"ಭಾರತ, ಭಾರತೀಯ ಸಂಸ್ಕೃತಿಯ ಬಗ್ಗೆ ನನಗೆ ಭಾರೀ ಗೌರವ, ಋಷಿ ಮುನಿಗಳಂತೆ ಗುಹೆಯಲ್ಲಿ ಇರಲು ಖುಷಿ. ಗುಹೆಯೊಳಗಿರುವುದು ನನಗೆ ಸ್ವರ್ಗದ ಅನುಭವವನ್ನು ನೀಡುತ್ತದೆ. ನಮ್ಮ ಪಾಡಿಗೆ ನಮ್ಮನ್ನು ಬಿಟ್ಟಿದ್ದರೆ ನಾವೇನೂ ಸಾಯುತ್ತಿರಲಿಲ್ಲ, ನನ್ನ ಮಕ್ಕಳು ಜಲಪಾತದಡಿ ಈಜುತ್ತ ಸಂತೋಷವಾಗಿದ್ದರು. ನಮ್ಮ ಗುಹೆಯ ವಾಸ ಸೊಬಗಿನದಾಗಿತ್ತು...”
ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಗುಹೆಯಲ್ಲಿ ವಾಸವಿದ್ದ ರಷ್ಯನ್ ಮಹಿಳೆ ನೀನಾ ಕುಟಿನಾ(40) ಮತ್ತು ಆಕೆಯ ಇಬ್ಬರು ಹೆಣ್ಣುಮಕ್ಕಳನ್ನು ಗೋಕರ್ಣ ಪೊಲೀಸರು ಸುರಕ್ಷಿತವಾಗಿ ಹೊರತಂದಿದ್ದಾರೆ.
ತಾಲೂಕಿನ ರಾಮತೀರ್ಥ ಬೆಟ್ಟದಲ್ಲಿರುವ ಭೂಕುಸಿತ-ಬಾಧಿತ ಕಾಡುಗಳಲ್ಲಿ ಸಿಲುಕಿಕೊಂಡಿರಬಹುದಾದ ಪ್ರವಾಸಿಗರನ್ನು ಹುಡುಕುತ್ತ ಕಳೆದ ವಾರ ಗಸ್ತಿನಲ್ಲಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀಧರ್ ತಂಡಕ್ಕೆ ಕಾಡಿನ ನಡುವೆ ವಿಗ್ರಹವೊಂದು ಕಾಣಿಸಿತ್ತು. ಹತ್ತಿರ ಹೋದಾಗ, ಗುಹೆಯ ಪ್ರವೇಶವನ್ನು ಕೆಂಪು ಸೀರೆಯಿಂದ ಮರೆಮಾಚಲಾಗಿತ್ತು. ಒಳಗೆ ಇಣುಕಿದವರು, ಮಹಿಳೆಯೊಬ್ಬಳು ಇಬ್ಬರು ಚಿಕ್ಕ ಮಕ್ಕಳೊಂದಿಗೆ ವಾಸವಾಗಿರುವುದ ಕಂಡು ಚಕಿತರಾಗಿದ್ದಾರೆ.
ನೀನಾಗೆ ಇಬ್ಬರು ಪುಟ್ಟ ಹೆಣ್ಣುಮಕ್ಕಳು ಪ್ರೇಮಾ(6) ಮತ್ತು ಆಮಾ(4). ಜುಲೈ 9ರಂದು ಪತ್ತೆಯಾದ ಈ ವಿದ್ಯಮಾನ ದೇಶವಿದೇಶಗಳ ಗಮನ ಸೆಳೆದಿದೆ. ನ್ಯೂಯಾರ್ಕ್ ಟೈಮ್ಸ್ ಕೂಡ ಈಕೆಯ ಕುರಿತು ದೀರ್ಘವರದಿ ಪ್ರಕಟಿಸಿದೆ. ಈಗ ಇನ್ನಷ್ಟು ಕುತೂಹಲಕಾರಿ ಅಂಶಗಳು ಬಯಲಾಗುತ್ತಿವೆ.
