ಉಡುಪಿಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಶ್ರೀಕೃಷ್ಣ ಮಠದಲ್ಲಿ ಹಮ್ಮಿಕೊಂಡಿರುವ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಪಾಲ್ಗೊಂಡರು. ಈ ವೇಳೆ ಪ್ರಧಾನಿ ಮೋದಿಯವರಿಗೆ ವಿಶೇಷ ಬಿರುದು ನೀಡಿ ಸನ್ಮಾನಿಸಲಾಯಿತು. ಶ್ರೀಕೃಷ್ಣ ಮಠದ ಆವರಣದಲ್ಲಿ ನಡೆದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಭಾಗವಹಿಸಿದ ಪ್ರಧಾನಿ ಮೋದಿಯವರಿಗೆ ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥರು, ‘ಭಾರತ ಭಾಗ್ಯವಿದಾತ’ ಎಂಬ ವಿಶೇಷ ಬಿರುದು ನೀಡಿ ಸನ್ಮಾನಿಸಿದರು. ಇದೇ ವೇಳೆ ರಾಷ್ಟ್ರ ರಕ್ಷಾ ಕವಚ, ಶ್ರೀಕೃಷ್ಣನ ಫೋಟೋಗಳನ್ನು ನೀಡಿ ಪ್ರಧಾನಿ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಪುತ್ತಿಗೆ ಶ್ರೀಗಳು ಕಾಶಿ ಕಾರಿಡಾರ್ ರೀತಿ ಉಡುಪಿ ಕಾರಿಡಾರ್ ಅಭಿವೃದ್ಧಿ ಪಡಿಸುವಂತೆ ಮನವಿ ಮಾಡಿದರು. ಲಕ್ಷ ಕಂಠ ಗೀತಾ ಪಾರಾಯಣದ ಅಂಗವಾಗಿ ಭಗವದ್ಗೀತೆಯ 18ನೇ ಅಧ್ಯಾಯದ ಕೊನೆಯ ಕೆಲವು ಶ್ಲೋಕಗಳನ್ನು ಸಾಮೂಹಿಕವಾಗಿ ಪಠಣ ಮಾಡಲಾಯಿತು. ಈ ವೇಳೆ ಪ್ರಧಾನಿ ಮೋದಿ ಕೂಡ ಗೀತಾ ಪಾರಾಯಣ ಪಠಣ ಮಾಡಿದರು.

ಈ ಸಂದರ್ಭದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಜಲ ಸಂರಕ್ಷಣೆ, ನದಿಗಳ ಉಳಿಸುವಿಕೆ ಸೇರಿದಂತೆ ಒಟ್ಟು ಒಂಬತ್ತು ಸಂಕಲ್ಪಗಳನ್ನು ಪ್ರತಿಯೊಬ್ಬ ಭಾರತೀಯರೂ ತೊಡಬೇಕು. ತಮ್ಮ ತಾಯಿಯ ಹೆಸರಲ್ಲಿ ಒಂದು ಮರ ನೆಡುವುದು, ತಲಾ ಒಬ್ಬ ಬಡವನಿಗೆ ನೆರವು ನೀಡುವುದು, ಸ್ವದೇಶಿ ಉತ್ಪನ್ನಗಳಿಗೆ ಪ್ರೋತ್ಸಾಹ, ಆತ್ಮನಿರ್ಭರ ಭಾರತಕ್ಕೆ ಬೆಂಬಲ, ಸಾವಯವ ಕೃಷಿಗೆ ಒತ್ತು, ಆರೋಗ್ಯಪೂರ್ಣ ಜೀವನಶೈಲಿ, ನಿಯಮಿತ ಯೋಗಾಭ್ಯಾಸ ಹಾಗೂ ಹಸ್ತಪ್ರತಿಗಳ ಸಂರಕ್ಷಣೆಗೆ ಮುಂದಾಗುವಂತೆ ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಬಿ.ವೈ ರಾಘವೇಂದ್ರ, ಮುಖಂಡ ರಾದ ಬಿ. ವೈ. ವಿಜಯೇಂದ್ರ, ರಾಜ್ಯ ಸಭಾ ಸಂಸದ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಶಾಸಕರಾದ ವಿ ಸುನಿಲ್ ಕುಮಾರ್, ಯಶ್ ಪಾಲ್ ಎ ಸುವರ್ಣ, ಗುರುರಾಜ್ ಶೆಟ್ಟಿ ಗಂಟಿಹೊಳೆ, ಎ ಕಿರಣ್ ಕುಮಾರ್ ಕೊಡ್ಗಿ ಹಾಗೂ ಗುರ್ಮೆ ಸುರೇಶ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರ ಶ್ರೀ ಕೃಷ್ಣ ಮಠ ಭೇಟಿ ಹಿನ್ನೆಲೆಯಲ್ಲಿ ನಗರ ಪ್ರದೇಶ ಸೇರಿದಂತೆ ಲಕ್ಷಕಂಠ ಗೀತಾ ಪಠಣ ವೇದಿಕೆ ಸುತ್ತ ಮುತ್ತ ಎಸ್ ಪಿಜಿ, ಗುಪ್ತಚರ ದಳ, ಪೊಲೀಸ್ ಕಣ್ಗಾವಲು ಹಾಕಲಾಗಿತ್ತು. ವಿಐಪಿ, ವಿವಿಐಪಿ ಸೇರಿದಂತೆ ಪ್ರತಿಯೊಬ್ಬರನ್ನೂ ತೀವ್ರ ತಪಾಸಣೆ ನಡೆಸಿ ವೇದಿಕೆಯತ್ತ ಬಿಡುವ ವ್ಯವಸ್ಥೆ ಮಾಡಲಾಗಿತ್ತು.





