ವಿವಿಧ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರು ಅಕ್ಟೋಬರ್ 5 ರಂದು ಪ್ರತಿಭಟನೆ ನಡೆಸಲು ನಿರ್ಧಾರಿಸಿದ್ದಾರೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದ ಎಂದು ಸಾರಿಗೆ ನಿಗಮಗಳ ಅಧ್ಯಕ್ಷ ಎಚ್.ಡಿ ರೇವಣ್ಣ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, “ಕಳೆದ ವರ್ಷ 15% ವೇತನ ಹೆಚ್ಚಳ ಮಾಡಲಾಗಿದೆ. ಆದರೆ, ಆ ಪರಿಷ್ಕೃತ ವೇತನದ ಹಣ ಇನ್ನೂ ನೌಕರರಿಗೆ ದೊರೆತಿಲ್ಲ. ಆ ವೇತನ ಹಿಂಬಾಕಿ ಹಣವನ್ನು ಪಾವತಿಸಬೇಕು. ಎಲೆಕ್ಟ್ರಿಕ್ ಬಸ್‌ಗಳಲ್ಲಿ ನಮ್ಮ ನೌಕರರನ್ನೇ ಚಾಲಕರಾಗಿ ನೇಮಿಸಬೇಕು. ಅಲ್ಲದೆ, ಈ ಹಿಂದೆ ಪ್ರತಿಭಟನೆ ನಡೆಸಿದ್ದ ಸಮಯದಲ್ಲಿ ವಜಾಗೊಳಿಸಿದ್ದ ಎಲ್ಲ ನೌಕರರನ್ನು ವಾಪಸ್ ಕೆಲಸಕ್ಕೆ ನೇಮಿಸಬೇಕೆಂಬ ಹಕ್ಕೊತ್ತಾಯಗಳನ್ನು ಸರ್ಕಾರ ಮುಂಡಿಟ್ಟಿದ್ದೇವೆ” ಎಂದು ಹೇಳಿದ್ದಾರೆ.
“ಬಿಎಂಟಿಸಿಯಲ್ಲಿ ನೌಕರರ ಆತ್ಮಹತ್ಯೆ ಪ್ರಕರಣಗಳ ಹೆಚ್ಚುತ್ತಿವೆ. ಆ ಬಗ್ಗೆ ಗಮನಹರಿಸಿ, ನೌಕರರ ಆತ್ಮಹತ್ಯೆಗಳನ್ನು ತಡೆಯಬೇಕು. ನೌಕರರಿಗೆ ಶೇ.8.33 ಬೋನಸ್ ಕೊಡಬೇಕು. ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ಅಧಿಕಾರಿಗಳನ್ನ ಭೇಟಿ ಮಾಡಲು ಹಾಕಿರುವ ನಿರ್ಬಂಧ ತೆಗೆಯಬೇಕು. ನೌಕರರ ಮೇಲೆ ಆಗುತ್ತಿರುವ ದೌರ್ಜನ್ಯಗಳನ್ನು ತಡೆಯಬೇಕು” ಎಂದು ಕೆಎಸ್‌ಆರ್‌ಟಿಸಿ ವರ್ಕರ್ ಫೆಡರೇಶನ್ ಅಧ್ಯಕ್ಷ ಅನಂತ ಸುಬ್ಬರಾವ್ ಒತ್ತಾಯಿಸಿದ್ದಾರೆ.
ಅಕ್ಟೋಬರ್ 5ರಂದು ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳು ಹೋರಾಟಕ್ಕೆ ಇಳಿಯುತ್ತಿದ್ದು, ಬಸ್ ಸಂಚಾರದಲ್ಲಿ ವ್ಯತ್ಯಯವಾಗಬಹುದು ಎಂದು ಹೇಳಲಾಗಿದೆ.