ನೀನಾ ಗುಹೆಯಲ್ಲಿ ಎರಡು ವಾರಗಳಿಂದ ವಾಸವಿದ್ದಳು. ಮೊಂಬತ್ತಿಯ ಬೆಳಕಿನಲ್ಲಿ ಧ್ಯಾನ, ಯೋಗಾಭ್ಯಾಸದಲ್ಲಿ ನಿರತಳಾಗಿದ್ದಳು. ಪ್ರಕೃತಿಯೊಂದಿಗೆ ಸಮರಸ ಜೀವನಶೈಲಿ ಆಕೆಯದಾಗಿತ್ತು. ಮಕ್ಕಳೊಂದಿಗೆ ಜಲಪಾತದಡಿ ಈಜುವುದು, ಕಾಡಿನಲ್ಲಿ ಅಲೆದು ಆಹಾರ ಸಂಗ್ರಹಿಸುವುದು, ಗಿಡಮೂಲಿಕೆಗಳಿಂದ ಸುಲಭ ಆಹಾರ ತಯಾರಿಕೆ, ಕಟ್ಟಿಗೆ ಉರಿಸಿದ ಒಲೆಯಲ್ಲಿ ರೊಟ್ಟಿ ಮತ್ತು ತರಕಾರಿ ಪಲ್ಯಗಳನ್ನು ಬೇಯಿಸುತ್ತಿದ್ದಳು. ಹಸಿಮಣ್ಣಿನಿಂದ ಕಲಾಕೃತಿಗಳ ರಚಿಸಿ ಆನಂದಿಸುತ್ತಿದ್ದಳು. ಅಲ್ಲದೆ ಗುಹೆಯ ಗೋಡೆಗಳ ಮೇಲೆ ಹಿಂದೂ ದೇವತೆಗಳ ಚಿತ್ರಗಳನ್ನೂ ಬಿಡಿಸಿದ್ದಳು.

ಗೋಕರ್ಣವು ದೇವಾಲಯಗಳಿಗೆ ಮತ್ತು ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿ. ಅಲ್ಲದೆ ಇಲ್ಲಿ ಸುರಿಯುವ ವಿಪರೀತ ಮಳೆಯಿಂದ ರಾಮತೀರ್ಥ ಬೆಟ್ಟಗಳು ರಮಣೀಯ ಜಲಪಾತಗಳಿಂದ ಕಂಗೊಳಿಸುತ್ತವೆ. ಈ ರಮ್ಯತೆಯ ಸೆರಗಿನಲ್ಲಿ ಭೂಕುಸಿತ ರೌದ್ರವೂ ಕಟ್ಟಿಟ್ಟ ಕಟುವಾಸ್ತವ. ವಿಷಪೂರಿತ ಉರಗಗಳಿಗೂ ಆಶ್ರಯತಾಣ. ಇಂತಹ ಕತ್ತಲೆಯ ಗುಹೆಯೊಳಗೆ ಮಕ್ಕಳನ್ನು ಇರಿಸಿಕೊಂಡು ಬದುಕುವುದು ಪ್ರಾಣಾಪಾಯಕ್ಕೆ ನೀಡುವ ಬಹಿರಂಗ ಆಹ್ವಾನ. ʼಕಾಡಿನಲ್ಲಿ ಉಳಿದು ಪ್ರಕೃತಿ ದೇವರ ಪೂಜಿಸಲು ಆಸಕ್ತಿʼ ತೋರಿದ ನೀನಾಳ ಮನ ಒಲಿಸಿ ನಾಡಿಗೆ ಕರೆತಂದಿದ್ದಾರೆ ಪೊಲೀಸರು. ನೀನಾ ಮತ್ತು ಆಕೆಯ ಮಕ್ಕಳನ್ನು ಸ್ವಯಂಸೇವಾ ಸಂಸ್ಥೆಯ ಮಹಿಳಾ ಆಶ್ರಯಕ್ಕೆ ಮುಟ್ಟಿಸಿದ್ದಾರೆ.
