ಹುಬ್ಬಳ್ಳಿ-ಧಾರವಾಡ ಮಹಾನಗರಗಳ ಮಾರ್ಗಮದ್ಯೆ ಸಂಚರಿಸುವ ಚಿಗರಿ ಬಸ್ ಅರ್ಥಾತ್ ಬಿಆರ್‌ಟಿಎಸ್ ಯೋಜನೆಯು ಕೆಲವರಿಗೆ ಅನುಕೂಲವಾದರೆ ಇನ್ನು ಕೆಲವು ಅನಾನುಕೂಲವೆಂಬ ಧ್ವನಿಗಳು ಎಂದಿನಿಂದಲೂ ಕೇಳಿ ಬರುತ್ತಿವೆ.
ಬಿಆರ್‌ಟಿಎಸ್ ಯೋಜನೆಯ ಅವೈಜ್ಞಾನಿಕತೆ ವಿರೋಧಿಸಿ ಧಾರವಾಡ ಧ್ವನಿ ಎಂಬ ಪಕ್ಷಾತೀತ ಹೋರಾಟ ಸಂಘಟನೆಯೊಂದು ಬಿಗರಿ ಬಸ್ ಸಂಚರಿಸುವ ರಸ್ತೆಯಲ್ಲಿ, ಕೆಲ ಪ್ರದೇಶಗಳಲ್ಲಿ ಖಾಸಗಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸೋಮವಾರ ಧಾರವಾಡದ ನವಲೂರು ಬ್ರಿಡ್ಜ್ ನಿಂದ ಹೊರಟು ಜಿಲ್ಲಾಧಿಕಾರಿ ಕಚೇರಿಯವರೆಗೆ ಪಾದಯಾತ್ರೆ ಮಾಡುವ ಮೂಲಕ ಒತ್ತಾಯ ಮಾಡಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಅದರೊಂದಿಗೆ ವಾಹನಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈ ಅವಳಿನಗರಗಳ ಮಾರ್ಗಮಧ್ಯದಲ್ಲಿ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತಿವೆ. ಬಿಆರ್‌ಟಿಎಸ್ ಯೋಜನೆ ಜಾರಿಯಾದ ನಂತರ ಬಿಗರಿ ಬಸ್‌ಗಳು ಸಂಚರಿಸಲು ಪ್ರತ್ಯೇಕ ರಸ್ತೆಯ ವ್ಯವಸ್ಥೆಯು ಇದೆ. ಚಿಗರಿ ಬಸ್ ಹೊರತುಪಡಿಸಿ ಖಾಸಗಿ ವಾಹನಗಳ ಸಂಚಾರಕ್ಕೆ ಈ ಪ್ರತ್ಯೇಕ ರಸ್ತೆಯಲ್ಲಿ ಅನುಮತಿ ನೀಡಿಲ್ಲ. ಹೀಗಾಗಿ ಖಾಸಗಿ ವಾಹನಗಳು ಚಿಗರಿ ರಸ್ತೆಯನ್ನು ಬಿಟ್ಟು ನಿಗದಿತ ರಸ್ತೆಯಲ್ಲಿ ಮಾತ್ರ ಸಂಚರಿಸಬೇಕಿದೆ. ಇದರ ಪರಿಣಾಮವಾಗಿ ಹುಬ್ಬಳ್ಳಿ ಧಾರವಾಡ ಮಾರ್ಗಮಧ್ಯದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಪ್ರತಿಭಟನಾಕಾರರು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರಿಗೆ ಮನವಿ ಸಲ್ಲಿಸಿದರು.

