ಕರ್ನಾಟಕ ರಾಜ್ಯದ ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿರುವ 50 ಬುಡಕಟ್ಟು ಸಮುದಾಯಗಳ ಸಂಶೋಧನೆ, ತರಬೇತಿ, ಮೌಲ್ಯಮಾಪನ, ಕುಲಶಾಸ್ತ್ರೀಯ ಅಧ್ಯಯನ, ಜಾಗೃತಿ ಕಾರ್ಯಕ್ರಮಗಳು, ಸಾಕ್ಷಾಚಿತ್ರ ನಿರ್ಮಾಣ, ಗ್ರಂಥಾಲಯ ಹಾಗೂ ಬುಡಕಟ್ಟು ವಸ್ತುಸಂಗ್ರಹಾಲಯ ಸ್ಥಾಪನೆ ಹಾಗೂ ಸರ್ಕಾರಗಳ ಕಾರ್ಯಕ್ರಮಗಳ ಕುರಿತು ಕಾರ್ಯಾಗಾರಗಳ ಮೂಲಕ ಆದಿವಾಸಿ ಮತ್ತು ಬುಡಕಟ್ಟು ಸಮುದಾಯಗಳಿಗೆ ಸಂಬಂಧಿಸಿದ ವರದಿಗಳನ್ನು ಸಿದ್ದಪಡಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯನ್ನು ಆರಂಭಿಸಲಾಗಿದೆ. ಈ ಸಂಸ್ಥೆ, ಇದ್ದೂ ಇಲ್ಲದಂತಾಗಿದೆ.
2009ರಲ್ಲಿ ಬೆಂಗಳೂರಿನಲ್ಲಿ ರಚನೆಯಾದ ಸಂಸ್ಥೆಯನ್ನು 2010ರಲ್ಲಿ ಬುಡಕಟ್ಟು ಸಮುದಾಯಗಳು ಹೆಚ್ಚಾಗಿರುವ ಮೈಸೂರಿಗೆ ಸ್ಥಳಾಂತರಿಸಲಾಯಿತು. ಇದರಿಂದ, ಬುಡಕಟ್ಟು, ಆದಿವಾದಿ ಸಮುದಾಯಗಳೊಂದಿಗೆ ಕೆಲಸ ಮಾಡಲು ಹೆಚ್ಚಿನ ಅನುಕಾಲವಾಗುತ್ತದೆ ಎಂಬ ಆಶಯವಿತ್ತು. ಸಂಸ್ಥೆ ಆರಂಭವಾಗಿ ಈಗ ಬರೋಬ್ಬರಿ 15 ವರ್ಷಗಳನ್ನು ಪೂರೈಸಿದೆ. ಸರ್ಕಾರಗಳಿಂದ ಸುಮಾರು 30 ಕೋಟಿ ರೂ. ಅನುದಾನ ಪಡೆಯಲಾಗಿದ್ದು, ಸುಮಾರು 200ಕ್ಕೂ ಹೆಚ್ಚು ಸಂಶೋಧನಾ ವರದಿಗಳು ಹಾಗೂ ಕಾರ್ಯಕ್ರಮಗಳನ್ನು ಮಾಡಲಾಗಿದೆ ಎಂದು ಸಂಸ್ಥೆ ಹೇಳಿಕೊಳ್ಳುತ್ತಿದೆ. ಆದರೆ, ಸಂಸ್ಥೆಯ ಒಂದೇ ಒಂದು ಸಂಶೋದನಾ ವರದಿಯೂ ಈವರೆಗೆ ಯೋಜನೆಗಳಾಗಿ ಜಾರಿಗೆ ಬಂದ ಉದಾಹರಣೆಗಳಿಲ್ಲ.
ಇಂದಿಗೂ, ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದೆ ಬುಡಕಟ್ಟು, ಆದಿವಾಸಿ ಸಮುದಾಯದ ಜನರು ಕಾಡು-ಮೇಡುಗಳಲ್ಲಿ ಅಲೆಯುತ್ತಾ, ದೈನಂದಿನ ಬದುಕಿಗಾಗಿ ಹರಸಾಹಸ ಪಡುತ್ತಿದ್ದಾರೆ. ಅನೇಕ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಈ ಸಂಸ್ಥೆ ಅಂತಹ ಸಮುದಾಯಗಳ ಅಭಿವೃದ್ಧಿಗೆ ಯಾವುದೇ ರೀತಿಯಲ್ಲಿಯೂ ಪೂರಕವಾಗಿಲ್ಲ ಎಂಬುದು ಅಕ್ಷರಶಃ ವಿಪರ್ಯಾಸದ ಸಂಗತಿ.