“ಅಲ್ಲಿ, ತನ್ನ ಮೊಬೈಲ್ ಫೋನ್ ಚಾರ್ಜ್ ಮಾಡಿದ ನೀನಾ ತನ್ನ ರಷ್ಯನ್ ಸಂಬಂಧಿಕರಿಗೆ ಇಮೇಲ್ ಕಳುಹಿಸಿ ‘ತಳಮಳ’ ತೋಡಿಕೊಂಡಿದ್ದಾರೆ. “ನೆಮ್ಮದಿ ನಿರುಮ್ಮಳದ ನಮ್ಮ ಗುಹೆಯ ಬದುಕು ಕೊನೆಗೊಂಡಿದೆ. ಈ ನಮ್ಮ ಮನೆ ಹಾಳಾಗಿಹೋಯಿತು. ವರ್ಷಗಳಿಂದ ಮುಕ್ತ ಗಗನದಡಿ ಪ್ರಕೃತಿಯೊಂದಿಗೆ ಸಮರಸವಾಗಿ ಬದುಕಿದ್ದೆವು, ಯಾವ ಜೀವ ಜಂತೂಗಳೂ ನಮ್ಮ ತಂಟೆಗೆ ಬಂದಿರಲಿಲ್ಲ” ಎಂದು ಬರೆದಿರುವುದಾಗಿ ಪೊಲೀಸ್ ಮಾಹಿತಿಯಿಂದ ತಿಳಿದುಬಂದಿದೆ.

ಕಳೆದ ಒಂಬತ್ತು ವರ್ಷಗಳ ಹಿಂದೆಯೇ ಭಾರತಕ್ಕೆ ಬಂದ ನೀನಾ ಮೊನ್ನೆ ಜುಲೈ ಒಂಬತ್ತರವರೆಗೆ ಎಲ್ಲಿದ್ದಳು ಎಂಬ ನಿಗೂಢ ಪ್ರಶ್ನೆ ಪೊಲೀಸರ ತಲೆ ತಿಂದಿದೆ. ಆಕೆಯ ವೀಸಾ ಮತ್ತು ಪಾಸ್ಪೋರ್ಟ್‌ನಂತಹ ದಾಖಲೆಗಳು ಕಾಡುಮೇಡು ಗುಹೆಗಹ್ವರಗಳಲ್ಲಿ ಕಳೆದುಹೋಗಿರಬಹುದು ಎಂದು ಆಕೆ ಹೇಳಿದ್ದಾಳೆ. ಗೋಕರ್ಣ ಪೊಲೀಸರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ನಡೆಸಿದ ಜಂಟಿ ಶೋಧ ಕಾರ್ಯಾಚರಣೆಯ ಬಳಿಕ ಆಕೆಯ ಪಾಸ್ಪೋರ್ಟ್ ಮತ್ತು ವೀಸಾವನ್ನು ಹುಡುಕಿ ಪತ್ತೆಹಚ್ಚಲಾಗಿದೆ. ಅದರ ಪ್ರಕಾರ ಈಕೆ ವ್ಯಾಪಾರಿ ವೀಸಾದಲ್ಲಿ ಭಾರತ ಪ್ರವೇಶಿಸಿದ್ದಳು. ಈ ವೀಸಾದ ಅವಧಿ 2017ರಲ್ಲಿಯೇ ಮುಗಿದಿದೆ ಎಂಬುದು ಖಾತರಿಯಾಗಿದೆ.
