ಉತ್ತರ ಕನ್ನಡ ಜಿಲ್ಲೆಯಾದ್ಯಂತ ಸಂಚಲನ ಮೂಡಿಸಿದ್ದ ಕದ್ರಾದ ಯುವತಿ ರಿಶೆಲ್ ಕಿಸ್ತೋದ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಚಿರಾಗ್‌ನನ್ನು ಪೊಲೀಸರು ತಮಿಳುನಾಡಿನ ಚೆನ್ನೈನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ದೀಪನ್ ಎಂ.ಎನ್. ಅವರು ಮಾಹಿತಿ ನೀಡಿದ್ದಾರೆ.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಅವರು, ಆರೋಪಿಯ ಪತ್ತೆಗಾಗಿ ಪೊಲೀಸರು ಹಗಲಿರುಳು ಶ್ರಮಿಸಿದ್ದಾರೆ. ತನಿಖೆಗಾಗಿ ಮೂವರು ಇನ್ಸ್‌ಪೆಕ್ಟರ್‌ಗಳು ಹಾಗೂ ಆರು ಪಿ.ಎಸ್.ಐಗಳನ್ನೊಳಗೊಂಡ ವಿಶೇಷ ತಂಡಗಳನ್ನು ರಚಿಸಲಾಗಿತ್ತು.
ಈ ತಂಡಗಳು ಆರೋಪಿಯ ಜಾಡನ್ನು ಹಿಡಿದು ಕಾರ್ಯಾಚರಣೆ ನಡೆಸಿದ್ದವು ಎಂದು ತಿಳಿಸಿದರು. ಆರೋಪಿ ಚಿರಾಗ್ ಕಾನೂನಿನಿಂದ ತಪ್ಪಿಸಿಕೊಳ್ಳಲು ಬೆಂಗಳೂರು, ಪುಣೆ, ಮಹಾರಾಷ್ಟ್ರ ಹಾಗೂ ಹೈದರಾಬಾದ್ ಸೇರಿದಂತೆ ವಿವಿಧೆಡೆ ಸಂಚರಿಸಿದ್ದ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಹೊನ್ನಾವರ | ಇಡಗುಂಜಿ ಮಹಾಗಣಪತಿ ಸನ್ನಿಧಿಯಲ್ಲಿ ಅರ್ಚಕರ ಕಾಳಗ: ದಕ್ಷಿಣೆ ಹಣಕ್ಕಾಗಿ ಭಕ್ತರ ಮುಂದೆಯೇ ತಳ್ಳಾಟ!
ಈ ಅವಧಿಯಲ್ಲಿ ಆತನಿಗೆ ಆಶ್ರಯ ನೀಡಿ, ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಆತನ ಸಂಬಂಧಿ ಸುವರ್ಣ ಹಾಗೂ ನಿತಿನ್ ಗಾಂವ್ಕರ್ ಅವರ ಮೇಲೆಯೂ ಪ್ರಕರಣ ದಾಖಲಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.
ಇದಲ್ಲದೆ, ಈ ಸೂಕ್ಷ್ಮ ಪ್ರಕರಣದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡಿ ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದವರ ವಿರುದ್ಧವೂ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಎಸ್ಪಿಯವರು ಎಚ್ಚರಿಸಿದ್ದಾರೆ.
ಪ್ರಕರಣದ ಆರಂಭಿಕ ಹಂತದ ತನಿಖೆಯಲ್ಲಿ ಲೋಪ ಕಂಡುಬಂದ ಹಿನ್ನೆಲೆಯಲ್ಲಿ, ಈಗಾಗಲೇ ಸಂಬಂಧಪಟ್ಟ ಪಿ.ಎಸ್.ಐ ಅವರನ್ನು ಅಮಾನತು ಮಾಡಲಾಗಿದೆ. ಈ ಬಗ್ಗೆಯೂ ಆಂತರಿಕ ತನಿಖೆ ಮುಂದುವರಿದಿದೆ.
ಸದ್ಯಕ್ಕೆ ಮರು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದ್ದು, ಆರೋಪಿ ಮತ್ತು ಮೃತ ಯುವತಿಯ ಮೊಬೈಲ್ ಫೋನ್‌ಗಳ ತಾಂತ್ರಿಕ ತನಿಖೆ ಪೂರ್ಣಗೊಂಡ ನಂತರ ಸಮಗ್ರ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ದೀಪನ್ ಎಂ.ಎನ್. ಸ್ಪಷ್ಟಪಡಿಸಿದ್ದಾರೆ.





