ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಡಕಟ್ಟು ಜನಾಂಗದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಆಯೋಜನೆ ಸಂಬಂಧ ನಡೆದ ಪೂರ್ವಭಾವಿ ಸಬೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ, ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಅತಿ ಹಿಂದುಳಿದ ಅರಣ್ಯಾಧಾರಿತ ಬುಡಕಟ್ಟು ವರ್ಗಗಳಿಗೆ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಈ ತಿಂಗಳ ಕೊನೆಯ ವಾರದಲ್ಲಿ ವಿಭಿನ್ನವಾಗಿ ಆಯೋಜಿಸಲಾಗಿದ್ದು, ಇದಕ್ಕಾಗಿ ಸಕಲ ಸಿದ್ದತೆಗಳನ್ನು ಕೈಗೊಳ್ಳುವಂತೆ ಸೂಚಿಸಿದರು.
ಬುಡಕಟ್ಟು, ಅರಣ್ಯ ವಾಸಿಗಳಿಗಾಗಿ ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಎರಡು ದಿನಗಳ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಬೆಟ್ಟ ಹತ್ತುವ, ಮರ ಹತ್ತುವ ಸ್ಪರ್ಧೆ, ಮ್ಯಾರಾಥಾನ್, 100 ಮೀ ಓಟ, ಹಗ್ಗ ಜಗ್ಗಾಟ, ಕಬ್ಬಡ್ಡಿ, ಲೆಮನ್ ಅಂಡ್ ಸ್ಪೂನ್, ವಾಲಿಬಾಲ್, ಇನ್ನಿತರ ಕ್ರೀಡಾ ಸ್ಪರ್ಧೆಗಳು ಇರಲಿವೆ. ಅಲ್ಲದೇ, ಸಾಂಸ್ಕೃತಿಕ ಸ್ಪರ್ಧೆಗಳೂ ಇದ್ದು ಜಾನಪದ ನೃತ್ಯ, ಜಾನಪದ ಗೀತೆ, ಗೊರುಕನ, ಪಿನಾಸಿ ನೃತ್ಯ, ಗುಬ್ಬಿ ಅಲೆ, ಮಾರಿಕುಣಿತ ಇನ್ನಿತರ ಸ್ಪರ್ಧೆಗಳನ್ನು ಏರ್ಪಾಡು ಮಾಡಲಾಗಿದೆ.
ಸಾಂಸ್ಕೃತಿಕ ಗುಂಪು ಹಾಗೂ ವೈಯಕ್ತಿಕ ವಿಭಾಗದಲ್ಲಿ ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ಸ್ಪರ್ಧೆಗಳು ಇರಲಿವೆ. ಎರಡು ದಿನಗಳ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸುವವರಿಗೆ ಉಚಿತವಾಗಿ ಬಸ್ ವ್ಯವಸ್ಥೆ ಮಾಡಬೇಕು. ಜಿಲ್ಲಾ ಕೇಂದ್ರದಲ್ಲಿ ಸ್ಪರ್ಧಿಗಳು ವಾಸ್ತವ್ಯ ಹೂಡಲು ಅಗತ್ಯ ವ್ಯವಸ್ಥೆಗಳನ್ನು ಕೈಗೊಳ್ಳಬೇಕು, ಊಟ ಉಪಹಾರ, ಕುಡಿಯುವ ನೀರು, ಇನ್ನಿತರ ಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸಬೇಕು ಎಂದು ತಿಳಿಸಿದರು.
ಕ್ರೀಡಾ ಸ್ಪರ್ಧೆಗಳು ನಡೆಯಲಿರುವ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಅವಶ್ಯವಿರುವ ಸಿದ್ದತೆಗಳನ್ನು ಕೈಗೊಳ್ಳಬೇಕು. ಉದ್ಘಾಟನಾ ಕಾರ್ಯಕ್ರಮಕ್ಕೆ ಶಿಷ್ಠಾಚಾರ ಅನುಸಾರ ಎಲ್ಲ ಪ್ರಕ್ರಿಯೆ ಕೈಗೊಳ್ಳಬೇಕು. ಸ್ಪರ್ಧೆಗಳಿಗೆ ತೀರ್ಪುಗಾರರನ್ನು ನಿಯೋಜಿಸಬೇಕು. ನಗದು ಬಹುಮಾನ ವಿತರಣೆಗೆ ಇಲಾಖೆಯ ಸುತ್ತೋಲೆಯಂತೆ ಕ್ರಮವಹಿಸಬೇಕು. ಕ್ರೀಡಾಕೂಟದಲ್ಲಿ ವೈದ್ಯಕೀಯ ವ್ಯವಸ್ಥೆ, ಪೊಲೀಸ್ ಭದ್ರತೆ ಇರಬೇಕು. ಒಟ್ಟಾರೆ ಅರಣ್ಯಾಧಾರಿತ ಬುಡಕಟ್ಟು ವರ್ಗದವರಿಗಾಗಿ ವಿಶೇಷವಾಗಿ ಹಮ್ಮಿಕೊಳ್ಳುತ್ತಿರುವ ಎರಡು ದಿನಗಳ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ಯಶಸ್ವಿಯಾಗಿ ನಡೆಯಲು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕೆಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಎಸ್ಎಸ್ಎಲ್ಸಿ 2025-26ರಲ್ಲಿ ಶೇ.100 ಫಲಿತಾಂಶಕ್ಕೆ ‘ಗುರಿ ನೂರು’ ಅಭಿಯಾನ
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ, ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹೆಚ್.ಎಸ್. ಬಿಂದ್ಯಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಚಂದ್ರಪಾಟೀಲ್, ನಗರಸಭೆ ಪ್ರಭಾರ ಆಯುಕ್ತ ಪ್ರಕಾಶ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಗಾಯತ್ರಿ, ಮುಖಂಡ ಡಾ. ಸಿ. ಮಾದೇಗೌಡ, ಎಂ. ಜಡೇಸ್ವಾಮಿ, ಮಾದೇವಯ್ಯ, ಪುಟ್ಟಮ್ಮ, ಸಿ. ಮಹದೇವ, ಬಸವರಾಜು, ಜೆ. ಮಹದೇವಸ್ವಾಮಿ, ಹುಚ್ಚಯ್ಯ, ಮಹದೇವಮ್ಮ, ಸಿದ್ದಮ್ಮ, ಜಡೆಯಪ್ಪ, ಮಹದೇವಮ್ಮ, ಪುಷ್ಪಲತಾ, ಇನ್ನಿತರ ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಇದ್ದರು.





