ಡಿಸೆಂಬರ್ 21 ರಿಂದ 24ರವರೆಗೆ ಜಿಲ್ಲಾದ್ಯಂತ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿ ಪಲ್ಸ್ ಪೋಲಿಯೋ ಲಸಿಕೆಯನ್ನು ಹಾಕುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನದ ಯಶಸ್ವಿ ಕಾರ್ಯಾಚರಣೆ ಕುರಿತು ಜರುಗಿದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ʼಡಿ.21 ರಿಂದ 24 ರವರೆಗೆ ನಡೆಯಲಿರುವ ರಾಷ್ಟ್ರೀಯ ಪಲ್ಸ್ ಪೊಲಿಯೋ ಲಸಿಕಾ ಕಾರ್ಯಕ್ರಮದಲ್ಲಿ ಯಾವುದೇ ಮಗು ಲಸಿಕೆಯಿಂದ ವಂಚಿತವಾಗದಂತೆ ನೋಡಿಕೊಳ್ಳಬೇಕುʼ ಎಂದು ಸೂಚಿಸಿದರು.
ʼಭೂತಮಟ್ಟದಲ್ಲಿ ಅಂಗನವಾಡಿ, ಸಮುದಾಯ ಭವನ, ಬಸ್ ನಿಲ್ದಾಣ ಹಾಗೂ ಇನ್ನುಳಿದ ಮೂರು ದಿನ ಮನೆ-ಮನೆ ಭೇಟಿ ನೀಡಿ ಲಸಿಕಾ ಕಾರ್ಯಕರ್ತರು ಲಸಿಕೆ ನೀಡಬೇಕು. ಬೇರೆ ರಾಜ್ಯ ಹಾಗೂ ಜಿಲ್ಲೆಯಿಂದ ಬರುವ ಕಾರ್ಮಿಕರ ಮಕ್ಕಳಿಗೂ ಕಡ್ಡಾಯವಾಗಿ ಲಸಿಕೆ ಹಾಕಬೇಕುʼ ಎಂದು ತಿಳಿಸಿದರು.
ʼಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಧ್ಯಾನೇಶ್ವರ ನೀರಗುಡೆ ಮಾತನಾಡಿ, ʼಡಿ.21ರಂದು 996-ಬೂತ್‌ಗಳು, 11-ಸಂಚಾರಿ ತಂಡ, 70- ಟ್ರಾಂಜಿಟ್ ತಂಡಗಳ ಮೂಲಕ ಲಸಿಕೆ ನೀಡಲಾಗುವುದು. ಒಟ್ಟು 1077- ತಂಡಗಳನ್ನು ರಚಿಸಲಾಗಿದೆ. ಈ ತಂಡದಲ್ಲಿ ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ಡಿ.22 ರಿಂದ 24 ರವರೆಗೆ ಜಿಲ್ಲೆಯ ಒಟ್ಟು 3,35,347 ಮನೆಗಳಿಗೆ ಭೇಟಿ ನೀಡಿ ಬಿಟ್ಟು ಹೋದ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡಲಾಗುವುದುʼ ಎಂದು ತಿಳಿಸಿದರು.
ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮ ಅಧಿಕಾರಿಗಳು ಹಾಗೂ ಜಿಲ್ಲಾಆರ್.ಸಿ.ಹೆಚ್. ಅಧಿಕಾರಿ ಶಿವಶಂಕರ.ಬಿ. ಮಾತನಾಡಿ, ʼಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ 0-5 ವರ್ಷದ 2,13,372 (ಗ್ರಾಮೀಣ ಮತ್ತು ನಗರ ಪ್ರದೇಶ ಸೇರಿ) ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, ಇದಕ್ಕಾಗಿ 1,077 ತಂಡಗಳು ರಚಿಸಲಾಗಿದ್ದು, ಅಲ್ಲದೇ 2,154 ಲಸಿಕೆದಾರರನ್ನು ಹಾಗೂ 216 ಜನರನ್ನು ಬೂತ್ ಮೇಲ್ವಿಚಾರಣೆಗಾಗಿ ಸಿಬ್ಬಂದಿಯವರನ್ನು ನೇಮಿಸಲಾಗಿದೆʼ ಎಂದರು.
