115 ದಿನಗಳ ಅನಿರ್ದಿಷ್ಟ ಧರಣಿ, 15 ದಿನಗಳ ಕೊರೆವ ಚಳಿಯಲ್ಲಿ ಆಹೋರಾತ್ರಿ ಧರಣಿ, 27 ಜನ ಹೋರಾಟಗಾರರ ಮೇಲೆ ಕೊಲೆಗೆ ಯತ್ನದ ಸುಳ್ಳು ಆರೋಪ ಹಾಗೂ ಈ ಆರೋಪಕ್ಕಾಗಿ ಆರು ಜನ ನಾಯಕರ 14 ದಿನಗಳ ಜೈಲುವಾಸ!! ಇಷ್ಟೆಲ್ಲವನ್ನೂ ಅನುಭವಿಸಿದ ವಿಜಯಪುರಕ್ಕೆ ಸಂಕ್ರಮಣದ ಸೂರ್ಯ ಒಂದು ಐತಿಹಾಸಿಕ ಕಳೆ ತಂದಿದೆ!!
ಸಂಕ್ರಾಂತಿಯೇ ಹಾಗೆ. ಪ್ರಕೃತಿಯು ಹೊಸ ಮನ್ವಂತರಕ್ಕೆ ನಾಂದಿ ಹಾಡುವ ಹೊತ್ತು! ಎಳ್ಳು, ಬೆಲ್ಲ- ಸಿಹಿ-ಕಹಿ ಎರಡನ್ನೂ ಅರಗಿಸಿಕೊಳ್ಳವುದನ್ನು ಕಲಿಸುತ್ತದೆ. ಹಲವು ಮಾಸಗಳ ತನ್ನ ಚಲನೆಯನ್ನು ಬದಲಿಸುವ ಕಾತರ ಆ ಸೂರ್ಯನಿಗೂ ಬರುತ್ತದೆ. ಎಲ್ಲದಕ್ಕೂ ಬದಲಾವಣೆಯ ಗಾಳಿ ತಾಗುವ ಸಂದರ್ಭವೇ ಸಂಕ್ರಾಂತಿ. ಹೌದು, ವಿಜಯಪುರದ ಈ ಬಾರಿಯ ಸಂಕ್ರಾಂತಿಯು ಜನಹೋರಾಟದ ವಿವಿಧ ಆಯಾಮ, ರೂಪಗಳನ್ನೂ ಸಂಕ್ರಮಿಸಿ ಕೊಟ್ಟಿತು. ಪೃಕೃತಿಯಲ್ಲಷ್ಟೇ ಅಲ್ಲ, ಸಮಾಜದಲ್ಲೂ ಮೂಡುತ್ತಿರುವ ‘ಹೊಸ ಬಿಸಿಲಿ’ಗಂಜಿ ‘ಮೈ ಕೊರೆವ ಚಳಿ’ ತನಗರಿವಿಲ್ಲದೆ ತನ್ನ ಗಂಟು ಮೂಟೆ ಕಟ್ಟುತ್ತಿದೆ!!
ಈ ಹೋರಾಟ ಹುಟ್ಟು ಹಾಕಿದ ಮುಖ್ಯವಾದ ಹೊಸ ಪರಂಪರೆ ಎಂದರೆ ಎಲ್ಲ ಜಾತಿ, ಧರ್ಮ, ಭಾಷೆ, ಜನಾಂಗ, ಹಲವಾರು ಸಂಘಟನೆಗಳು, ವಿವಿಧ ರಾಜಕೀಯ ಪಕ್ಷಗಳು ಎಲ್ಲವನ್ನೂ ಎಲ್ಲರನ್ನೂ ಒಳಗೊಂಡು ಒಟ್ಟಾಗಿ ಹೇಗೆ ಜನಚಳುವಳಿ ಕಟ್ಟಬಹುದು ಎಂಬ ಪಠ್ಯವನ್ನು ಸೃಷ್ಟಿಸಿದೆ. ಜೊತೆಗೆ ಎಲ್ಲ ಅಸ್ಮಿತೆಗಳಿರುವುದೇ ಮನುಕುಲದ ಅಭಿವೃದ್ದಿಗೆ ಎಂಬುದೂ ತೋರಿಸಿಕೊಟ್ಟಿದೆ. ಒಂದುವೇಳೆ ನಮ್ಮ ಅಸ್ಮಿತೆಗಳು ಅಡ್ಡಿಯಾಗುತ್ತವೆ ಎಂದೆನಿಸಿದರೆ ಒಂದು ಮಹಾನ್ ಕೆಲಸಕ್ಕಾಗಿ ಅದನ್ನು ತಾತ್ಕಾಲಿಕವಾಗಿ ಪಕ್ಕಕ್ಕಿಟ್ಟು ತಾಳ್ಮೆಯಿಂದ ಮತ್ತು ಸೌಹಾರ್ದತೆಯಿಂದ ಮುನ್ನುಗ್ಗಲು ಸಾಧ್ಯವಿದೆ ಎಂಬುದನ್ನು ತೋರಿಸಿದೆ.
