ಜಿಲ್ಲಾ ಕಾಂಗ್ರೆಸ್ ಪಕ್ಷ ಪ್ರತಿಭಟನೆ ನಡೆಸಿ, ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನ ನಡೆಸಿತು.
ಕೇಂದ್ರ ಸರ್ಕಾರದ ಕಾರ್ಯವೈಖರಿ ಜನವಿರೋಧಿಯಾಗಿದ್ದು, ಸಂವಿಧಾನ ವಿರೋಧಿ ಧೋರಣೆಗೆ ಮುಂದಾಗಿರುವ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಪಕ್ಷದ ನಾಯಕರ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಸುಭಾಷ್ ನಗರದಲ್ಲಿರುವ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನ ನಡೆಸಿದಾಗ ಪೊಲೀಸರು ಬಂದೋಬಸ್ತ್ ಮಾಡಿ, ಬ್ಯಾರಿಕೆಡ್ ಹಾಕಿ, ಪ್ರತಿಭಟನಾಕಾರರನ್ನು ತಡೆಯುವಲ್ಲಿ ಯಶಸ್ವಿಯಾದರು.
ಪ್ರತಿಭಟನಕಾರರನ್ನು ಬಂಧಿಸಲು ಮುಂದಾದಾಗ ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ ಕಾಂಗ್ರೆಸ್ ಮುಖಂಡರು ಪ್ರಧಾನಿ ನರೇಂದ್ರ ಮೋದಿ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮುತ್ತಿಗೆ ಸಂದರ್ಭದಲ್ಲಿ ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್ ಮಾತನಾಡಿ, ಕಾಂಗ್ರೆಸ್ ಪಕ್ಷವನ್ನು ಹಣಿಯಲು ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಹೆರಾಲ್ಡ್ ಪ್ರಕರಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಇವರಿಗೆ ನ್ಯಾಯಾಲಯದ ಆದೇಶ ಹಿನ್ನಡೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಕಾಂಗ್ರೆಸ್ ಮುಖಂಡರ ಮೇಲಿದ ಹಗೆತನವನ್ನು ಕೈಬಿಡಬೇಕೆಂದು ಒತ್ತಾಯಿಸಿದರು.
ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಂ.ಎಸ್. ಚಿದಂಬರ್ ಮಾತನಾಡಿ, ಕಾಂಗ್ರೆಸ್ ನಾಯಕರ ವಿರುದ್ದ ಬಿಜೆಪಿ ಪಿತೂರಿ ಮಾಡಿದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸಿಕ್ಕಿಸುವ ಪ್ರಯತ್ನ ಮಾಡಿದ್ರು ವಿಫಲವಾಗಿದೆ. ನಮ್ಮ ನಾಯಕರಿಗೆ ಜಯಸಿಕ್ಕಿದೆ. ಬಿಜೆಪಿ ಕುತಂತ್ರದಿಂದ ಕಾನೂನು ಬಾಹಿರ ಪ್ರಕರಣ ಎಂದು ಸಾಬೀತಾಗಿದೆ. ಬಿಜೆಪಿಯವರು ತಕ್ಷಣವೇ ಕ್ಷಮೆಯಾಚಿಸಬೇಕು ಎಂದು ಆಗ್ರಹ ಪಡಿಸಿದರು.
ಈ ಸುದ್ದಿ ಓದಿದ್ದೀರಾ? ʼಈ ದಿನ ಸರಣಿʼ ಭಾಗ-1 | ಮಂಡ್ಯದ ಕಾಳಿಕಾಂಬ ಕೊಳಗೇರಿಯ ಕೋರ್ಟ್ ತೀರ್ಪು ಮೀರಿದ ಬಲಾಢ್ಯರು: ನ್ಯಾ. ಎಂ. ನಾಗಪ್ರಸನ್ನ ಕಳವಳ
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಿ.ಎಂ. ದ್ಯಾವಪ್ಪ, ಕಿಶಾನ್ ಘಟಕ ಚಿನಕುರುಳಿ ರಮೇಶ್, ಕೃಷ್ಣೇಗೌಡ, ಎಸ್ಸಿ,ಎಸ್ಟಿ ಘಟಕ ಮಾಜಿ ಜಿಲ್ಲಾಧ್ಯಕ್ಷ ಶ್ರೀಧರ್, ಚಿಕ್ಕಬಳ್ಳಿ ಕೃಷ್ಣ, ಶಬರಿನ್ ತಾಜ್, ಪದ್ಮ ಮೋಹನ್, ಬಸರಾಳು ಕೃಷ್ಣೇಗೌಡ, ಅಭಿಲಾಶ್, ಕಿರಣ್ ಸೇರಿದಂತೆ ಇನ್ನಿತರರು ಇದ್ದರು.