ಸಂಸ್ಥೆಯಲ್ಲಿ ಸಿದ್ದವಾಗುವ ಬಹುಪಾಲು ವರದಿಗಳು ಅನುದಾನಗಳ ಬಳಕೆಗಷ್ಟೇ ಸೀಮಿತವಾಗಿವೆ. ಸಂಸ್ಥೆಯ ಅಧಿಕಾರಿ, ಸಿಬ್ಬಂದಿಗಳು ಸಮುದಾಯಗಳ ವಾಸಸ್ಥಳಕ್ಕೆ ಹೋಗಿ, ಸಂಶೋಧನೆಗಳನ್ನು ನಡೆಸದೆ, ಕಚೇರಿಯಲ್ಲಿಯೇ ಕುಳಿತು ತಮ್ಮ ಗ್ರಹಿಕೆಗೆ ತಕ್ಕಂತೆ ವರದಿಗಳನ್ನು ಸಿದ್ದಪಡಿಸುತ್ತಿದ್ದಾರೆ ಎಂಬ ಆರೋಪಗಳೂ ಇವೆ. ಹೀಗೆ, ಸಿದ್ದಗೊಳಿಸಿದ ಕೆಲವು ವರದಿಗಳೂ ಕೂಡ ಸರ್ಕಾರಕ್ಕೆ ಸಲ್ಲಿಯಾಗದೆ ಸಂಸ್ಥೆಯ ಕಚೇರಿಯಲ್ಲಿಯೇ ಧೂಳು ಹಿಡಿಯುತ್ತಿವೆ. ಅದಾಗ್ಯೂ, ಈ ವರದಿಗಳು ಆದಿವಾಸಿ ಮತ್ತು ಬುಡಕಟ್ಟು ಸಮುದಾಯಗಳ ವಾಸ್ತವ ಸ್ಥಿತಿಗತಿಗಳನ್ನು ನಿರೂಪಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ ಎಂದು ಈ ಸಮುದಾಯಗಳೇ ಆರೋಪಿಸುತ್ತಿವೆ.
ಸಂಸ್ಥೆ ಆರಂಭವಾದ ಬಳಿಕ ಈವರೆಗೆ ನಾಲ್ವರು ನಿರ್ದೇಶಕರು ಸಂಸ್ಥೆಯ ಆಡಳಿತ ನಡೆಸಿದ್ದಾರೆ. ಅವರಲ್ಲಿ, ಒಬ್ಬರು ತಮ್ಮೆಲ್ಲಾ ಪ್ರಭಾವಗಳನ್ನು ಬಳಸಿಕೊಂಡು ಸುಮಾರು 10 ವರ್ಷಕ್ಕೂ ಹೆಚ್ಚಿನ ಕಾಲ ಸಂಸ್ಥೆಯಲ್ಲಿಯೇ ಇದ್ದರು. ಆದರೆ, ಆದಿವಾಸಿ ಮತ್ತು ಬುಡಕಟ್ಟು ಸಮುದಾಯಗಳ ನಿರಂತರ ಹೋರಾಟಕ್ಕೆ ಮಣಿದ ಹಿಂದಿನ ಸರ್ಕಾರ, ಅವರನ್ನು ವರ್ಗಾವಣೆ ಮಾಡಿತು. ಆದರೂ, ಅವರು ಇದೇ ಹುದ್ದೆಗೆ ಬರಲು ಈಗಲೂ ನಿರಂತರವಾಗಿ ಲಾಭಿ ಮಾಡುತ್ತಲೇ ಇದ್ದಾರೆ. ಇದರ ಹಿಂದಿನ ಮರ್ಮವಾದರೂ ಏನು ಎಂಬ ಪ್ರಶ್ನೆ ಕಾಡಕೊಡಗಿದೆ.
