ದೇವದಾಸಿ ತಾಯಂದಿರ ಬಾಳಿನಲ್ಲಿ ಬೆಳಕು ಚೆಲ್ಲಿದ ʼವಿಮುಕ್ತ ದನಿ ಪತ್ರಿಕೆʼ ಸಾಮಾಜಿಕ ಚಳುವಳಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಮಾನವ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಮಿಡಿಯುತ್ತಿರುವ ಪತ್ರಿಕೆಯಾಗಿದೆ.
ಒಂದೂವರೆ ವರ್ಷದ ಹಿಂದೆ ಚಿಕ್ಕ ಕನಸಿನಿಂದ ಹುಟ್ಟಿದ ಪತ್ರಿಕೆ ಇಂದು ಸಾವಿರಾರು ದೇವದಾಸಿ ತಾಯಂದಿರ ಆಶಾ ದೀಪವಾಗಿ ಬೆಳಗುತ್ತಿದೆ. ಅದೇ ವಿಮುಕ್ತ ದನಿ ಪತ್ರಿಕೆ. ವಿಮುಕ್ತ ದನಿ 2024ರ ಜುಲೈ 29 ರಂದು ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಬಿಡುಗಡೆಗೊಂಡಿತು. ಪತ್ರಿಕೆಯನ್ನು ಹಿರಿಯ ಪತ್ರಕರ್ತ ಹಾಗೂ ಹೋರಾಟಗಾರ ಇಂದೂಧರ ಹೊನ್ನಾಪುರ ಬಿಡುಗಡೆಗೊಳಿಸಿದರು, ಪತ್ರಿಕೆಯ ಬಿಡುಗಡೆ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಮಾಜಿ ಮುಖ್ಯಕಾರ್ಯದರ್ಶಿ ಕೆ ರತ್ನಾಪ್ರಭಾ ಹಾಗೂ ಲೇಖಕಿ ದು. ಸರಸ್ವತಿ, ಹೋರಾಟಗಾರ ದಾನಪ್ಪ ನಿಲೋಗಲ್, ಗಜಲ್ ಕವಿ ಅಲ್ಲಾಗಿರಿರಾಜ್ ಭಾಗಿಯಾಗಿದ್ದರು.
ವಿಮುಕ್ತ ದನಿ ಪತ್ರಿಕೆಯು ಪಿಯುಸಿಎಲ್ ರಾಷ್ಟ್ರೀಯ ಉಪಾಧ್ಯಕ್ಷ ಪ್ರೊ. ವೈ ಜೆ ರಾಜೇಂದ್ರ ಅವರ ಮಾರ್ಗದರ್ಶನ ಹಾಗೂ ಜಿ ಎಸ್ ಶರಣು ಅವರ ಸಂಪಾದಕತ್ವದಲ್ಲಿ ವಿಮುಕ್ತ ದನಿ ಪತ್ರಿಕೆ ಬರುತ್ತಿದೆ. ಈ ಪತ್ರಿಕೆ ಇಬ್ಬರ ಯೋಚನೆಯಿಂದ ಹುಟ್ಟಿತು. ಇಂದು ದೇವದಾಸಿ ಮಹಿಳೆಯರ ಚಳುವಳಿಗೆ ಹೊಸರೂಪ ನೀಡಿದೆ.

ದೇವದಾಸಿ ಪದ್ಧತಿಯ ಹಿನ್ನಲೆಯಲ್ಲಿ ಶೋಷಣೆಗೆ ಒಳಗಾದ ಮಹಿಳೆಯರ ಬದುಕಿಗೆ ಧ್ವನಿ ನೀಡಬೇಕೆಂಬ ಉದ್ದೇಶದಿಂದ ಪ್ರಾರಂಭವಾದ ಈ ಪತ್ರಿಕೆ, ಕೇವಲ ಸುದ್ದಿಯನ್ನು ಹೇಳುವುದಕ್ಕೆ ಸೀಮಿತವಾಗದೆ, ನ್ಯಾಯ, ಮಾನವೀಯತೆ ಮತ್ತು ಬದಲಾವಣೆಯ ಹಾದಿಯಲ್ಲಿ ಬೆಳಕು ಚೆಲ್ಲುವ ಪತ್ರಿಕಾ ಚಳವಳಿಯಾಗಿ ರೂಪಾಂತರಗೊಂಡಿದೆ.
ಒಂದು ವರ್ಷದ ಅವಧಿಯಲ್ಲಿ ‘ವಿಮುಕ್ತ ದನಿ’ ಕರ್ನಾಟಕದ 11 ಜಿಲ್ಲೆಗಳ ಸಾವಿರಾರು ದೇವದಾಸಿ ತಾಯಂದಿರನ್ನು ತಲುಪಿದೆ. ಗ್ರಾಮಾಂತರ ಪ್ರದೇಶಗಳಿಂದ ನಗರಗಳವರೆಗೆ, ಬಯಸಿದ ಅನೇಕರ ಬಾಯಿಗೆ ಶಕ್ತಿ ನೀಡಿದ ಈ ಪತ್ರಿಕೆ, ತಾಯಂದಿರ ಬದುಕಿನ ಕಥೆಗಳನ್ನು ಕೇವಲ ಮುದ್ರಿತ ಶಬ್ದಗಳಾಗಿ ಅಲ್ಲ, ಹೋರಾಟದ ಧ್ವನಿಗಳನ್ನಾಗಿ ಪರಿವರ್ತಿಸಿದೆ.