ಸಾರ್ವಜನಿಕ ರಸ್ತೆಗೆ ಹೋಲಿಸಿದರೆ ಚಿಗರಿ ಬಸ್ ಸಂಚರಿಸುವ ರಸ್ತಯು ಪ್ರತಿದಿನ ಶೇ. 95 ರಷ್ಟು ಖಾಲಿಯಾಗಿಯೇ ಇರುತ್ತದೆ. ಸಾರ್ವಜನಿಕ ರಸ್ತೆಯಲ್ಲಿ ದಿನಂಪ್ರತಿ ವಾಹನಗಳಿಂದ ಜನರು ಕಿಕ್ಕಿರಿದಿರುತ್ತಾರೆ. ಹೀಗಾಗಿ ಬಿಆರ್‌ಟಿಎಸ್ ರಸ್ತೆಯಲ್ಲಿ ಧಾರವಾಡದ ಜ್ಯುಬಿಲಿ ವೃತ್ತದಿಂದ ನವಲೂರಿನವರೆಗೆ, ಉಣಕಲ್‌ನಿಂದ ಹುಬ್ಬಳ್ಳಿ ರಾಣಿ ಚೆನ್ನಮ್ಮ ವೃತ್ತದವರೆಗೂ ಬೈಕ್, ಆಟೊ, ಕಾರು ಮತ್ತು ಲಘು ವಾಹನಗಳು ಸಂಚರಿಸಲು ಅನುಮತಿ ನೀಡಬೇಕು ಎಂದು ಧಾರವಾಡ ಧ್ವನಿ ಸಂಘಟನೆ ಸದಸ್ಯರು ಬಿಆರ್ ಟಿಎಸ್ ರಸ್ತೆಯಲ್ಲಿಯೇ ಪಾದಯಾತ್ರೆ ಮೂಲಕ ಘೋಷಣೆಯನ್ನು ಕೂಗಿದರು.
ಪಾದಯಾತ್ರೆ ನಡೆದಿದ್ದ ಸಂದರ್ಭದಲ್ಲಿ ಚಿಗರಿ ಬಸ್ ಮಧ್ಯೆ ಬಂದಿದ್ದಕ್ಕೆ ಆಕ್ರೋಶಗೊಂಡ ಹೋರಾಟಗಾರರು ಚಿಗರಿ ಬಸ್‌ಗೆ ಅಡ್ಡ ಮಲಗಿ ಆಕ್ರೋಶ ವ್ಯಕ್ತಪಡಿಸಿ, ಚಿಗರಿ ಬಸ್‌ಗೆ ಪೂಜೆ ಮಾಡಿ ತೆಂಗಿನಕಾಯಿ ಒಡೆದು ಆಕ್ರೋಶ ವ್ಯಕ್ತಪಡಿಸಿದರು.
‘ಯಾಲಕ್ಕಿ ಶೆಟ್ಟರ್ ಕಾಲೊನಿ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಿ’ ಭಿತ್ತಿಫಲಕಗಳನ್ನು ಕೈಯಲ್ಲಿ ಹಿಡಿದು ಬಿಆರ್ ಟಿಎಸ್ ಯೋಜನೆಯ ವಿರುದ್ಧ ಘೋಷಣೆ ಕೂಗಿದರು. ಒಟ್ಟಾರೆ ಬಿಆರ್‌ಟಿಎಸ್ ಯೋಜನೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಿ ಸಮಸ್ಯೆ ಬಗೆಹರಿಸಬೇಕು ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಒಂದು ಸಮಿತಿ ರಚಿಸಬೇಕು. ಆ ಸಮಿತಿಯಲ್ಲಿ ಸಾರ್ವಜನಿಕರನ್ನೂ ಸೇರಿಸಿ ಶೀಘ್ರ ಮತ್ತು ಸುರಕ್ಷಿತ ಪ್ರಯಾಣಕ್ಕೆ ಅನುವು ಮಾಡಿಕೊಡಬೇಕು ಎಂದು ಹೋರಾಟಗಾರರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಧಾರವಾಡ ಧ್ವನಿ ಸಂಘಟನೆ, ಕರ್ನಾಟಕ ದಲಿತ ವಿಮೋಚನಾ ಸಮಿತಿ, ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕರ ಸುರಕ್ಷತಾ ಸಂಘ ಹಾಗೂ ಜನತಾ ಶಿಕ್ಷಣ ಸಮಿತಿ, ಜೆಎಸ್‌ಎಸ್ ಸಂಸ್ಥೆ ಈ ಪಾದಯಾತ್ರೆಗೆ ಬೆಂಬಲ ನೀಡಿದರು.