2016 ರಲ್ಲಿ, ಆಕೆ ಆರು ತಿಂಗಳ ವ್ಯಾಪಾರ ವೀಸಾದೊಂದಿಗೆ ಭಾರತಕ್ಕೆ ಪ್ರವೇಶಿಸಿ, ಗೋವಾಕ್ಕೆ ತೆರಳಿದ್ದರು. ಅಲ್ಲಿ ರಷ್ಯನ್ ಭಾಷೆ ಮತ್ತು ಸಾಹಿತ್ಯದ ಶಿಕ್ಷಕಿಯಾಗಿ ಕೆಲಸ ಮಾಡಿದ್ದಳು. ಆರುತಿಂಗಳ ಈ ವೀಸಾ ತೀರಿ ವರ್ಷವೇ ಉರುಳಿತ್ತು. ನೇಪಾಳಕ್ಕೆ ತೆರಳಿದ್ದ ನೀನಾ 2020ರಲ್ಲಿ ಪುನಃ ಬಹು-ಪ್ರವೇಶ ಪ್ರವಾಸಿ ವೀಸಾದೊಂದಿಗೆ ಭಾರತಕ್ಕೆ ಮರಳಿದ್ದಳು. ಸರ್ಕಾರಿ ದಾಖಲೆಗಳ ಪ್ರಕಾರ, ಆಕೆ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಮಗಳೊಂದಿಗೆ ಆಗಮಿಸಿದ್ದಳು. ಹಿರಿಯ ಮಗ 21 ವಯಸ್ಸಿನಲ್ಲಿ ಕಳೆದ ವರ್ಷ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದ. ಆಕೆಯ ಕಿರಿಯ ಮಗ 11 ವಯಸ್ಸಿನವನು, ಎಲ್ಲಿದ್ದಾನೆಂದು ತಿಳಿದಿಲ್ಲ. ಆರು ವರ್ಷ ವಯಸ್ಸಿನ ಮಗಳು ಉಕ್ರೇನ್‌ನಲ್ಲಿ ಮತ್ತು ನಾಲ್ಕು ವರ್ಷದ ಕಿರಿಯ ಮಗಳು ಭಾರತದಲ್ಲಿ ಜನಿಸಿದ್ದಾಳೆಂದು ಬೇಹುಗಾರಿಕೆ ಅಧಿಕಾರಿಗಳಿಂದ ತಿಳಿದುಬಂದಿದೆ.

ರಷ್ಯಾ ಮೂಲದ ಆಕೆಯ ಕುಟುಂಬಸ್ಥರು ಹಣ ಕಳಿಸುತ್ತಿದ್ದರು. ಅದರಲ್ಲಿ ದಿನಸಿ ವಸ್ತುಗಳನ್ನು ಖರೀದಿಸಲು ಪಟ್ಟಣಕ್ಕೆ ಭೇಟಿ ನೀಡಿದಾಗ ತನ್ನ ಫೋನನ್ನು ಅಲ್ಲೇ ಚಾರ್ಜ್ ಮಾಡುತ್ತಿದ್ದಳು. ಬಳಿಕ ಅದನ್ನು ವಿರಳವಾಗಿ ಬಳಸುತ್ತಿದ್ದಳು. ಆಗಾಗ್ಗೆ ತನ್ನ ಮಕ್ಕಳನ್ನು ಗೋಕರ್ಣ ಮತ್ತಿತರೆ ಸ್ಥಳಗಳಿಗೆ ಕರೆದೊಯ್ಯುತ್ತಿದ್ದಳು. ತರುವಾಯ ತಪ್ಪದೆ ಗುಹೆಗೆ ಮರಳುತ್ತಿದ್ದಳು ಎಂದು ತಿಳಿದುಬಂದಿದೆ.
ಸೋಮವಾರ, ನೀನಾ ಮತ್ತು ಆಕೆಯ ಇಬ್ಬರು ಹೆಣ್ಣುಮಕ್ಕಳನ್ನು ಬೆಂಗಳೂರಿನ ವಲಸೆ ಏಜೆನ್ಸಿಯ ಕಚೇರಿಗೆ ಕಳುಹಿಸಲಾಗಿತ್ತು. ಇದೀಗ ತುಮಕೂರಿನ ಎಫ್‌ಆರ್‌ಸಿ ಸೆಂಟರ್‌ನಲ್ಲಿ ಇರಿಸಿದ್ದಾರೆ. ರಷ್ಯಾಕ್ಕೆ ಗಡಿಪಾರು ಮಾಡಲು ಉದ್ದೇಶಿಸಿಲಾಗಿದೆ.
