ಯು.ಪಿ.ಎ ಸರ್ಕಾರದ ಮಹತ್ವಾಕಾಂಕ್ಷೆಯ ಉದ್ಯೋಗ ಖಾತ್ರಿ ಯೋಜನೆಯಾದ ಮನರೇಗಾ ಯೋಜನೆಯ ಹೆಸರು ಹಾಗೂ ಮೂಲ ಸ್ವರೂಪವನ್ನು ಬದಲಾಯಿಸಿ ಯೋಜನೆಯನ್ನು ದುರ್ಬಲಗೊಳಿಸುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಜನವಿರೋಧಿ ಧೋರಣೆಯನ್ನು ಖಂಡಿಸಿ, ಕಾಪು ಉತ್ತರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪೆರ್ಡೂರು ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, “ಕೃಷಿಕರು ತಮ್ಮ ಸ್ವಂತ ಜಮೀನಿನಲ್ಲಿ ಬಾವಿ, ಹೈನುಗಾರಿಕೆ, ತೋಟ ನಿರ್ಮಾಣ, ಎಡೆಸಸಿ ಮುಂತಾದ ಕಾರ್ಯಗಳ ಮೂಲಕ ಸ್ವತಃ ಉದ್ಯೋಗ ಸೃಷ್ಟಿಸಿಕೊಂಡು ಆದಾಯ ಗಳಿಸಲು ಅವಕಾಶ ನೀಡಿದ ಏಕೈಕ ಯೋಜನೆ ಉದ್ಯೋಗ ಖಾತ್ರಿ ಯೋಜನೆ. ಬಡವರ ಬದುಕಿಗೆ ಆಸರೆಯಾದ ಇಂತಹ ಜನಪರ ಯೋಜನೆಯನ್ನು ರದ್ದುಪಡಿಸುವ ಉದ್ದೇಶ ಕೇಂದ್ರ ಸರ್ಕಾರಕ್ಕೆ ನಾಚಿಕೆಯಾಗಬೇಕು. ಯು.ಪಿ.ಎ ಸರ್ಕಾರ ಬಡವರಿಗೆ 100 ದಿನಗಳ ಕೆಲಸ ನೀಡುವ ಮೂಲಕ ಜನಸ್ನೇಹಿ ಆಡಳಿತ ನೀಡಿತ್ತು” ಎಂದು ಹೇಳಿದರು.
ನಂತರ ಮಾತನಾಡಿದ ಕಾಪು ಉತ್ತರ ಬ್ಲಾಕ್ ಉಸ್ತುವಾರಿ ನೀರೆ ಕೃಷ್ಣ ಶೆಟ್ಟಿ, ದೇಶದ ಹಳ್ಳಿಗಳ ಸಮಗ್ರ ಅಭಿವೃದ್ಧಿಗೆ, ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕೆ ಹಾಗೂ ಕೃಷಿಕರಿಗೆ ನೇರ ಆದಾಯ ತರುವ ಶಕ್ತಿ ಹೊಂದಿರುವ ಯೋಜನೆ ಉದ್ಯೋಗ ಖಾತ್ರಿ ಯೋಜನೆ ಎಂದರು. ಹಳ್ಳಿಗಳ ರಸ್ತೆ, ನೀರು ಸಂರಕ್ಷಣೆ, ಕೃಷಿ ಆಧಾರಿತ ಉದ್ಯೋಗಗಳು ಹಾಗೂ ಸ್ವಂತ ಜಮೀನಿನಲ್ಲಿ ಅಭಿವೃದ್ಧಿ ಕಾರ್ಯಗಳು ಈ ಯೋಜನೆಯ ಫಲವಾಗಿ ಸಾಧ್ಯವಾಗಿವೆ ಎಂದು ತಿಳಿಸಿದರು.
ಈ ಐತಿಹಾಸಿಕ ಯೋಜನೆಯನ್ನು ಜಾರಿಗೆ ತಂದ ಕಾಂಗ್ರೆಸ್ ನೇತೃತ್ವದ ಯು.ಪಿ.ಎ ಸರ್ಕಾರ ಹಾಗೂ ಅದರ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ಅವರನ್ನು ಸ್ಮರಿಸಿದ ಅವರು, ದೇಶದ ಆರ್ಥಿಕತೆಗೆ ದೃಢ ಮುನ್ನುಡಿ ಬರೆದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಕೊಡುಗೆಯನ್ನೂ ನೆನಪಿಸಿದರು. ಬಡವರ ಬದುಕಿಗೆ ಆಸರೆಯಾದ ಉದ್ಯೋಗ ಖಾತ್ರಿ ಯೋಜನೆಯನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನಗಳನ್ನು ದೇಶದ ಜನತೆ ಒಪ್ಪುವುದಿಲ್ಲ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಲಾಲ್, ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಮಾಜಿ ಮಂಡಲ ಪ್ರಧಾನ ಶಾಂತಾರಾಮ ಸೂಡರು, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಂತ ರೈ, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಪೂಜಾರಿ, ಪೆರ್ಡೂರು ಗ್ರಾಮ ಪಂಚಾಯತ್ ಸದಸ್ಯರಾದ ನವೀನ್ ಸಾಲಿಯಾನ್, ದಯಾನಂದ್ ಶೆಟ್ಟಿ, ಶೋಭಾ ಗಾಮ್ಸ್, ಲಕ್ಷ್ಮಿ, ಉದಯ್ ಕುಲಾಲ್, ರಾಘವೇಂದ್ರ, ಗಾಯತ್ರಿ, ಜಯ ಶ್ರೀ ಕುಲಾಲ್, ಎಸ್ಟಿ ಘಟಕದ ಬ್ಲಾಕ್ ಅಧ್ಯಕ್ಷ ರಾಮದಾಸ್ ನಾಯ್ಕ್, ಮಾಜಿ ಸಚಿವರ ಆಪ್ತ ಸಹಾಯಕ ನಬೀಲ್ ಉದ್ಯಾವರ, ರಾಜು ಸುವರ್ಣ, ಕಾರ್ತಿಕ್ ಆಚಾರ್ಯ, ಶಿವು ಕುಮಾರ್ ಸೇರಿದಂತೆ ಉದ್ಯೋಗ ಖಾತ್ರಿ ಯೋಜನೆಯ ಪಾಲಾನುಭವಿಗಳು ಹಾಗೂ ಇತರರು ಉಪಸ್ಥಿತರಿದ್ದರು.





