ಉಡುಪಿಯ ನೇಜಾರಿನ ನೂರುಲ್ ಫುರ್ಕಾನ್ ಟ್ರಸ್ಟ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೂರುಲ್ ಫುರ್ಕಾನ್ ವಿಶೇಷ ಮಕ್ಕಳ ಶಾಲೆಯಲ್ಲಿ ವಿಶೇಷ ಅಗತ್ಯಗಳಿರುವ ಮಕ್ಕಳ ಪುನರ್ವಸತಿ ಹಾಗೂ ಶಾರೀರಿಕ ಅಭಿವೃದ್ಧಿಗೆ ಮಹತ್ವದ ಹೆಜ್ಜೆಯಾಗಿ ಫಿಸಿಯೊಥೆರಪಿ ಉಪಕರಣಗಳ ದಾನ ಹಸ್ತಾಂತರ ಕಾರ್ಯಕ್ರಮ ಶಾಲಾ ಆವರಣದಲ್ಲಿ ಜರುಗಿತು.
ಕಾರ್ಯಕ್ರಮದಲ್ಲಿ ಆಸ್ಟರ್ ಡಿಎಂ ಹೆಲ್ತ್‌ಕೇರ್ ಸಂಸ್ಥೆಯ ವಲಯ ಮುಖ್ಯಸ್ಥರಾದ ರೋಹನ್ ಫ್ರಾಂಕೋ ವಿಶೇಷ ಅತಿಥಿಯಾಗಿ ಭಾಗವಹಿಸಿ. ಶಾಲೆಯ ಪುನರ್ವಸತಿ ಘಟಕಕ್ಕೆ ಬಳಕೆಯಾಗಲಿರುವ ಅತ್ಯಾಧುನಿಕ, ಮಕ್ಕಳಿಗೆ ಹೊಂದುವಂತಹ ಫಿಸಿಯೊಥೆರಪಿ ಉಪಕರಣಗಳನ್ನು ಅಧಿಕೃತವಾಗಿ ಹಸ್ತಾಂತರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರೋಹನ್ ಫ್ರಾಂಕೋ, ಸಮಾಜದ ಪ್ರತಿಯೊಬ್ಬ ಮಕ್ಕಳಿಗೂ ಸಮಾನ ಅವಕಾಶ ನೀಡಬೇಕಾದದ್ದು ನಮ್ಮ ನೈತಿಕ ಹೊಣೆ. ವಿಶೇಷ ಅಗತ್ಯಗಳಿರುವ ಮಕ್ಕಳಿಗೆ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಗೆ ಅಗತ್ಯವಾದ ಸೂಕ್ತ ಆರೈಕೆ, ಚಿಕಿತ್ಸೆ ಹಾಗೂ ಪುನರ್ವಸತಿ ಸೇವೆಯನ್ನು ತಲುಪಿಸುವುದು ಅತ್ಯಂತ ಮುಖ್ಯ. ಈ ದೃಷ್ಟಿಯಿಂದ ನೂರುಲ್ ಫುರ್ಕಾನ್ ಸ್ಪೆಷಲ್ ಶಾಲೆಯ ಸೇವಾಭಾವ ಮತ್ತು ಮಕ್ಕಳಿಗೆ ನೀಡುತ್ತಿರುವ ಸಹಾಯ ಶ್ಲಾಘನೀಯ ಎಂದು ಪ್ರಶಂಸಿಸಿದರು.
