ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖನಾದರೂ ವಾರಸುದಾರರು ಕರೆದೊಯ್ಯಲು ಬಾರದೆ ಇದ್ದ ಯುವಕನಿಗೆ ಕಾರ್ಕಳದ ಹೊಸಬೆಳಕು ಆಶ್ರಮವು ಮಾನವೀಯ ನೆರವು ನೀಡಿದೆ.
ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಜಿಲ್ಲಾಸ್ಪತ್ರೆಯಿಂದ ಗುಣಮುಖನಾದ ಯುವಕನನ್ನು ಡಿಸ್ಚಾರ್ಜ್ ಮಾಡಿಸಿಕೊಂಡು ಅಂಬುಲೆನ್ಸ್ ಮೂಲಕ ಕಾರ್ಕಳದ ಹೊಸಬೆಳಕು ಆಶ್ರಮಕ್ಕೆ ಸಾಗಿಸಿ, ಪೂರಕ ವಸತಿ ಕಲ್ಪಿಸಲು ನೆರವಾದರು. ಆಶ್ರಮದ ಸಂಚಾಲಕರಾದ ತನುಲಾ ತರುಣ್ ಹಾಗೂ ಗೌರೀಶ್ ಅವರು ಯುವಕನಿಗೆ ಆಶ್ರಯ ಒದಗಿಸಿ ಆರೈಕೆ ಮಾಡುತ್ತಿದ್ದಾರೆ.
ಪೂರ್ನವಸತಿ ಪಡೆದಿರುವ ಯುವಕನು ತನ್ನ ಹೆಸರು ಬಾಬಾಸಾಹೇಬ್ ಎಂದು ಹೇಳಿಕೊಂಡಿದ್ದು, ರಾಯಚೂರು ಜಿಲ್ಲೆಯ ನಿವಾಸಿಯಾಗಿರುವುದಾಗಿ ತಿಳಿಸಿದ್ದಾನೆ. ಸಂಬಂಧಿಕರು ತುರ್ತಾಗಿ ಕಾರ್ಕಳದ ಹೊಸಬೆಳಕು ಆಶ್ರಮವನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.
ಗಮನಾರ್ಹವೆಂದರೆ, ಜ.28ರಂದು ಪೆರ್ಣಂಕಿಲ ಪ್ರದೇಶದಲ್ಲಿ ಸುಡುಬಿಸಿಲಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಯುವಕನನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ರಕ್ಷಿಸಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಚಿಕಿತ್ಸೆ ಪಡೆದು ಗುಣಮುಖನಾದರೂ ಕುಟುಂಬದವರು ಸಂಪರ್ಕಿಸದ ಹಿನ್ನೆಲೆ, ಇದೀಗ ಆಶ್ರಮದಲ್ಲಿ ಪೂರ್ನವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.





