ರಾಜ್ಯದಲ್ಲಿ ಮಾರ್ಚ್ 1ರಿಂದ (ಶನಿವಾರ) ಪಿಯುಸಿ ಪರೀಕ್ಷೆಗಳು ಆರಂಭವಾಗಿವೆ. ಇದಕ್ಕೂ ಮುನ್ನ ಪ್ರಥಮ ಪಿಯುಸಿ ಪರೀಕ್ಷೆಗಳು ನಡೆದಿದ್ದು, ಪರೀಕ್ಷೆಯಲ್ಲಿ ನಕಲು ಮಾಡಿದ್ದಾರೆ ಎಂಬ ಆರೋಪ ಕೇಳಿಬಂದ ಹಿನ್ನೆಲೆ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ನಡೆದಿದೆ.
ಪ್ರಥಮ ಪಿಯುಸಿ ಪರೀಕ್ಷೆ ಬರೆದಿದ್ದ ತೇಜಸ್ವಿನಿ ದೊಡ್ಡಮನಿ ಆತ್ಮಹತ್ಯೆಗೆ ಶರಣಾಗಿರುವ ದುರ್ದೈವಿ. ವಿದ್ಯಾರ್ಥಿನಿ ಶಾರದಾ ಖಾಸಗಿ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಫೆಬ್ರವರಿ 27ರಂದು ರಸಾಯನಶಾಸ್ತ್ರ ಪರೀಕ್ಷೆ ಬರೆದಿದ್ದರು.
ಪರೀಕ್ಷೆ ಬರೆಯುತ್ತಿದ್ದ ವೇಳೆ ವಿದ್ಯಾರ್ಥಿನಿ ನಕಲು ಮಾಡುತ್ತಿದ್ದಾರೆ ಎಂಬುದನ್ನು ಗಮನಿಸಿದ ಪರೀಕ್ಷಾ ಮೇಲ್ವಿಚಾರಕರು ವಿದ್ಯಾರ್ಥಿನಿಯನ್ನು ಪ್ರಶ್ನಿಸಿದ್ದರು. ಘಟನೆ ಬಗ್ಗೆ ವಿದ್ಯಾರ್ಥಿನಿ ತನ್ನ ಪೋಷಕರ ಬಳಿ ದೂರು ಹೇಳಿದ್ದರು ಎಂದು ಹೇಳಲಾಗಿದೆ.
ಮರುದಿನ ಕಾಲೇಜಿಗೆ ಬಂದ ಪೋಷಕರು ಕಾಲೇಜು ಸಿಬ್ಬಂದಿಯನ್ನು ಪ್ರಶ್ನಿಸಿದ್ದರು. ಈ ವೇಳೆ, ಆ ನಕಲು ಮಾಡಿರುವುದಕ್ಕೆ ಸಾಕ್ಷ್ಯವಾಗಿ ಸಿಸಿಟಿವಿ ದೃಶ್ಯಾವಳಿ ತೋರಿಸುವುದಾಗಿ ಹೇಳಿದ ಸಿಬ್ಬಂದಿಗಳು, ವಿದ್ಯಾರ್ಥಿನಿಗೆ ಬುದ್ದಿ ಹೇಳಿದ್ದರು ಎಂದು ತಿಳಿದುಬಂದಿದೆ.
ಬಳಿಕ, ಕಾಲೇಜಿನಿಂದ ವಿದ್ಯಾರ್ಥಿ ಹೊರಗೆ ಓಡಿ ಹೋಗಿದ್ದರು. ಆಕೆಗಾಗಿ ಪೋಷಕರು ಮತ್ತು ಕಾಲೇಜು ಸಿಬ್ಬಂದಿ ಹುಡುಕಾಟ ನಡೆಸಿದರೂ, ಆಕೆ ಪತ್ತೆಯಾಗಿರಲಿಲ್ಲ. ಬಳಿಕ, ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ವಿದ್ಯಾರ್ಥಿನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದು, ಭಾನುವಾರ, ಕೆರೆಯಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ.





