ಪೊನ್ನಂಪೇಟೆಯ ಮಾಯಮುಡಿಯ ರಿಮ್ ಫೈರ್ ಶೂಟರ್ಸ್ ಮತ್ತು ಗೋಣಿಕೊಪ್ಪಲಿನ ಕಾವೇರಿ ಪೊಮ್ಮಕ್ಕಡ ಕೂಟದ ವತಿಯಿಂದ ಇದೇ ಡಿ.7ರಂದು ಭಾನುವಾರ ತೆಂಗಿನಕಾಯಿಗೆ ಗುಂಡು ಹೊಡೆಯುವ ಮುಕ್ತ ಸ್ಪರ್ಧೆ ʼತೋಕ್ ನಮ್ಮೆʼ(ಬಂದೂಕು ಹಬ್ಬ) ಯನ್ನು ಆಯೋಜಿಸಲಾಗಿದೆ. ಮಾಯಮುಡಿಯ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ಸಿದ್ಧತೆಗಳು ಈಗಾಗಲೇ ಪೂರ್ಣಗೊಂಡಿದೆ ಎಂದು ತೋಕ್ ನಮ್ಮೆಯ ಸಂಚಾಲಕ ಸಣ್ಣುವಂಡ ವಿನಯ್ ಅಯ್ಯಪ್ಪ ತಿಳಿಸಿದ್ದಾರೆ.
ಸ್ಪರ್ಧೆಯು ರೈಫಲ್ ಮತ್ತು 12ನೇ ಬೋರ್ ಕೋವಿಯ ಪ್ರತ್ಯೇಕ ಎರಡು ವಿಭಾಗಗಳಲ್ಲಿ ನಡೆಯಲಿದೆ. ಸ್ಪರ್ಧೆಯಲ್ಲಿ ವಿಜೇತರಾಗುವ ಸ್ಪರ್ಧಿಗಳಿಗೆ ಪ್ರಥಮ ಹಾಗೂ ದ್ವಿತೀಯ ಸ್ಥಾನದ ವಿಶೇಷ ಪಾರಿತೋಷಕ ಸೇರಿದಂತೆ ಆಕರ್ಷಕ ನಗದು ಬಹುಮಾನವನ್ನು ನೀಡಲಾಗುವುದು ಎಂದು ಮಾಹಿತಿ ನೀಡಿರುವ ವಿನಯ್ ಅಯ್ಯಪ್ಪ, ಸ್ಪರ್ಧಿಗಳಿಗೆ ಸ್ಥಳದಲ್ಲೇ ಹೆಸರು ನೋಂದಾಯಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.
ಭಾನುವಾರ ಬೆಳಗ್ಗೆ 10 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ, ಮಾಜಿ ಎಂಎಲ್ಸಿ ಚೆಪ್ಪುಡಿರ ಎಸ್ ಅರುಣ್ ಮಾಚಯ್ಯ ಅವರು ʼತೋಕ್ ನಮ್ಮೆʼಯನ್ನು ಉದ್ಘಾಟಿಸಲಿದ್ದಾರೆ. ಗೋಣಿಕೊಪ್ಪಲಿನ ಕಾವೇರಿ ಪೊಮ್ಮಕ್ಕಡ ಕೂಟದ ಅಧ್ಯಕ್ಷ ಕೊಟ್ಟಂಗಡ ವಿಜು ದೇವಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಗೋಣಿಕೊಪ್ಪಲು ಎಪಿಎಂಸಿಯ ಮಾಜಿ ಅಧ್ಯಕ್ಷ ಕಾಳಪಂಡ ಟಿ ಟಿಪ್ಪು ಬಿದ್ದಪ್ಪ, ಯುವ ಉದ್ಯಮಿ ಕಾಳಪಂಡ ಜೆ ಬೋಪಣ್ಣ ಮತ್ತು ಕೋಣನಕಟ್ಟೆಯ ಕಾಫಿ ಬೆಳೆಗಾರ ಚೆಪ್ಪುಡಿರ ಕಿಟ್ಟು ಅಯ್ಯಪ್ಪ ಅವರು ಪಾಲ್ಗೊಳ್ಳಲಿದ್ದಾರೆ ಎಂದು ವಿನಯ್ ಅಯ್ಯಪ್ಪ ವಿವರಿಸಿದರು.
ಇದನ್ನೂ ಓದಿ: ಕೊಡಗು | ಪೊನ್ನಂಪೇಟೆ ತಾಲ್ಲೂಕು ಪಂಚಾಯತಿ ಪ್ರಭಾರ ಯೋಜನಾಧಿಕಾರಿ ಹೃದಯಾಘಾತದಿಂದ ನಿಧನ
ಸಂಜೆ ನಡೆಯುವ ತೋಕ್ ನಮ್ಮೆಯ ಸಮಾರೋಪ ಸಮಾರಂಭದಲ್ಲಿ ವಿಜೇತ ಸ್ಪರ್ಧಿಗಳಿಗೆ ಬಹುಮಾನ ವಿತರಿಸಲಾಗುವುದು. ಈ ಕಾರ್ಯಕ್ರಮಕ್ಕೆ ಮಾಯಮುಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಆಪಟ್ಟಿರ ಟಾಟು ಮೊಣ್ಣಪ್ಪ, ಮಾಯಮುಡಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆಪಟ್ಟಿರ ಬೋಪಣ್ಣ, ಸದಸ್ಯ ಮಲ್ಲೇಗೌಡ ಮಮತಾ ಪೂಣಚ್ಚ, ಮಾಯಮುಡಿಯ ಕಾವೇರಿ ಅಸೋಸಿಯೇಷನ್ ಅಧ್ಯಕ್ಷ ಕಾಳಪಂಡ ಸಿ ಸುಧೀರ್, ಕಾಫಿ ಬೆಳೆಗಾರ ಸಣ್ಣುವಂಡ ಸರೋಜ, ಆಪಟ್ಟಿರ ಶ್ಯಾಮ್ ಸೋಮಯ್ಯ, ಗೋಣಿಕೊಪ್ಪಲಿನ ಟಾಟಾ ಮೋಟಾರ್ಸ್ ನ ಪ್ರಧಾನ ವ್ಯವಸ್ಥಾಪಕ ಪುಳ್ಳoಗಡ ಸಿಮ್ ಕುಟ್ಟಪ್ಪ, ವ್ಯವಸ್ಥಾಪಕ ಮನೆಯಪಂಡ ಬೋಪಣ್ಣ, ಉದ್ಯಮಿ ಸೋಮಯ್ಯ ಮಾಚಿ ಮಾಡ ಮಧುಮಂದಪ್ಪ ಅವರು ಭಾಗವಹಿಸಲಿದ್ದಾರೆ ಎಂದು ವಿನಯ್ ಅಯ್ಯಪ್ಪ ತಿಳಿಸಿದ್ದಾರೆ.