ಈ ಪತ್ರಿಕೆಯು ಜನರ ಮನಗಳಲ್ಲಿ ಬಿತ್ತಿದ ಚಿಂತನೆಯ ಬೀಜಗಳು ಇಂದು ಒಂದು ಸಾಮಾಜಿಕ ಕ್ರಾಂತಿಗೆ ರೂಪಾಂತರಗೊಳ್ಳುತ್ತಿದೆ. ದೇವದಾಸಿ ಮಹಿಳೆಯರ ನೋವುಗಳನ್ನು ಸಾಮಾಜಿಕ ವಿಚಾರವನ್ನಾಗಿ, ಅವರ ಹಕ್ಕುಗಳ ಹೋರಾಟವನ್ನು ಸಾರ್ವಜನಿಕ ಚರ್ಚೆಯನ್ನಾಗಿ ಮಾಡುತ್ತಿದೆ.

ಪತ್ರಿಕೆಯು ದೇವದಾಸಿ ತಾಯಂದಿರ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿರುವ ವ್ಯಕ್ತಿಗಳು ದೇವದಾಸಿ ತಾಯಂದಿರನ್ನು ಭೇಟಿಯಾಗಿ ಅವರ ಸಮಸ್ಯೆ ಕೇಳಲು ಹಾಗೂ ಅಧಿಕಾರಿಗಳಿಗೆ ದೇವದಾಸಿ ತಾಯಂದಿರ ಸಮಸ್ಯೆಗಳನ್ನು ತಲುಪಿಸಲು ಸಹಾಯಕವಾಗುತ್ತಿದೆ.
ಮಾನವ ಹಕ್ಕುಗಳು ಜತೆಗೆ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುತ್ತ ದೇವದಾಸಿ ಮಹಿಳೆಯರ ಶಕ್ತಿಯಾಗಿ ನಿಂತಿದೆ. ಅವರ ಹಕ್ಕುಗಳ ಪರವಾಗಿ ನಿಂತು ಮಾತನಾಡುತ್ತಿರುವ ಈ ಪತ್ರಿಕೆ, ಮುಂದಿನ ದಿನಗಳಲ್ಲಿ ಯುವಕರು ಮತ್ತು ವಿದ್ಯಾರ್ಥಿಗಳ ಸಹಕಾರದಿಂದ ಸಮಾಜಪರ ಬದಲಾವಣೆಯ ದಿಕ್ಕಿನಲ್ಲಿ ಇನ್ನಷ್ಟು ಬಲವಾಗಿ ಹೆಜ್ಜೆ ಇಡುವ ಕನಸು ಕಾಣುತ್ತಿದೆ
ಬಳ್ಳಾರಿಯ ಎ ಕೆ ಪಂಪಾವತಿ ಮಾತನಾಡಿ, “ನಾನು ಒಬ್ಬ ದೇವದಾಸಿ ತಾಯಿಯ ಮಗ. ನಾನು ಅನುಭವಿಸಿದ ನೋವನ್ನು ಮತ್ತೊಬ್ಬರು ಅನುಭವಿಸಬಾರದು ಎನ್ನುವ ಕಾರಣದಿಂದ ಹೋರಾಟಕ್ಕೆ ದುಮುಕಿದೆ. ಈಗ ನಾನು ಸಕ್ರಿಯವಾಗಿ ಎರಡು ವರ್ಷಗಳಿಂದ, ದೇವದಾಸಿ ಮಹಿಳೆಯರ ಹಕ್ಕುಗಳಿಗಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಹೋರಾಟಕ್ಕೆ ಪ್ರಮುಖವಾಗಿ ಸಹಕಾರಿಯಾಗಿದ್ದು, ವಿಮುಕ್ತ ದನಿ ಪತ್ರಿಕೆ. ವಿಮುಕ್ತ ದನಿ ಪತ್ರಿಕೆಯಿಂದ ವಿವಿಧ ಅಧಿಕಾರಿಗಳು, ಶಾಸಕರು, ಸಚಿವರಗಳನ್ನು ಭೇಟಿಯಾಗಿ ದೇವದಾಸಿ ತಾಯಂದಿರ ಸಂಬಂಧೀತ ಸಮಸ್ಯೆಗಳ ಕುರಿತು ಮನವಿ ನೀಡುತ್ತಿದ್ದೇನೆ ಹಾಗೂ ಬಳ್ಳಾರಿ ಸುತ್ತಮುತ್ತಲಿನ ವಿವಿಧ ಗ್ರಾಮಗಳಿಗೆ ಭೇಟಿನೀಡಿ, ಅಲ್ಲಿನ ದೇವದಾಸಿ ತಾಯಂದಿರ ಸಮಸ್ಯೆಗಳ ಕುರಿತು ಚರ್ಚಿಸಿ ಅವರಿಗೆ ಪತ್ರಿಕೆ ನೀಡಿ, ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೇನೆ” ಎಂದು ತಿಳಿಸಿದ್ದಾರೆ.
