ಕೋಲಾರ : ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದ ಸಂವಿಧಾನವು ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ ಭದ್ರ ಬುನಾದಿಯ ಮೇಲೆ ನಿಂತಿದೆ. ಸಂವಿಧಾನದ ಆಶಯಗಳನ್ನು ಜಾರಿಗೆ ತರುವ ಮೂಲಕ ಹಸಿವು ಮುಕ್ತ ಹಾಗೂ ಮೌಡ್ಯ ಮುಕ್ತ ಸಮ ಸಮಾಜ ನಿರ್ಮಾಣಕ್ಕೆ ನಮ್ಮ ಸರ್ಕಾರ ಪಣತೊಟ್ಟಿದೆ ಎಂದು ನಗರಾಭಿವೃದ್ಧಿ ಹಾಗೂ ನಗರ ಯೋಜನಾ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್. ಸುರೇಶ್ ತಿಳಿಸಿದರು.
ನಗರದ ಸರ್ ಎಂ. ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ 77ನೇ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಆಕರ್ಷಕ ಪಥಸಂಚಲನದ ಗೌರವ ವಂದನೆ ಸ್ವೀಕರಿಸಿ ಅವರು ಸಂದೇಶ ನೀಡಿದರು.
ಗ್ಯಾರೆಂಟಿ ಯೋಜನೆಗಳ ಯಶಸ್ಸು ಸರ್ಕಾರದ ಪಂಚ ಗ್ಯಾರೆಂಟಿ ಯೋಜನೆಗಳು ಯುನಿವರ್ಸಲ್ ಬೇಸಿಕ್ ಇನ್‌ಕಮ್ ತತ್ವದಡಿ ರೂಪುಗೊಂಡಿದ್ದುಇವುಗಳಿಂದ ಜನರ ಕೊಳ್ಳುವ ಶಕ್ತಿ ಹೆಚ್ಚಾಗಿದೆ ಮತ್ತು ಜೀವನಮಟ್ಟ ಸುಧಾರಿಸಿದೆ ಎಂದು ಸಚಿವರು ಶ್ಲಾಘಿಸಿದರು. ಈ ಯೋಜನೆಗಳ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳ ಬಗ್ಗೆ ಕಿಂಗ್ಸ್ ಕಾಲೇಜ್ ಲಂಡನ್‌ನಂತಹ ಜಾಗತಿಕ ಸಂಸ್ಥೆಗಳು ಅಧ್ಯಯನ ನಡೆಸುತ್ತಿವೆ ಎಂದು ಅವರು ಉಲ್ಲೇಖಿಸಿದರು ಇದರೊಂದಿಗೆ ಇ-ಖಾತಾ ಮತ್ತು ಭೂ ಗ್ಯಾರೆಂಟಿಯಂತಹ ಹೊಸ ಉಪಕ್ರಮಗಳ ಮೂಲಕ ಆಸ್ತಿ ಸುರಕ್ಷತೆಗೂ ಆದ್ಯತೆ ನೀಡಲಾಗುತ್ತಿದೆ ಎಂದರು.
ಕೋಲಾರ ಜಿಲ್ಲೆಯ ರೈತರ ಬಗ್ಗೆ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು ಕೋಲಾರದ ರೈತರು ಮರುಭೂಮಿಯಂತಹ ನೆಲದಲ್ಲಿ ಚಿನ್ನದ ಬೆಳೆ ಬೆಳೆಯುವ ಕಷ್ಟ ಸಹಿಷ್ಣುಗಳು ಕೃಷಿ ಪ್ರಧಾನ ಜಿಲ್ಲೆಯಾಗಿದ್ದರೂ ಇಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಅತ್ಯಂತ ವಿರಳವಾಗಿರುವುದು ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಹೆಮ್ಮೆಯಿಂದ ನುಡಿದರು.
ಜಿಲ್ಲೆಯ ಪ್ರಗತಿಗಾಗಿ ಸರ್ಕಾರ ಕೈಗೊಂಡಿರುವ ಪ್ರಮುಖ ಯೋಜನೆಗಳ ಪಟ್ಟಿಯನ್ನು ಸಚಿವರು ಈ ಸಂದರ್ಭದಲ್ಲಿ ಹಂಚಿಕೊಂಡರು ವಿಶ್ವಸಂಸ್ಥೆಯು ಶ್ಲಾಘಿಸಿರುವಂತೆ ಸಂಸ್ಕರಿಸಿದ ನೀರಿನಿಂದ ಕೃಷಿ ಕ್ರಾಂತಿ ಮಾಡಿರುವ ಕೆ. ಸಿ. ವ್ಯಾಲಿ ಯೋಜನೆಯು ಜಾಗತಿಕ ಜಲ ನಿರ್ವಹಣೆಗೆ ಒಂದು ಪರಿವರ್ತನಾ ಮಾದರಿಯಾಗಿದೆ ಎಂದು ಅಭಿಪ್ರಾಯ ಪಟ್ಟರು.
ಕೋಲಾರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ, ₹3500 ಕೋಟಿ ವೆಚ್ಚದ ಇಂಡಸ್ಟ್ರಿಯಲ್ ಕಾರಿಡಾರ್ ಮತ್ತು ರಸ್ತೆ ನಿರ್ಮಾಣಕ್ಕೆ ನಾಂದಿ ಹಾಡಲಾಗಿದೆ ₹94 ಕೋಟಿ ವೆಚ್ಚದಲ್ಲಿ ಒಳಚರಂಡಿ ವ್ಯವಸ್ಥೆ ಹಾಗೂ ಅಂತರಗಂಗೆಯಿಂದ ಕೋಲಾರಮ್ಮನ ಕೆರೆಯವರೆಗಿನ ರಾಜಕಾಲುವೆ ಅಭಿವೃದ್ಧಿ ಮಾಡಲು ಯೋಜನೆ ರೂಪಿಸಲಾಗಿದೆ. ಮಾವು ಬೆಳೆಗಾರರಿಗೆ ಸಂಕಷ್ಟ ಬಂದಾಗ ₹41 ಕೋಟಿ ಪರಿಹಾರ ಬಿಡುಗಡೆ ಮಾಡಿರುವುದು ಸರ್ಕಾರದ ಬದ್ಧತೆಗೆ ಸಾಕ್ಷಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ವನದಲ್ಲಿ ಶಿಸ್ತು ಬೆಳೆಸಿಕೊಳ್ಳಿ ಸೃಜನಶೀಲತೆ ಮತ್ತು ಏಕಾಗ್ರತೆಯನ್ನು ನಾಶಮಾಡುವ ಸ್ಮಾರ್ಟ್‌ಫೋನ್ ಹಾಗೂ ಸೋಶಿಯಲ್ ಮೀಡಿಯಾ ವ್ಯಸನದಿಂದ ದೂರವಿರಿ ಹಿರಿಯರು ಮತ್ತು ಮಹಿಳೆಯರನ್ನು ಗೌರವಿಸುವ ಗುಣ ಬೆಳೆಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಇದನ್ನು ಓದಿದ್ದೀರಾ..? ಗ್ರೀನ್ ವುಡ್ಜ್ ಪ್ರೋ ನಿಂದ ಮಕ್ಕಳಲ್ಲಿ ಕ್ರೀಯಾಶೀಲ ಯಶಸ್ವಿಗೆ ಪೂರಕ: ಶ್ರೀನಿವಾಸ್
ಸಮಾರಂಭದಲ್ಲಿ ಕೋಲಾರದ ಶಾಸಕರಾದ ಡಾ. ಕೊತ್ತೂರು ಮಂಜುನಾಥ್, ವಿಧಾನ ಪರಿಷತ್ ಶಾಸಕರಾದ ಎಂ. ಎಲ್. ಅನಿಲ್ ಕುಮಾರ್, ಇಂಚರ ಗೋವಿಂದ ರಾಜು, ಕೂಡ ಅಧ್ಯಕ್ಷರು ಮಹಮದ್ ಹನೀಫ್, ಜಿಲ್ಲಾ ಗ್ಯಾರಂಟಿ ಯೋಜನೆಗಳು ಅನುಷ್ಠಾನ ಸಮಿತಿ ಅಧ್ಯಕ್ಷರು ವೈ. ಶಿವಕುಮಾರ್,ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ಪ್ರವೀಣ್. ಪಿ. ಬಾಗೇವಾಡಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕನ್ನಿಕಾ ಸಿಕ್ರಿವಾಲ್, ಅಪರ ಜಿಲ್ಲಾಧಿಕಾರಿ ಎಸ್ ಎಂ ಮಂಗಳ, ನೂತನ ಉಪವಿಭಾಗಾಧಿಕಾರಿ ಜಂಬಗಿ ರೇಣುಕಾ ಪ್ರಸಾದ್ ದಿಲೀಪ್, ಕೋಲಾರ ತಹಸೀಲ್ದಾರ್ ಡಾ. ನಯನ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.