ನೂರುಲ್ ಫುರ್ಕಾನ್ ವಿಶೇಷ ಮಕ್ಕಳ ಶಾಲೆಯ ಸಂಸ್ಥಾಪಕಿ ಹಾಗೂ ಪ್ರಾಂಶುಪಾಲೆ ದಿಲ್ದಾರ್ ಫಜ್ಲುರ್ ರಹ್ಮಾನ್ ಮಾತನಾಡಿ, ವಿಶೇಷ ಅಗತ್ಯಗಳ ಮಕ್ಕಳಿಗೆ ಶಿಕ್ಷಣದ ಜೊತೆಗೆ ಶಾರೀರಿಕ ಪುನರ್ವಸತಿ ಅತ್ಯಗತ್ಯ. ಈ ಉಪಕರಣಗಳ ಸಹಾಯದಿಂದ ನಮ್ಮ ವಿದ್ಯಾರ್ಥಿಗಳ ಬೆನ್ನುಹುರಿ, ಸ್ನಾಯು ಬಲ, ಸಮತೋಲನ, ಸಂಯೋಜನೆ ಮತ್ತು ಸ್ವಯಂ ಚಲನವಲನ ಸಾಮರ್ಥ್ಯದಲ್ಲಿ ಹೆಚ್ಚಿನ ಬೆಳವಣಿಗೆ ಸಾಧ್ಯ. ಆಸ್ಟರ್ ಡಿಎಂ ಹೆಲ್ತ್‌ಕೇರ್ ನೀಡಿರುವ ಈ ದಾನ ನಮ್ಮ ಪುನರ್ವಸತಿ ವಿಭಾಗಕ್ಕೆ ಹೊಸ ಶಕ್ತಿ ನೀಡುತ್ತದೆ ಎಂದು ಹೇಳಿದರು.
ಟ್ರಸ್ಟ್‌ನ ಉಪಾಧ್ಯಕ್ಷ ಇಕ್ಬಾಲ್ ಮನ್ನ ಮಾತನಾಡಿ, ಸಾಮಾಜಿಕ ಜವಾಬ್ದಾರಿಯನ್ನು ನಿಭಾಯಿಸಿ ವಿಶೇಷ ಮಕ್ಕಳ ಅಭಿವೃದ್ಧಿಗಾಗಿ ಕೈಜೋಡಿಸಿರುವ ಆಸ್ಟರ್ ಸಂಸ್ಥೆಗೆ ಹೃತ್ಪೂರ್ವಕ ಧನ್ಯವಾದ ಸಲ್ಲಿಸಿದರು. ಈ ರೀತಿಯ ಸಹಕಾರದಿಂದ ಮಾತ್ರ ಸಮಾಜದಲ್ಲಿ ಸಮಾನತೆ ಹಾಗೂ ಒಳಗೊಳ್ಳುವಿಕೆ ಬಲವಾಗುತ್ತದೆ ಎಂದು ಅವರು ಹೇಳಿದರು.

ವೇದಿಕೆಯಲ್ಲಿ ಟ್ರಸ್ಟಿ ಅಶ್ರಫ್ ಬಂಗ್ರೆ ಉಪಸ್ಥಿತರಿದ್ದರು. ಕೌಸರ್ ಭಾನು ಕಾರ್ಯಕ್ರಮ ನಿರೂಪಿಸಿದರು, ರೇಷ್ಮಾ ನಾಸೀರ್ ಧನ್ಯವಾದವಿತ್ತರು.
ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರು, ಪೋಷಕರು ಮತ್ತು ಮಕ್ಕಳು ಭಾಗವಹಿಸಿದ್ದು, ಹೊಸ ಉಪಕರಣಗಳು ಮಕ್ಕಳಿಗೆ ಉತ್ತಮ ಚಿಕಿತ್ಸಾ ಅವಕಾಶ ಒದಗಿಸಲಿದೆ. ಫಿಸಿಯೊಥೆರಪಿ ಶಿಕ್ಷಕರು ಹೊಸ ಉಪಕರಣಗಳ ಬಳಕೆ ಕುರಿತ ಮಾಹಿತಿಯನ್ನು ಪೋಷಕರಿಗೆ ನೀಡಿದರು. ಒಟ್ಟಾರೆಯಾಗಿ, ನೂರುಲ್ ಫುರ್ಕಾನ್ ವಿಶೇಷ ಮಕ್ಕಳ ಶಾಲೆಯ ಈ ಕಾರ್ಯಕ್ರಮವು ವಿಶೇಷ ಅಗತ್ಯಗಳಿರುವ ಮಕ್ಕಳ ಬದುಕಿನಲ್ಲಿ ಬೆಳವಣಿಗೆ ಹಾಗೂ ಆತ್ಮವಿಶ್ವಾಸಕ್ಕೆ ಮತ್ತೊಂದು ಮೌಲ್ಯವಾದ ಹೆಜ್ಜೆಯಾಗಿದೆ.









