ಕನ್ನಡ ಚಿತ್ರರಂಗದ ಚಿತ್ರಬ್ರಹ್ಮ ಎಸ್.ಆರ್. ಪುಟ್ಟಣ್ಣ ಕಣಗಾಲ್ ರ ಜನ್ಮದಿನೋತ್ಸವ ಅಂಗವಾಗಿ ಕರುಣಾಮಯಿ ವಿಷ್ಣು ಅಭಿಮಾನಿ ಬಳಗದ ವತಿಯಿಂದ ಮೈಸೂರಿನ ಚಾಮುಂಡಿಪುರಂನ ತಗಡೂರು ರಾಮಚಂದ್ರರಾವ್ ವೃತ್ತದಲ್ಲಿ ‘ಪುಟ್ಟಣ್ಣ ನೆನಪಿನಂಗಳ’ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಆರ್. ರಘು ಕೌಟಿಲ್ಯ, ಪಿರಿಯಾಪಟ್ಟಣದ ಪುಟ್ಟಣ್ಣ ಕಣಗಾಲರ ಮನೆಯನ್ನು ಸ್ಮಾರಕವನ್ನಾಗಿಸಿ ಉಳಿಸಿಕೊಳ್ಳಬೇಕಿದೆ ಎಂದರು.
ಪೌರಾಣಿಕ ನಾಟಕಗಳು, ಸಂಗೀತ ಕಾರ್ಯಕ್ರಮಗಳಿಗೆ ಅತಿ ಹೆಚ್ಚು ಪ್ರೋತ್ಸಾಹ, ಜನಮನ್ನಣೆಯಿದ್ದ ಕಾಲಘಟ್ಟದಲ್ಲಿ ಕೌಟುಂಬಿಕ ಚಿತ್ರಗಳು ಮತ್ತು ಸಮಾಜಕ್ಕೆ ಸಂದೇಶ ಸಾರುವ ಚಿತ್ರಗಳನ್ನ ಸರಿಸಾಟಿಯಾಗಿ ನಿರ್ದೇಶಿಸಿ 3 ದಿನಗಳ ಮುಂಗಡವಾಗಿ ಸರತಿ ಸಾಲಿನಲ್ಲಿ ಟಿಕೆಟ್ ಪಡೆಯಲು ಚಿತ್ರಮಂದಿರಕ್ಕೆ ಕಲಾಪ್ರೇಕ್ಷಕರನ್ನ ಆಕರ್ಷಿಸಿದ್ದು ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ರವರ ಚಿತ್ರಗಳು. ನಾಗರಹಾವು ಚಿತ್ರದಲ್ಲಿ ಬರುವ ಪಾತ್ರಗಳು, ಓನಕೆ ಒಬ್ಬವ್ವ ಇವತ್ತಿಗೂ ಯುವಪೀಳಿಗೆಯಲ್ಲಿ ದೇಶ ಪ್ರೇಮವನ್ನ ಹೆಚ್ಚಿಸುತ್ತದೆ.
ಚಾಮಯ್ಯ ಮೇಷ್ಟ್ರು, ರಾಮಾಚಾರಿ ಪಾತ್ರಗಳು ಗುರುಶಿಷ್ಯನ ಭಾಂದವ್ಯ ಗೌರವವನ್ನ ಹೆಚ್ಚಿಸುತ್ತದೆ. ಸಮಾಜದಲ್ಲಿ ವಸ್ತುಸ್ಥಿತಿಯನ್ನ ತೋರಿಸಿ ಜನರನ್ನ ಎಚ್ಚರಿಸುತ್ತಿದ್ದ ಪುಟ್ಟಣ್ಣ ಕಣಗಾಲ್ ರವರ ಚಿತ್ರಗಳು ಪ್ರೇಕ್ಷಕರ ಮನಗೆದ್ದಿತು. ಚಿತ್ರದುರ್ಗದ ಕಲ್ಲಿನ ಕೋಟೆ, ಕನ್ಯಾಕುಮಾರಿಯ ವೀವೇಕಾನಂದ ಸ್ಮಾರಕ, ಕೊಡಗಿನ ಕಾವೇರಿ, ಚಾಮುಂಡೇಶ್ವರಿ, ಮೈಸೂರು ದಸರಾ ಸೇರಿದಂತೆ ಪ್ರತಿಯೊಂದು ಸನ್ನಿವೇಶವುಳ್ಳ ಚಿತ್ರದ ಹಾಡುಗಳು ಸಹ ಪ್ರವಾಸಿ ತಾಣದ ಜನಪ್ರಿಯತೆ ತಂದುಕೊಟ್ಟಿತು.
ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣವಾಗುವ ಸಂಧರ್ಭದಲ್ಲಿ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ರವರ ಹೆಸರನ್ನ ನಾಮಕರಣ ಮಾಡಿ ಸ್ಮರಿಸಬೇಕು ಎಂದು ಮನವಿ ಮಾಡಿದರು.
ಹಿರಿಯ ಸಮಾಜಸೇವಕ ಡಾ.ಕೆ ರಘುರಾಂ ವಾಜಪೇಯಿ ಮಾತನಾಡಿ, ಕಲಾವಿದರ ತವರೂರು ಮೈಸೂರು. ಚಿತ್ರರಂಗ ಕ್ಷೇತ್ರದಲ್ಲಿ ಉತ್ತಂಗಕ್ಕೆ ಏರಲು ಪುಟ್ಟಣ್ಣ ಕಣಗಾಲ್ ರವರ ಪಾತ್ರ ಪ್ರಮುಖವಾದದ್ದು. ಪುಟ್ಟಣ್ಣನವರ ಚಿತ್ರದಲ್ಲಿ ಪಾತ್ರಗಳ ನಟನೆಯಲ್ಲಿ ಪರಿಪೂರ್ಣತೆ ಸಿಗುವವರೆಗೂ ಕಲಾವಿದರು ಭಯದ ವಾತವರಣದಲ್ಲೇ ನಟಿಸುತ್ತಿದ್ದ ಕಾರಣ. ವಿಷ್ಣುವರ್ಧನ್, ಅಂಬರೀಶ್, ಶ್ರೀನಾಥ್ ಸೇರಿದಂತೆ ಬಹುತೇಕರು ಅತ್ಯುತ್ತಮ ನಟರಾಗಿ ಹೊರಹೊಮ್ಮಿದರು, ಪುಟ್ಟಣ್ಣನವರ ಚಿತ್ರವು ಸಮಾಜಕ್ಕೆ ಸಂದೇಶ ಮತ್ತು ಕುಟುಂಬಪ್ರಧಾನವಾಗಿದ್ದವು. ‘ಹಿಂದೂಸ್ಥಾನವು ಎಂದು ಮರೆಯದ ಭಾರತರತ್ನವು ನೀನಾಗು’ ಗೀತೆ ಸಹಸ್ರಾರು ಯುವಕರನ್ನ ವಿವಿಧ ಕ್ಷೇತ್ರದಲ್ಲಿ ಮುಖ್ಯವಾಹಿನಿಗೆ ಬಂದು ಸಾಧನೆ ಮಾಡುವಂತೆ ಪ್ರೇರೇಪಿಸಿತು ಎಂದರು,
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ವರ್ತಮಾನದ ತಲ್ಲಣಗಳಿಗೆ ನಾರಾಯಣ ಗುರು – ಗಾಂಧಿಯೇ ಉತ್ತರ
ಕಾರ್ಯಕ್ರಮದಲ್ಲಿ ಮಾಜಿ ನಗರ ಪಾಲಿಕೆ ಸದಸ್ಯರಾದ ಎಂ.ಡಿ. ಪಾರ್ಥಸಾರಥಿ, ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್, ಡಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ಪಡುವರಹಳ್ಳಿ ಎಂ. ರಾಮಕೃಷ್ಣ, ಗಿರೀಶ್, ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷ ಕಡಕೋಳ ಜಗದೀಶ್, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ವಿನಯ್ ಕಣಗಾಲ್, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷ ಅಪೂರ್ವ ಸುರೇಶ್, ಕರುಣಾಮಯಿ ವಿಷ್ಣು ಅಭಿಮಾನಿ ಬಳಗದ ಅಧ್ಯಕ್ಷ ಎಸ್.ಎನ್. ರಾಜೇಶ್, ರಂಗನಾಥ್, ಧರ್ಮೇಂದ್ರ, ಸುಚೀಂದ್ರ, ಕಲಾವಿದ ನಾಗೇಂದ್ರ ಪ್ರಸಾದ್ ಸೇರಿದಂತೆ ಇನ್ನಿತರರು ಇದ್ದರು.