ಕಾಡಂಚಿನಲ್ಲಿ ವಾಸಿಸುತ್ತಿರುವ ಬುಡಕಟ್ಟು, ಆದಿವಾಸಿ ಸುಮುದಾಯಗಳನ್ನು ಪ್ರತಿನಿಧಿಸುವ ಏಕೈಕ ಸಂಸ್ಥೆಯಾಗಿರುವ ಕರ್ನಾಟಕ ರಾಜ್ಯದ ಬುಡಕಟ್ಟು ಸಂಶೋಧನಾ ಸಂಸ್ಥೆ, ತನ್ನ ಕರ್ತವ್ಯಗಳನ್ನು ಪಡೆದು, ಸಮುದಾಯಗಳನ್ನು ನಿರ್ಲಕ್ಷಿಸಿ, ಬೇಜವಾಬ್ದಾರಿತನದಿಂದ ಕಾರ್ಯನಿರ್ವಹಿಸುತ್ತಿದೆ. ಆದಿವಾಸಿ ಮತ್ತು ಬುಡಕಟ್ಟು ಸಮುದಾಯಗಳಿಗೆ ಆರೋಗ್ಯ ಶಿಬಿರಗಳು, ವಿಚಾರ ಸಂಕಿರಣಗಳು, ಕಾರ್ಯಗಾರಗಳನ್ನು ನಡೆಸಲು ಸಂಸ್ಥೆಗೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗುತ್ತಿದ್ದರೂ, ಸಂಸ್ಥೆ ಯಾವುದೇ ಕೆಲಸ ಮಾಡುತ್ತಿಲ್ಲ ಎಂಬ ಆರೋಪಗಳು ಹಿಂದಿನಿಂದಲೂ ಇವೆ. ಆದರೆ, ಆರೋಪಗಳಿಗೂ ಸಂಸ್ಥೆ ತಲೆಕೆಡಿಸಿಕೊಳ್ಳದೆ, ಜಡ್ಡುಗಟ್ಟಿದೆ.
ಸಂಸ್ಥೆಯ ಕಾರ್ಯವೈಕರಿಯ ಬಗ್ಗೆ ಅಸಮಾಧಾನಗೊಂಡಿರುವ ಕೇಂದ್ರ ಸರ್ಕಾರ 2016ರಿಂದ ಈವರೆಗೆ ನಯಾಪೈಸೆ ಅನುದಾನ ಬಿಡುಗಡೆ ಮಾಡಿಲ್ಲ. ರಾಜ್ಯ ಸರ್ಕಾರ ಮಾತ್ರವೇ ಅನುದಾನ ನೀಡುತ್ತಿದೆ. ಆ ಅನುದಾನವನ್ನೂ ಸಂಸ್ಥೆ ಸಮರ್ಪಕವಾಗಿ ಬಳಸುತ್ತಿಲ್ಲ. ಪರಿಣಾಮ, ಸಮುದಾಯಗಳ ಅಭಿವೃದ್ಧಿ ವಿಚಾರದಲ್ಲಿ ಅನ್ಯಾಯವಾಗಿದೆ. ಬುಡಕಟ್ಟು ಸಮುದಾಯಗಳಿಗೆ ಸಂಬಂಧಿಸಿದ ಫೋಟೋ ಗ್ಯಾಲರಿ ಮಾಡುತ್ತೇವೆಂದು ರಾಜ್ಯ ಸರ್ಕಾರದಿಂದ ಅನುದಾನ ಪಡೆದಿದ್ದ ಸಂಸ್ಥೆ, ಸಮುದಾಯಗಳು ವಾಸಿವು ಸ್ಥಳಗಳಿಗೆ ತೆರಳಿ, ಫೋಟೋಗಳನ್ನು ಚಿತ್ರೀಕರಿಸದೆ, ಗೂಗಲ್‌ನಲ್ಲಿ ಫೋಟೋಗಳನ್ನು ಡೌನ್‌ಲೋಡ್ ಮಾಡಿಕೊಂಡು, ಗ್ಯಾಲರಿ ನಿರ್ಮಿಸಿದೆ. ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದು, ಸಂಸ್ಥೆಗೆ ಛೀಮಾರಿ ಹಾಕಿವೆ. ಆದರೂ, ಸಂಸ್ಥೆಯ ಅಧಿಕಾರಿಗಳು ತಮ್ಮ ನಿರ್ಲಜ್ಜತನವನ್ನು ಬಿಟ್ಟಿಲ್ಲ.