ನೀನಾಳಂತಹ ಸಾವಿರಾರು ವ್ಯಕ್ತಿಗಳು ಗೋಕರ್ಣ ಗೋವಾದಂತಹ ತಾಣಗಳಿಗೆ ಆಕರ್ಷಿತರಾಗುತ್ತಿರುವುದು ಹಳೆಯ ಸಂಗತಿ. ನೀನಾ ಈವರೆಗೆ ಹಲವು ಬಾರಿ ಗೋಕರ್ಣಕ್ಕೆ ಪ್ರಯಾಣ ಮಾಡಿದ್ದು, ಆಕೆ ಕನಿಷ್ಠ ನಾಲ್ಕು ಸಲ ಗುಹೆಯಲ್ಲಿ ವಾಸವಿದ್ದಳು. ಆಕೆಯೊಬ್ಬ ಸಾಹಸಿ ಪ್ರವೃತ್ತಿಯ ಮಹಿಳೆ. ಪ್ರಕೃತಿಯ ಬಗ್ಗೆ ಆಕೆಯ ಅರಿವು ಅಚ್ಚರಿಗೊಳಿಸುವಷ್ಟು ಆಳದ್ದು ಎಂದು ಪೊಲೀಸ್ ಸೂಪರಿಂಟೆಂಡೆಂಟ್ ನಾರಾಯಣ ಹೇಳಿದ್ದಾರೆ.

ನೀನಾ ಕುಟಿನಾ ರಷ್ಯಾಕ್ಕೆ ಮರಳದಿರಲು ಕಾರಣಗಳೇನು?
ರಷ್ಯಾಕ್ಕೆ ಏಕೆ ಹಿಂತಿರುಗಲಿಲ್ಲ ಎಂಬುದಾಗಿ ನೀನಾ ಪಿಟಿಐ ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿದ್ದು, “ಅನೇಕ ಸಂಕೀರ್ಣ ಕಾರಣಗಳಿವೆ. ಮೊದಲನೆಯದಾಗಿ, ವ್ಯಕ್ತಿಗತ ಬದುಕಿನಲ್ಲಿ ನಷ್ಟಗಳು ಸಂಭವಿಸಿವೆ. ನನ್ನ ಮಗನ ಸಾವು ಮಾತ್ರವಲ್ಲ, ಇತರ ಕೆಲವು ಆತ್ಮೀಯರೂ ಮೃತಪಟ್ಟರು. ನಿರಂತರ ದುಃಖ ದುಗುಡ ದುಮ್ಮಾನಗಳನ್ನು ಎದುರಿಸುತ್ತಿದ್ದೆವು..” ಎಂದು ತಿಳಿಸಿದ್ದಾರೆ.

“ಭಾರತ, ಭಾರತೀಯ ಸಂಸ್ಕೃತಿಯ ಬಗ್ಗೆ ನನಗೆ ಭಾರೀ ಗೌರವ, ಋಷಿ ಮುನಿಗಳಂತೆ ಗುಹೆಯಲ್ಲಿ ಇರಲು ಖುಷಿ. ಗುಹೆಯೊಳಗಿರುವುದು ನನಗೆ ಸ್ವರ್ಗದ ಅನುಭವವನ್ನು ನೀಡುತ್ತದೆ. ನಮ್ಮ ಪಾಡಿಗೆ ನಮ್ಮನ್ನು ಬಿಟ್ಟಿದ್ದರೆ ನಾವೇನೂ ಸಾಯುತ್ತಿರಲಿಲ್ಲ, ನನ್ನ ಮಕ್ಕಳು ಜಲಪಾತದಡಿ ಈಜುತ್ತ ಸಂತೋಷವಾಗಿದ್ದರು. ನಮ್ಮ ಗುಹೆಯ ವಾಸ ಸೊಬಗಿನದಾಗಿತ್ತು…” ಎಂದು ನೀನಾ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾಳೆ.
