ಐದು ವರ್ಷಗಳ ಹಿಂದೆ 2020ರ ಏಪ್ರಿಲ್‌ನಲ್ಲಿ ನಡೆದ ಸೈಬರ್ ವಂಚನೆ ಪ್ರಕರಣವೊಂದನ್ನು ರಾಯಚೂರು ಜಿಲ್ಲಾ ಪೊಲೀಸರು ಭೇದಿಸಿದ್ದು, ಸುಮಾರು ₹18.29 ಲಕ್ಷ ನಗದನ್ನು ವಶಕ್ಕೆ ಪಡೆದಿದ್ದಾರೆ.
ಏನಿದು ಪ್ರಕರಣ: ರಾಯಚೂರಿನ ವಿದ್ಯಾನಗರದ ಲಕ್ಷ್ಮೀಕಾಂತ ಹಾಗೂ ಅವನ ಸಹೋದರ ಸಂಬಂಧಿ ಫೇಸ್‌ಬುಕ್‌ನಲ್ಲಿ ಕಾಣಿಸಿಕೊಂಡ “Dread MDFS” ಎಂಬ ಲಿಂಕ್ ಮೂಲಕ ಹಣ ಹೂಡಿಕೆ ಮಾಡಿದರೆ ಲಾಭಾಂಶ ಸಿಗುತ್ತದೆ ಎಂಬ ಜಾಹೀರಾತಿಗೆ ಮರುಳಾಗಿ 2020ರ ಆಗಸ್ಟ್ 7ರಿಂದ 2021ರ ಏಪ್ರಿಲ್ 7ರ ವರೆಗೆ ಹಂತ ಹಂತವಾಗಿ ಒಟ್ಟು ₹58,57,450 ಹೂಡಿಕೆ ಮಾಡಿದರು. ಮೊದಲಿನ ದಿನಗಳಲ್ಲಿ ಲಾಭಾಂಶ ಸಿಗಬಹುದೆಂಬ ನಂಬಿಕೆಯಿಂದ ಹಣ ವರ್ಗಾವಣೆ ಮಾಡಿದ ಇವರಿಗೆ ಅನೇಕ ತಿಂಗಳುಗಳ ಕಾಲ ಯಾವುದೇ ಲಾಭಾಂಶ ಬಾರದಿದ್ದಾಗ ಸಂಶಯ ವ್ಯಕ್ತವಾಗಿ, ತಾವು ಮೋಸಕ್ಕೆ ಒಳಗಾಗಿರುವುದು ಅರಿವಿಗೆ ಬರುತ್ತದೆ.
ಇದರಿಂದ ಆಘಾತಕ್ಕೊಳಗಾದ ಲಕ್ಷ್ಮೀಕಾಂತ ಮತ್ತು ಸಂಬಂಧಿ 2021ರ ಅಕ್ಟೋಬರ್ 10ರಂದು ರಾಯಚೂರಿನ ಸೆನ್ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ. ಐದು ವರ್ಷಗಳ ಕಾಲ ವಿಸ್ತೃತ ತನಿಖೆ ನಡೆಸಿದ ಬಳಿಕ, 2025ರ ಅಕ್ಟೋಬರ್ 10ರಂದು ಆರೋಪಿಗಳ ಪತ್ತೆ ಮಾಡಿ, ವಿವಿಧ ಬ್ಯಾಂಕ್ ಖಾತೆಗಳಲ್ಲಿ ಜಮಾ ಆಗಿದ್ದ ₹18 ಲಕ್ಷವನ್ನು ವಶಪಡಿಸಿಕೊಂಡು ಸಂತ್ರಸ್ತರಿಗೆ ಹಿಂತಿರುಗಿಸಿದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಮಾಧ್ಯಮ ಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಇದನ್ನೂ ಓದಿ: ರಾಯಚೂರು | ಕಾರು-ಬೈಕ್ ಮುಖಾಮುಖಿ: ಬೈಕ್ ಸವಾರ ಸ್ಥಳದಲ್ಲೇ ಸಾವು, ಇನ್ನೋರ್ವ ಗಾಯ
ತನಿಖೆಯಲ್ಲಿ, ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಬತುರುಸ್ಮಾನ್ ಎಂಬಾತ ಕತೆಯ ಮುಖ್ಯ ಸುಳಿವುಧಾರಿಯೆಂದು ತಿಳಿದುಬಂದಿದೆ. ಆತ ತನ್ನ ಸಂಬಂಧಿಕರ ವಿವಿಧ ಬ್ಯಾಂಕ್ ಖಾತೆಗಳನ್ನು ಬಳಸಿಕೊಂಡು ಹಣ ದುರುಪಯೋಗ ಮಾಡಿಕೊಂಡಿದ್ದ. ಆದರೆ ಆತ ಈಗಾಗಲೇ ಮೃತಪಟ್ಟಿರುವುದರಿಂದ, ಆತನ ವಿರುದ್ಧ ಅಬೆಟೆಡ್ ಚಾರ್ಜ್‌ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ಎಸ್‌ಪಿ ಪುಟ್ಟಮಾದಯ್ಯ ಸ್ಪಷ್ಟಪಡಿಸಿದರು.
ಈ ಪ್ರಕರಣದ ತನಿಖೆಯಲ್ಲಿ ಸೈಬರ್ ಕ್ರೈಮ್ ಠಾಣೆಯ ಡಿಐಎಸ್ಪಿ ವೆಂಕಟೇಶ ಹೊಗಿಬಂಡಿ ಹಾಗೂ ಸಹಾಯಕ ತನಿಖಾಧಿಕಾರಿ ರಾಜಪ್ಪ ಮತ್ತು ಅವರ ತಂಡ ಮಹತ್ವದ ಪಾತ್ರವಹಿಸಿದ್ದು, ಅವರ ಸೇವೆಯನ್ನು ಎಸ್‌ಪಿ ಅಭಿನಂದಿಸಿದರು.