ಬಿಜೇಪಿ, ಕಾಂಗ್ರೆಸ್, ಜೆಡಿಎಸ್, ಆಮ್ ಆದ್ಮಿ, ಎಸ್ ಡಿಪಿಐ, ಕೆಅರ್ ಎಸ್, ಕಮ್ಯೂನಿಷ್ಟ್ ಪಕ್ಷಗಳು ಜೊತೆಗೆ ವಿಶ್ವ ಹಿಂದೂ ಪರಿಷತ್, ಜಮಾತ್ ಎ ಇಸ್ಲಾಂ, ದಲಿತ, ಕಾರ್ಮಿಕ, ರೈತ, ವಿದ್ಯಾರ್ಥಿ, ಯುವಜನ, ಮಹಿಳಾ ಸಂಘಟನೆಗಳು, ಜಾತಿ, ಧರ್ಮ, ಭಾಷೆ , ಸಿದ್ದಾಂತ, ವೈಚಾರಿಕತೆ ಎಲ್ಲವನ್ನು ಮೀರಿ ಒಂದಾಗಿ ಸರ್ಕಾರಿ ವೈದ್ಯಕೀಯ ಕಾಲೇಜಿನ ಹೋರಾಟ ಕಟ್ಟಲಾಯಿತು ಮತ್ತು ಸಮಾಜದ ಕಟ್ಟಕಡೆಯ ವ್ಯಕ್ತಿಗಳನ್ನು ಒಳಗೊಂಡು ನೈಜ ಅರ್ಥದಲ್ಲಿ ಒಂದು ಧರ್ಮನಿರಪೇಕ್ಷ, ಜಾತ್ಯಾತೀತ ವಿಚಾರಗಳ ಮೇಲೆ ಒಂದು ಪ್ರಜಾತಾಂತ್ರಿಕ ಹೋರಾಟದ ಮಾದರಿಯು ಸೃಷ್ಟಿಯಾಯಿತು. ಒಗ್ಗಟ್ಟಿನಲ್ಲಿ ಬಲವಿದೆ. ಜನ ಹೋರಾಟಕ್ಕೆ ಭವಿಷ್ಯವಿದೆ ಎಂಬುದನ್ನೂ ಸಾಬಿತು ಪಡಿಸಿತು.
ಇದು ಕೇವಲ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿನ ಹೋರಾಟವಾಗಿರಲಿಲ್ಲ; ಬದಲಾಗಿ ಷೋಷಿತ, ಬಡ, ದಲಿತ, ದಮನಿತರ ಆರೋಗ್ಯ ಮತ್ತು ಶಿಕ್ಷಣದ ಹಕ್ಕಿನ ರಕ್ಷಣೆಯ ಹೋರಾಟವೂ ಇದಾಗಿತ್ತು. ಪಿಪಿಪಿ ಹೆಸರಿನಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ಮಾರಾಟ ಮಾಡುವದನ್ನು ತಡೆಗಟ್ಟುವುದಾಗಿತ್ತು. ಬಡವರ ಜೀವನಾಡಿಯಾದ ಸರ್ಕಾರಿ ಆಸ್ಪತ್ರೆಯ ಉಳಿಸುವ ಹೋರಾಟವಾಗಿತ್ತು.
ಇತ್ತೀಚೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ ಸ್ಥಳದ ಕೂಗಳತೆ ದೂರದಲ್ಲಿ ನಿಂತು ಮುಖ್ಯಮಂತ್ರಿಗಳು ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸುತ್ತೇವೆ, ಪಿಪಿಪಿ ಮಾಡುವುದಿಲ್ಲ, ಇದಕ್ಕೆ ಹೋರಾಟದ ಅವಶ್ಯಕತೆ ಇಲ್ಲ ಎಂದು ಘೋಷಿಸಿದ್ದಾರೆ. ಹಾಗಾಗಿ ‘ಜನ ಹೋರಾಟ’ ಒಂದು ಸಂತಸವನ್ನು ಮನಸಾರೆ ಅನುಭವಿಸಿದೆ. ಅಷ್ಟೇ ಅಲ್ಲ ಮುಂದುವರೆದು ರಾಜ್ಯ ಸರ್ಕಾರವು ಕೇವಲ ವಿಜಯಪುರದಲ್ಲಷ್ಟೇ ಅಲ್ಲ, ಎಲ್ಲಾ ಜಿಲ್ಲೆಗಳಲ್ಲೂ ಸರ್ಕಾರಿ ವೈದ್ಯಕೀಯ ಕಾಲೇಜು ಮಾಡುವುದಾಗಿ ಹೇಳಿದೆ. ಆ ಮೂಲಕ ವಿಜಯಪುರದ ಈ ಹೋರಾಟ ರಾಜ್ಯದ ವಿವಿಧ ಜಿಲ್ಲೆಗಳಿಗೂ ತನ್ನ ಪರಿಮಳ ಮತ್ತು ಫಲವನ್ನು ನೀಡಿದೆ. ಇದೊಂದು ಸಂತಸದ ಸಂದರ್ಭ. ಜೊತೆಗೆ ಕಾಯಿ ಹಣ್ಣಾಗುವವರೆಗೂ ಯಾವ ದನಗಳು ಕದ್ದು ತಿನ್ನದಂತೆ ಸದಾ ಎಚ್ಚರದಿಂದಿರುವ ಸಂದರ್ಭವೂ ಹೌದು.