ಇದನ್ನೂ ಓದಿದ್ದೀರಾ? HMT ಭೂಮಿ ಮಾರಾಟಕ್ಕೆ ಮೋದಿ-ಎಚ್‌ಡಿಕೆ ಸಂಚು: ಸುರ್ಜೇವಾಲಾ ಗಂಭೀರ ಆರೋಪ
“ಋತುವಿಗೆ ಅನುಗುಣವಾಗಿ ಬೆಂಕಿ ಅಥವಾ ಗ್ಯಾಸ್ ಸಿಲಿಂಡರ್ ಬಳಸಿ ಅಡುಗೆ ಮಾಡುತ್ತಿದ್ದೆ. ಹತ್ತಿರದ ಹಳ್ಳಿಯಿಂದ ದಿನಸಿ ಸಾಮಾನುಗಳನ್ನು ತರುತ್ತಿದ್ದೆ. ನಾನು ಮತ್ತು ಮಕ್ಕಳು ಚಿತ್ರ ಬಿಡಿಸುತ್ತಿದ್ದೆವು, ಹಾಡುಗಳನ್ನು ಹಾಡುತ್ತಿದ್ದೆವು, ಪುಸ್ತಕಗಳನ್ನು ಓದುತ್ತಿದ್ದೆವು. ಅಲ್ಲದೆ ನೆಮ್ಮದಿಯಾಗಿದ್ದೆವು. ಈಗಿನ ಹೊಸ ಸ್ಥಳ ಕೊಳಕಾಗಿದೆ, ಏಕಾಂತವಿಲ್ಲ, ಅನ್ನಾಹಾರದಲ್ಲಿ ಸ್ವಾರಸ್ಯವಿಲ್ಲ. ಮೃತಪಟ್ಟ ನನ್ನ ಮಗನ ಚಿತಾಭಸ್ಮ ಸೇರಿದಂತೆ ಅನೇಕ ಆತ್ಮೀಯ ವಸ್ತುಗಳನ್ನು ನಮ್ಮಿಂದ ಕಸಿಯಲಾಗಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾಳೆ.

ನೀನಾಳನ್ನು 8 ವರ್ಷದ ಹಿಂದೆ ಗೋವಾದಲ್ಲಿ ಭೇಟಿ ಮಾಡಿದ್ದೆ. ಆನಂತರ ಇಬ್ಬರು ಪರಸ್ಪರ ಪ್ರೀತಿಸಿದ್ದೆವು. ಏಳು ತಿಂಗಳು ಭಾರತದಲ್ಲಿ ಒಟ್ಟಿಗಿದ್ದ ನಾವು ನಂತರ ಹೆಚ್ಚಿನ ಸಮಯವನ್ನು ಉಕ್ರೇನ್‌ನಲ್ಲಿ ಕಳೆದೆವು. ನಂತರ ನನಗೆ ತಿಳಿಸದೆ ಆಕೆ ಗೋವಾ ತೊರೆದಿದ್ದಳು. ಮಕ್ಕಳನ್ನು ನೋಡುವುದಕ್ಕಾಗಿಯೇ ಕಳೆದ ನಾಲ್ಕು ವರ್ಷದಿಂದ ಪದೇ ಪದೆ ಭಾರತಕ್ಕೆ ಬರುತ್ತಿದ್ದೇನೆ” ಎಂದು ರಷ್ಯಾದ ಮಹಿಳೆಯ ಇಸ್ರೇಲ್ ಮೂಲದ ಪತಿ ಡಾರ್ ಗೋಲ್ಡ್‌ಸ್ಟೈನ್ ಹೇಳಿದ್ದಾರೆ.
ತನ್ನ ಹೆಂಡತಿ ಮಕ್ಕಳನ್ನು ನೋಡಲು ತುಮಕೂರಿನ ಎಫ್‌ಆರ್‌ಸಿ ಸೆಂಟರ್ ಬಳಿ ಭೇಟಿ ನೀಡಿದಾಗ ಹೇಳಿಕೊಂಡಿದ್ದಾರೆ. ಎಫ್‌ಆರ್‌ಆರ್‌ಒ ಪತ್ರ ಇಲ್ಲದ ಕಾರಣ ಭೇಟಿಗೆ ಅವಕಾಶ ನೀಡುವುವಿಲ್ಲವೆಂದು ಅಧಿಕಾರಿಗಳು ಆಕೆಯನ್ನು ಭೇಟಿ ಮಾಡಿಸಲು ನಿರಾಕರಿಸಿದ್ದಾರೆ.





