ಸಾಂಸ್ಕೃತಿಕ ನಗರಿಯನ್ನು ಹಸಿರುಮಯ ಮತ್ತು ಕಸಮುಕ್ತ ನಗರವನ್ನಾಗಿ ಮಾಡುವಲ್ಲಿ ಸಾರ್ವಜನಿಕರ ಜವಾಬ್ದಾರಿ ಮಹತ್ವದ್ದಾಗಿದೆ. ಕೇವಲ ಮೈಸೂರು ಮಹಾನಗರ ಪಾಲಿಕೆಯ ಪ್ರಯತ್ನದಿಂದ ಮಾತ್ರ ಸಂಪೂರ್ಣ ಸ್ವಚ್ಛತೆ ಸಾಧ್ಯವಿಲ್ಲ. ಬದಲಿಗೆ ಪ್ರತಿಯೊಬ್ಬ ನಾಗರಿಕನು ತನ್ನ ಪರಿಸರದ ಬಗ್ಗೆ ಕಾಳಜಿ ವಹಿಸಿದಾಗ ಮಾತ್ರ ಮೈಸೂರು ದೇಶದಲ್ಲೇ ಮಾದರಿ ನಗರವಾಗಿ ಹೊರಹೊಮ್ಮಲು ಸಾಧ್ಯ ಎಂದು ಸಮಾಜ ಕಲ್ಯಾಣ ಇಲಾಖೆ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪ ಅಭಿಪ್ರಾಯಪಟ್ಟರು.
ಸಾಂಸ್ಕೃತಿಕ ನಗರಿ ಮೈಸೂರನ್ನು ದೇಶದ ಮಾದರಿ ಸ್ವಚ್ಛ ಮತ್ತು ಹಸಿರುಮಯ ನಗರವನ್ನಾಗಿ ರೂಪಿಸುವ ಮಹತ್ವಾಕಾಂಕ್ಷಿ ಗುರಿಯೊಂದಿಗೆ ಮೈಸೂರು ಮಹಾನಗರ ಪಾಲಿಕೆಯು ಸ್ವಚ್ಛ ಭಾರತ್ ಮಿಷನ್-2.0 ಅಡಿಯಲ್ಲಿ ಭಾನುವಾರ ರಾಜ್ಯಮಟ್ಟದ ಬೃಹತ್ ಸ್ವಚ್ಛತಾ ರೋಡ್ ಶೋ ಹಾಗೂ ಘನತ್ಯಾಜ್ಯ ನಿರ್ವಹಣಾ ಪ್ರದರ್ಶನಕ್ಕೆ ಚಾಲನೆ ನೀಡಿದರು.
ಮೈಸೂರಿನ ಅಂದವನ್ನು ಕಾಪಾಡುವ ನಿಟ್ಟಿನಲ್ಲಿ ಜನರಲ್ಲಿ ವ್ಯಾಪಕ ಅರಿವು ಮೂಡಿಸಲು ಈ ಬೃಹತ್ ರೋಡ್ ಶೋ ಆಯೋಜಿಸಲಾಗಿದೆ. ಸ್ವಚ್ಛತೆ ಎನ್ನುವುದು ಕೇವಲ ಒಂದು ದಿನದ ಅಭಿಯಾನವಾಗಬಾರದು, ಅದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು. ಸ್ವಚ್ಛ ಭಾರತ್ ಅಭಿಯಾನದ ಯಶಸ್ಸಿನಲ್ಲಿ ಮಹಿಳೆಯರ ಮತ್ತು ಪೌರಕಾರ್ಮಿಕರ ಶ್ರಮ ಅತ್ಯಂತ ಅಮೂಲ್ಯವಾದುದು, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳನ್ನು ಇದೇ ಸಂದರ್ಭದಲ್ಲಿ ತಿಳಿಸಿದರು.

ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಶೇಖ್ ತನ್ವೀರ್ ಆಸೀಫ್ ಅವರ ನೇತೃತ್ವದಲ್ಲಿ ನಡೆದ ಜಾಥ ಅರಮನೆ ಆವರಣದಿಂದ ಆರಂಭವಾಗಿ ಸುಮಾರು 3.5 ಕಿಮೀ ದೂರದ ಮಹಾರಾಜ ಕಾಲೇಜು ಮೈದಾನದಲ್ಲಿ ಸಮಾಪ್ತಿಗೊಂಡಿತು. ರೋಡ್ ಶೋ, ಪಥಸಂಚಲನದಲ್ಲಿ ಹತ್ತು ಕುದುರೆಗಳ ಹಾರ್ಸ್ ಯೂನಿಟ್ ಗಮನಸೆಳೆಯಿತು. ಮಹಿಳಾ ಪೂಜಾ ಕುಣಿತ, ಡೊಳ್ಳು ಕುಣಿತ, ವೀರಗಾಸೆ, ನಗಾರಿ ಮತ್ತು ಲಂಬಾಣಿ ನೃತ್ಯ ತಂಡಗಳು ಸಾಂಸ್ಕೃತಿಕ ಮೆರಗು ನೀಡಿದವು. ಜಾನಪದ ಕಲಾತಂಡಗಳಾದ ಪಟ ಕುಣಿತ, ಕಂಸಾಳೆ, ಗಾರಡಿ ಗೊಂಬೆ ಮತ್ತು ಗೊರವರ ಕುಣಿತದೊಂದಿಗೆ ಸುಮಾರು 200 ಎನ್ಎಸ್ಎಸ್ ಹಾಗೂ 300 ಎನ್ ಸಿ ಸಿ ಕೆಡೆಟ್ ಗಳು ಶಿಸ್ತುಬದ್ಧವಾಗಿ ಹೆಜ್ಜೆ ಹಾಕಿದರು. ವಿಂಟೇಜ್ ಕಾರುಗಳು ಮತ್ತು 30 ಪುರುಷ ಹಾಗೂ ಮಹಿಳಾ ಸವಾರರ ಬೈಕ್ ಗಳ ರ್ಯಾಲಿ ಸಾರ್ವಜನಿಕರ ಗಮನ ಸೆಳೆದವು. 600ಕ್ಕೂ ಹೆಚ್ಚು ಪೌರಕಾರ್ಮಿಕರು, ಪಾಲಿಕೆ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ 25 ಅತ್ಯಾಧುನಿಕ ಘನತ್ಯಾಜ್ಯ ನಿರ್ವಹಣಾ ವಾಹನಗಳು ಮೆರವಣಿಗೆಯ ಮೂಲಕ ಸ್ವಚ್ಛತೆಯ ಸಂದೇಶವನ್ನು ಸಾರಿದವು.
ಸ್ವಚ್ಛತಾ ರಾಯಭಾರಿಗಳಾದ ವಿಶ್ವವಿಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್, ಬಿಗ್ ಬಾಸ್ ಖ್ಯಾತಿಯ ಸೂರಜ್ ಸಿಂಗ್, ಗಾಯಕ ಅಲೋಕ್ ಹಾಗೂ ಅನನ್ಯಾ ಭಟ್ ಪಾಲ್ಗೊಂಡು ಸಾರ್ವಜನಿಕರನ್ನು ಹುರಿದುಂಬಿಸಿದರು. ವಿಶೇಷ ಅತಿಥಿಯಾಗಿ ಖ್ಯಾತ ಗಾಯಕ ಜಸ್ಕರಣ್ ಸಿಂಗ್ ಭಾಗವಹಿಸಿದ್ದರು. ಮಹಾರಾಜ ಕಾಲೇಜು ಮೈದಾನ ತಲುಪಿದ ನಂತರ ಪಾಲ್ಗೊಂಡಿದ್ದ ಗಣ್ಯರು ಹಾಗೂ ಸಾವಿರಾರು ನಾಗರಿಕರು ಒಟ್ಟಾಗಿ ಸ್ವಚ್ಛತಾ ಪ್ರತಿಜ್ಞೆಯನ್ನು ಸ್ವೀಕರಿಸಿದರು.
ಈ ಸುದ್ದಿ ಓದಿದ್ದೀರಾ? ಕೆ ಆರ್ ಪೇಟೆ | ಸರ್ಕಾರಿ ಶಾಲೆ ಉಳಿವಿಗಾಗಿ ಸ್ವಂತ ಖಾಸಗಿ ಶಾಲೆ ಮುಚ್ಚಿಸಿದ ಶಾಸಕ ಹೆಚ್ ಟಿ ಮಂಜು: ವೈ ಕೆ ತಿಮ್ಮೆಗೌಡ

ಅಭಿಯಾನದಲ್ಲಿ ಶಾಸಕರಾದ ಕೆ. ಹರೀಶ್ ಗೌಡ, ತನ್ವೀರ್ ಸೇಠ್, ಜಿ.ಟಿ. ದೇವೇಗೌಡ, ಹಾಗು ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಡಾ. ಕೆ. ಶಿವಕುಮಾರ್, ಪ್ರಾದೇಶಿಕ ಆಯುಕ್ತರು, ಮೈಸೂರು ಮಹಾನಗರ ಪಾಲಿಕೆಯ ಆಡಳಿತಾಧಿಕಾರಿ ನಿತೇಶ್ ಪಾಟೀಲ್, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಬಿ.ಎ. ಯುಖೇಶ್ ಕುಮಾರ್, ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ಪಿ ಸುಂದರ್ ರಾಜ್, ಪಾಲಿಕೆಯ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು.