ʼತಾಲೂಕಾ ಆರೋಗ್ಯ ಅಧಿಕಾರಿಗಳು ತಮ್ಮ ಆಧೀನದಲ್ಲಿ ಬರುವ ಎಲ್ಲಾ ಕ್ಷೇತ್ರಗಳಲ್ಲಿ ಮೇಲ್ವಿಚಾರಣೆ ನಡೆಸುವುದಲ್ಲದೆ, ಜಿಲ್ಲಾ ಮಟ್ಟದಿಂದ ಪ್ರತಿಯೊಂದು ತಾಲ್ಲೂಕುಗಳಿಗೆ ಮೇಲ್ವಿಚಾರಣೆಗಾಗಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. 5-14 ವರ್ಷದ ಹೆಣ್ಣು ಮಕ್ಕಳಿಗೆ ಸರ್ವಿಕಲ್ ಕ್ಯಾನ್ಸರ್ ತಡೆಗಟ್ಟುವ ಕುರಿತು ಹ್ಯೂಮನ್ ಪಾಪಿಲ್ಲೊಮಾ ವೈರಸ್ (ಹೆಚ್‌ಪಿಎ) ಲಸಿಕೆ ಮುಂದಿನ ದಿನಗಳಲ್ಲಿ ನೀಡುವ ಕುರಿತು ಪೂರ್ವ ತಯಾರಿ ಮಾಡಲಾಗುತ್ತಿದೆʼ ಎಂದು ತಿಳಿಸಿದರು.
ಕಲಬುರಗಿಯ ಎಸ್‌ಎಂಓಡಬ್ಲ್ಯೂಹೆಚ್ ಡಾ.ಅನೀಲಕುಮಾರ ತಾಳಿಕೋಟಿ ಅವರು ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಬಗ್ಗೆ ವಿಸ್ತಾರವಾಗಿ ತಿಳಿಸಿದ ಅವರು ʼ2011ರಲ್ಲಿ ಭಾರತದಲ್ಲಿ ಕೊನೆಯ ಪೋಲಿಯೋ ಪ್ರಕರಣ ಪತ್ತೆಯಾಗಿತ್ತು. 2014ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಪೋಲಿಯೋ ಮುಕ್ತ ಭಾರತ ಎಂದು ಘೋಷಿಸಿದೆ. ಆದರೂ ನೆರೆ ರಾಷ್ಟ್ರಗಳಾದ ಪಾಕಿಸ್ತಾನ, ಆಫ್ಘಾನಿಸ್ತಾನಗಳಲ್ಲಿ ಈಗಲೂ ಪೋಲಿಯೋ ಪ್ರಕರಣಗಳಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಪಲ್ಸ್ ಪೋಲಿಯೋ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆʼ ಎಂದರು.
ಇದನ್ನೂ ಓದಿ : ಬೀದರ್ | ವಕೀಲರ ಅವಹೇಳನ : ಸಿಪಿಐ ವಿರುದ್ಧ ಕ್ರಮಕ್ಕೆ ಆಗ್ರಹ
ಪ್ರೋಬೇಷನರಿ ಐಎಎಸ್ ಅಧಿಕಾರಿ ರಮ್ಯಾ ರಂಗನಾಥ, ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಮಹೇಶ ಕುಳಲಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶ್ರೀಧರ ಎಂ.ಎಚ್., ಜಿಲ್ಲೆಯ ಎಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳಾದ ಡಾ.ರಾಜಶೇಖರ ಪಾಟೀಲ, ಡಾ.ಶಂಕ್ರಪ್ಪಾ ಬೊಮ್ಮಾ, ಡಾ.ಅನೀಲ ಚಿಂತಾಮಣಿ, ಡಾ.ದಿಲಿಪ್ ಡೊಂಗರೆ, ಡಾ.ಕಿರಣ ಪಾಟೀಲ, ಅನಿತಾ, ಉಮೇಶ ಬಿರಾದರ, ಲೋಕೇಶ ಸಲಗರ, ಶಿವಶಂಕರ ದೇಮಳಗಿ, ಗುರುನಾಥ ಕವಳೆ, ದೇವಿದಾಸ ಸೇರಿದಂತೆ ತಾಲೂಕಾ ಆರೋಗ್ಯ ಅಧಿಕಾರಿಗಳು, ಅಂತರ ಇಲಾಖೆಯ ಅಧಿಕಾರಿಗಳು ಜಿಲ್ಲಾ ಆರ್‌ಸಿಎಚ್ ಕಚೇರಿಯ ಸಿಬ್ಬಂದಿ ಉಪಸ್ಥಿತರಿದ್ದರು.