ಮಹಾನಂದ ರಬಕವಿ ಮಾತನಾಡಿ, “ಕೆಲವು ವರ್ಷಗಳಿಂದ ನಾನು ದೇವದಾಸಿ ತಾಯಂದಿರಿಗೆ ಸಾಲ, ಸೌಲಭ್ಯಗಳನ್ನು ಕೊಡಿಸುವ ಕೆಲಸದಲ್ಲಿ ನಿರತಳಾಗಿದ್ದೇನೆ ಹಾಗೂ ತಾಯಂದಿರ ಮಕ್ಕಳಿಗೆ ಕೌಶಲ್ಯ ತರಬೇತಿಗಳನ್ನು ಕೊಡಿಸುವಲ್ಲಿ ಕೆಲಸ ಮಾಡುತ್ತಿದ್ದೇನೆ. ಒಂದೂವರೆ ವರ್ಷದಿಂದ ವಿಮುಕ್ತ ದನಿ ಪತ್ರಿಕೆ ನನ್ನ ಕೆಲಸಗಳಿಗೆ ಮತ್ತಷ್ಟು ಪ್ರೋತ್ಸಾಹ ಮಾಡುತ್ತಿದೆ. ದೇವದಾಸಿ ತಾಯಂದಿರನ್ನು ಭೇಟಿಯಾಗಿ, ಅವರ ಸಮಸ್ಯೆಗಳ ಕುರಿತು ಚರ್ಚಿಸಲು ಹಾಗೂ ನಮ್ಮ ಸಮಸ್ಯೆಯನ್ನು ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ತಲುಪಿಸುವಲ್ಲಿ ತುಂಬಾ ಸಹಕಾರಿಯಾತ್ತಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಶ್ರೀರಂಗಪಟ್ಟಣ | ಮೂಲಭೂತ ಸೌಕರ್ಯಕ್ಕಾಗಿ ಒತ್ತಾಯಿಸಿ ಅಹೋರಾತ್ರಿ ಧರಣಿ
ಜಿ ಎಸ್ ಶರಣು ಮಾತನಾಡಿ, “ವಿಮುಕ್ತ ದನಿ ಕೇವಲ ಸುದ್ದಿ ಪತ್ರಿಕೆ ಮಾತ್ರವಲ್ಲ, ಇದು ಒಂದು ವಿಭಿನ್ನ ಸಾಮಾಜಿಕ ಚಳವಳಿಯಾಗಿದೆ. ದೇವದಾಸಿ ಪದ್ಧತಿಯನ್ನು ನಿರ್ಮೂಲನೆಗೊಳಿಸಲು ಹಾಗೂ ದೇವದಾಸಿ ತಾಯಂದಿರ ಬದುಕಿನಲ್ಲಿ ಬದಲಾವಣೆ ತರಬೇಕೆಂಬ ಉದ್ದೇಶದಿಂದ ಈ ಪತ್ರಿಕೆಯನ್ನು ಪ್ರಾರಂಭಿಸಲಾಯಿತು. ಇಂದು ಅದಕ್ಕೆ ತಕ್ಕ ರೀತಿಯ ಸ್ಪಂದನೆ ಸಿಗುತ್ತಿದೆ. ಸದ್ಯ ಪತ್ರಿಕೆ ಹೊಸ ಸಾಮಾಜಿಕ ತಿರುವನ್ನು ಪಡೆದುಕೊಂಡಿದೆ. ಇದರಿಂದ ದೇವದಾಸಿ ತಾಯಂದಿರ ಸಮುದಾಯದಲ್ಲಿ ಹಲವಾರು ಬದಲಾವಣೆಗಳು ಆಗುತ್ತಿವೆ. ಮುಂದಿನ ದಿನಗಳಲ್ಲಿ ಡಿಜಿಟಲ್ ಮಾಧ್ಯಮದ ಮೂಲಕ ಮಹಿಳೆಯರು, ಶೋಷಿತರು, ಹಿಂದುಳಿದವರು ಮತ್ತು ಯುವಕರ ದನಿಯಾಗಿ ಕಾರ್ಯನಿರ್ವಹಿಸುವ ಗುರಿ ಹೊಂದಿದ್ದೇನೆ. ‘ವಿಮುಕ್ತ ದನಿ’ ಮಾನವ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯವನ್ನು ಅಪ್ಪಿಕೊಂಡಿದೆ. ಹೀಗಾಗಿ ವಿಮುಕ್ತ ದನಿಗೆ ಪ್ರತಿಯೊಬ್ಬ ಸಮಾಜಮುಖಿ ಚಿಂತಕರ ಬೆಂಬಲ ಅತ್ಯಾವಶ್ಯವಾಗಿದೆ” ಎಂದರು.