ಸಂಶೋಧನೆ ಬಗ್ಗೆ ಯಾವುದೇ ಅರಿವೂ ಇಲ್ಲದವರು ಸಂಸ್ಥೆಯಲ್ಲಿ ಸಂಶೋಧನಾಧಿಕಾರಿ, ಉಪನಿರ್ದೇಶಕರು ಹಾಗೂ ನಿರ್ದೇಶಕರಾಗಿ ನೇಮಕಗೊಳ್ಳುತ್ತಿದ್ದಾರೆ. ಅವರು, ಸಂಸ್ಥೆಗೆ ಬರುವ ಅನುದಾನವನ್ನು ಹೇಗೆ ಒಳಸಿಕೊಳ್ಳಬೇಕು ಎಂಬ ತಂತ್ರ ಎಣೆಯುವುದಕ್ಕಷ್ಟೇ ಸೀಮಿತವಾಗಿದ್ದಾರೆ.
ಈ ವರದಿ ಓದಿದ್ದೀರಾ?: ಬಿಜೆಪಿ ನಾಯಕರಿಂದ ರಾಹುಲ್ ಗಾಂಧಿಯನ್ನು ಮುಗಿಸುವ ಸಂಚು ನಡೆದಿದೆಯೇ?
ಬಹಳ ಮುಖ್ಯವಾಗಿ ಪ್ರಸ್ತುತ ಪ್ರಭಾರ ನಿರ್ದೇಶಕ ಡಾ. ರಾಜಕುಮಾರ ಅವರು ವಾಲ್ಮೀಕಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾಗಿ ಹಾಗೂ ಇನ್ನೂ ಹಲವು ಇಲಾಖೆಗಳಲ್ಲಿ ಉನ್ನತ ಹುದ್ದೆಗಳನ್ನು ನಿಭಾಯಿಸಿ ಬಂದವರಾಗಿದ್ದಾರೆ. ಈಗಲೂ ಅವರಿಗೆ ಬೆಂಗಳೂರಿನ ವಿವಿಧ ಇಲಾಖೆಗಳಲ್ಲಿ ಪ್ರಭಾರಿ ಜವಾಬ್ದಾರಿ ನೀಡಲಾಗಿದೆ. ಹೀಗಾಗಿ, ಅವರು ತಿಂಗಳಲ್ಲಿ ಒಮ್ಮೆ ಮಾತ್ರವೇ ಸಂಸ್ಥೆಗೆ ಬರುತ್ತಿದ್ದಾರೆ. ಅವರು ಈವರೆಗೂ ಆದಿವಾಸಿ, ಬುಡಕಟ್ಟು ಸಮುದಾಯದ ಜನರ ಕೈಗೆ ಸಿಕ್ಕಿಲ್ಲ. ಯಾವುದೇ ಸಭೆಗಳನ್ನು ನಡೆಸಲಾಗಿಲ್ಲ.
ಇದೆಲ್ಲ ಕಾರಣಗಳಿಂದಾಗಿ, ಭಾರತ ಸ್ವಾತಂತ್ರ್ಯಗೊಂಡು 76 ವರ್ಷಗಳು ಕಳೆದರೂ ಸರ್ಕಾರಗಳ ಹಲವಾರು ಯೋಜನೆಗಳು ಈವರೆಗೂ ಈ ಸಮುದಾಯಗಳಿಗೆ ತಲುಪುತ್ತಿಲ್ಲ. ಮೂಲ ಸೌಕರ್ಯಗಳೂ ಸಿಗುತ್ತಿಲ್ಲ. ಅಗತ್ಯ ದಾಖಲೆ, ದಾಖಲಾತಿಗಳೂ ಇಲ್ಲ. ಸರ್ಕಾರದ ಯೋಜನೆಗಳ ಬಗ್ಗೆ ಈ ಸಮುದಾಯಗಳಿಗೆ ಮಾಹಿತಿ ನೀಡಲೆಂದೇ 6.90 ಕೋಟಿ ರೂ. ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ. ಆದರೆ, ಅದೂ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಆದ್ದರಿಂದ, ಸಂಸ್ಥೆಯು ತನ್ನ ನಿರ್ಲಜ್ಜ, ಬೇಜವಾಬ್ದಾರಿ ಧೋರಣೆಯನ್ನು ಬದಿಗಿಟ್ಟು, ಕಾರ್ಯಪ್ರವೃತ್ತವಾಗಿ ಕೆಲಸ ಮಾಡಬೇಕು. ಸಮುದಾಯಗಳ ಅಭಿವೃದ್ಧಿಗಾಗಿ ಕೆಲಸ ಮಾಡಬೇಕು.




