ಕಾರವಾರ: ಜಿಲ್ಲೆಯ ಜನತೆಯ ಬಹುದಿನಗಳ ನಿರೀಕ್ಷೆಯಾಗಿದ್ದ ಕಾರವಾರದಿಂದ ಬೆಂಗಳೂರಿಗೆ ಸುಸಜ್ಜಿತ ಸರ್ಕಾರಿ ಬಸ್ ಸೌಲಭ್ಯಕ್ಕೆ ಕೊನೆಗೂ ಚಾಲನೆ ಸಿಕ್ಕಿದೆ. ಕಾರವಾರ ಬಸ್ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಂ.ಸಿ.ಎ (MCA) ಅಧ್ಯಕ್ಷರು ಹಾಗೂ ಶಾಸಕರಾದ ಸತೀಶ್ ಸೈಲ್ ಅವರು ನೂತನ ‘ಪಲ್ಲಕ್ಕಿ’ ಬಸ್‌ಗಳಿಗೆ ಹಸಿರು ನಿಶಾನೆ ತೋರಿದರು.
ಬಸ್ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕರು, “ಕಾರವಾರದ ಜನರಿಗೆ ಬೆಂಗಳೂರು ಪ್ರಯಾಣಕ್ಕಾಗಿ ಉತ್ತಮ ಸಾರಿಗೆ ವ್ಯವಸ್ಥೆಯ ಅಗತ್ಯವಿತ್ತು. ಸದ್ಯಕ್ಕೆ ಪಲ್ಲಕ್ಕಿ ಬಸ್ ಆರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನು ಎರಡು ಹೆಚ್ಚುವರಿ ಪಲ್ಲಕ್ಕಿ ಬಸ್‌ಗಳು ಹಾಗೂ ಮಲ್ಟಿ ಆಕ್ಸೆಲ್ ವೋಲ್ವೋ ಬಸ್ ಸೌಲಭ್ಯವನ್ನು ಒದಗಿಸಲಾಗುವುದು,” ಎಂದು ಭರವಸೆ ನೀಡಿದರು.
ಅಲ್ಲದೆ, ಈ ನೂತನ ಬಸ್‌ಗಳು ಇತ್ತೀಚೆಗಷ್ಟೇ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಉದ್ಘಾಟಿಸಿದ ಹೊಸ ಸೇತುವೆಯ ಮುಖಾಂತರವೇ ಸಂಚರಿಸಲಿವೆ ಎಂದು ಅವರು ಮಾಹಿತಿ ನೀಡಿದರು.
ರಾಜ್ಯ ಸರ್ಕಾರದ ‘ಶಕ್ತಿ ಯೋಜನೆ’ಯಿಂದ ಸಾರಿಗೆ ಸಂಸ್ಥೆಗಳು ನಷ್ಟ ಅನುಭವಿಸುತ್ತಿವೆ ಎಂಬ ಟೀಕೆಗಳನ್ನು ಶಾಸಕರು ಇದೇ ಸಂದರ್ಭದಲ್ಲಿ ತಳ್ಳಿಹಾಕಿದರು. “ಶಕ್ತಿ ಯೋಜನೆಯು ಸಾರಿಗೆ ಸಂಸ್ಥೆಗೆ ಆರ್ಥಿಕ ಬಲ ನೀಡಿದೆ. ವಾಯುವ್ಯ ಕರ್ನಾಟಕ ಸಾರಿಗೆಯ ಉತ್ತರ ಕನ್ನಡ ವಿಭಾಗವು ಈ ವರ್ಷ ಬರೊಬ್ಬರಿ 13 ಕೋಟಿ ರೂಪಾಯಿ ಲಾಭ ಗಳಿಸಿದೆ.
ಈ ಯಶಸ್ಸಿಗೆ ವಿಭಾಗೀಯ ಅಧಿಕಾರಿಗಳು, ಮ್ಯಾನೇಜರ್ ಹಾಗೂ ಮುಖ್ಯವಾಗಿ ಹಗಲಿರುಳು ಶ್ರಮಿಸುವ ಚಾಲಕರು ಮತ್ತು ನಿರ್ವಾಹಕರು ಕಾರಣ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ ? ಶಿರಸಿ | ರಾಜ್ಯದ ಜಿಎಸ್ಟಿ ಪಾಲು ಕೊಡಿಸಲು ಬಿಜೆಪಿ ನಾಯಕರು ತಮ್ಮ ತಾಕತ್ತು ತೋರಿಸಲಿ: ಭೀಮಣ್ಣ ನಾಯ್ಕ ವಾಗ್ದಾಳಿ
ಶಕ್ತಿ ಯೋಜನೆಯ ಉಚಿತ ಪ್ರಯಾಣದ ಬಗ್ಗೆ ಮಾತನಾಡಿದ ಅವರು, “ಸರ್ಕಾರವು ಬಡವರಿಗಾಗಿ ನೀಡಿದ ಭರವಸೆಯಂತೆ ನಡೆದುಕೊಳ್ಳುತ್ತಿದೆ. ಆದರೆ, ಆರ್ಥಿಕವಾಗಿ ಸಬಲರಾಗಿರುವ ಮಹಿಳೆಯರು ಅಥವಾ ಮಹಿಳಾ ಅಧಿಕಾರಿಗಳು ಇಚ್ಛಿಸಿದಲ್ಲಿ ಸ್ವಯಂಪ್ರೇರಿತರಾಗಿ ಟಿಕೆಟ್ ಖರೀದಿಸಿ ಪ್ರಯಾಣಿಸಬಹುದು. ಇದಕ್ಕೆ ಯಾವುದೇ ನಿರ್ಬಂಧವಿಲ್ಲ, ಆರ್ಥಿಕವಾಗಿ ಶಕ್ತರಾದವರು ಟಿಕೆಟ್ ಪಡೆಯಲು ಮುಕ್ತ ಅವಕಾಶವಿದೆ,” ಎಂದು ತಿಳಿಸಿದರು.
ಈ ಸುಸಜ್ಜಿತ ಬಸ್ ಸೌಲಭ್ಯ ಒದಗಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಶಾಸಕರು ಸರ್ಕಾರದ ಪರವಾಗಿ ಧನ್ಯವಾದಗಳನ್ನು ಅರ್ಪಿಸಿದರು.
ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷರಾದ ರಾಜೇಂದ್ರ ರಾಣೆ, ಡಿಪೋ ಮ್ಯಾನೇಜರ್ ಸೌಮ್ಯ ನಾಯ್ಕ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.





