ಕೊಡಗು ಜಿಲ್ಲೆ, ಪೊನ್ನಂಪೇಟೆ ತಾಲ್ಲೂಕು ಬೇಗೂರು ಗ್ರಾಮದಲ್ಲಿ ನಾಲ್ವರನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ್ದ ಆರೋಪಿಗೆ ₹10ಸಾವಿ ರೂಪಾಯಿ ದಂಡ ಹಾಗು ಗಲ್ಲು ಶಿಕ್ಷೆ ವಿಧಿಸಿ ವಿರಾಜಪೇಟೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಕೇರಳದ ಮಾನಂದವಾಡಿ ಬಳಿಯ ಅತ್ತಿಮಾಲ ಕಾಲೋನಿ ನಿವಾಸಿ ಕೃಷ್ಣನ್ ಎಂಬುವವರ ಮಗ ಎ.ಕೆ. ಗಿರೀಶ್(35) ಮಲ ಮಗಳು ಕಾವೇರಿ (5),ಪತ್ನಿ ನಾಗಿ (30),ಅಜ್ಜ ಜೇನುಕುರುಬರ ಕರಿಯ(75),ಅಜ್ಜಿ ಗೌರಿ (70) ನಾಲ್ವರನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ್ದನು.
ಒಂಟಿ ಮನೆಯಲ್ಲಿ ವಾಸಿಸುತ್ತಿದ್ದ ಇವರುಗಳ ಪೈಕಿ ಆರೋಪಿ ಗಿರೀಶ್ ಎಂಬಾತ ನಾಗಿಯ ಮೂರನೇ ಗಂಡನಾಗಿದ್ದು, ಒಂದು ವರ್ಷದಿಂದ ಒಟ್ಟಿಗೆ ವಾಸವಾಗಿದ್ದರು. ನಾಗಿ ತನ್ನ ಎರಡನೇ ಗಂಡನಾದ ಸುಬ್ರಮಣಿ ಎಂಬಾತಾನೊಂದಿಗೆ ಮತ್ತೆ ಸಂಬಂಧ ಹೊಂದಿದ್ದಾಳೆ ಎಂಬ ಸಂಶಯದಿಂದ ಗಿರೀಶ್ ದಿನಾಂಕ-27-03-2025 ರಂದು ರಾತ್ರಿ ಸಮಯದಲ್ಲಿ ಈ ವಿಚಾರವಾಗಿ ಜಗಳವಾಡಿ ಬರ್ಬರವಾಗಿ ಹತ್ಯೆಗೈದಿದ್ದ.
ಪ್ರಕರಣ ಸಂಬಂಧವಾಗಿ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ 103(1) BNS Act ಅಡಿಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡು ದಿನಾಂಕ-28-03-2025 ರಂದು ಅರೋಪಿ ಗಿರೀಶನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಪ್ರಕರಣದ ತನಿಖಾಧಿಕಾರಿ ಗೋಣಿಕೊಪ್ಪಲು ವೃತ್ತ ನಿರೀಕ್ಷಕ ಆರ್. ಶಿವರಾಜ್ ಮುಧೋಳ್, ತನಿಖಾ ಸಹಾಯಕರಾದ ಕೆ.ಎ. ಅಬ್ದುಲ್ ಮಜೀದ್, ಹೇಮಲತಾ ರೈ ಹಾಗೂ ಗೋಣಿಕೊಪ್ಪಲು ವೃತ್ತ ನಿರೀಕ್ಷಕರ ಕಛೇರಿಯ ಸಿಬ್ಬಂದಿಗಳು ಪ್ರಕರಣದ ಸಂಪೂರ್ಣ ತನಿಖೆ ಕೈಗೊಂಡು ದಿನಾಂಕ-12-06-2025 ರಂದು ಆರೋಪಿ ಗಿರೀಶನ ವಿರುದ್ದ ವಿರಾಜಪೇಟೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.
ಈ ಸುದ್ದಿ ಓದಿದ್ದೀರಾ? ಯುಗಧರ್ಮ | ಸಮಾಜವಾದಿ ಚಳವಳಿಯ ನೈತಿಕ ಮತ್ತು ಸೃಜನಶೀಲ ಪರಂಪರೆ
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎಸ್. ನಟರಾಜ್ ರವರು ಆರೋಪಿ ಗಿರೀಶ್ ಗೆ ಗಲ್ಲು ಶಿಕ್ಷೆ ಹಾಗೂ ₹10 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಈ ಪ್ರಕರಣವನ್ನು ಸರ್ಕಾರಿ ಅಭಿಯೋಜಕರಾದ ಯಾಸಿನ್ ಅಹಮ್ಮದ್ ವಾದ ಮಂಡಿಸಿದ್ದರು.