ಈ ಲೇಖನ ಓದಿದ್ದೀರಾ?: ಬೀದರ್ | ಕೋಟಿ ಖರ್ಚಾದರೂ ಉದ್ಘಾಟನೆಯಾಗದ ಪದವಿ ಕಾಲೇಜು ಹಾಸ್ಟೆಲ್ : ಕುಸಿಯುತ್ತಿದೆ ದಾಖಲಾತಿ
ಕೊಟ್ಟ ಆಶ್ವಾಸನೆ ಇಡೇರಿಸುವ ಜವಾಬ್ದಾರಿ ಮುಖ್ಯಮಂತ್ರಿಗಳು ಮತ್ತು ಸರ್ಕಾರದ ಮೇಲೆ ಇದೆ. ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಮ್.ಬಿ.ಪಾಟೀಲರು ಮತ್ತು ಇನ್ನೋರ್ವ ಸಚಿವರಾದ ಶ್ರೀ ಶಿವಾನಂದ ಪಾಟೀಲರು ಕೊಟ್ಟ ಮಾತಿನಂತೆ ನಡೆದು ಎಲ್ಲಾ 27 ಜನ ಹೋರಾಟಗಾರರ ಮೇಲಿನ ಸುಳ್ಳು ಪ್ರಕರಣಗಳನ್ನು ರದ್ದುಗೊಳಿಸಬೇಕಿದೆ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಇಬ್ಬರೂ ಸಚಿವರು ತಮ್ಮ ಪ್ರಭಾವ ಬೀರಿ ಇದೇ ಬಜೆಟ್ ನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಬಜೆಟ್ ಘೋಷಿಸುವಂತ ಕೆಲಸ ಮಾಡಿದರೆ ಇನ್ನೂ ಹೆಚ್ಚು ಅರ್ಥಪೂರ್ಣವಾಗುತ್ತದೆ. ಸದಾ ಹಿಂದುಳಿದವರ ಪರ , ಅಹಿಂದ ಪರ, ಶೋಷಿತರ ಪರ ಎಂದು ಕರೆಸಿಕೊಳ್ಳುವ ರಾಜ್ಯ ಸರ್ಕಾರದ ಮತ್ತು ಮುಖ್ಯಮಂತ್ರಿಗಳ ಮಾತಿಗೂ ಅರ್ಥಬರುತ್ತದೆ. ಯಾಕೆಂದರೆ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಸರ್ಕಾರಿ ಆಸ್ಪತ್ರೆಗಳು ಬೇಕಿರುವುದೇ ಇಂಥ ಬಡ ಮತ್ತು ಶೋಷಿತ ಜನಾಂಗಗಳಿಗೆ ಹೊರತು ತಿಂದು ತೇಗುವ ತಿಮಿಂಗಿಲುಗಳಿಗಲ್ಲ.
ಈಗ ಪಿಪಿಪಿಯನ್ನು ಗೆದ್ದಾಯ್ತು, ಹೋರಾಟಗಾರರು ಜೈಲಿಂದ ಬಂದದ್ದೂ ಆಯ್ತು ಮುಂದೇನು? ಎಂಬ ಪ್ರಶ್ನೆಗೂ ಉತ್ತರಿಸಬೇಕಿದೆ. ಈ ಸುದೀರ್ಘ ಹೋರಾಟ ನೂರಾರು ಅಡೆತಡೆಗಳನ್ನು ದಾಟಿ, ತಂತ್ರ ಕುತಂತ್ರಗಳನ್ನು ಮೆಟ್ಟಿನಿಂತು, ಒಳ ಮತ್ತು ಹೊರ ವೈರಿಗಳನ್ನು ಗೆದ್ದಾಗಿದೆ. ಆದರೆ ಇದು ಮೈ ಮರೆಯುವ ಸಂದರ್ಭವಲ್ಲ. ವೈದೈಕೀಯ ಕಾಲೇಜಿಗೆ ಶಂಖು ಸ್ಥಾಪನೆಯಾಗುವವರೆಗೂ ಹೋರಾಟ ಸಮಿತಿಯು ತನ್ನ ಅಸ್ತಿತ್ವ ಮತ್ತು ಕ್ರೀಯಾಶೀಲತೆಯನ್ನು ಸಾಬಿತು ಪಡಿಸಬೇಕಿದೆ.




