ನಗರದಲ್ಲಿನ ವಿವಿಧ ವಿದ್ಯಾರ್ಥಿ ವಸತಿ ನಿಲಯಗಳು ಅವ್ಯವಸ್ಥೆಯಿಂದ ಕೂಡಿದ್ದು, ವಿದ್ಯಾರ್ಥಿಗಳು ಮೂಲಭೂತ ಸೌಲಭ್ಯಗಳ ಕೊರತೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಛಲವಾದಿ ಮಹಾಸಭಾ ಅಧ್ಯಕ್ಷೆ ಅರ್ಚನಾ ಸುಂಕಾರಿ ಕಳವಳ ವ್ಯಕ್ತಪಡಿಸಿದರು.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸಂಬಂಧಿಸಿದ ಜಿಲ್ಲಾಧಿಕಾರಿಗಳು ಕೂಡಲೇ ವಸತಿ ನಿಲಯಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಬೇಕು ಹಾಗೂ ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳು ಮತ್ತು ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ವೃತ್ತಿ ಆಧಾರಿತ ವಸತಿ ನಿಲಯ ಸೇರಿದಂತೆ ಇತರೆ ವಿದ್ಯಾರ್ಥಿ ವಸತಿ ನಿಲಯಗಳಿಗೆ ಖುದ್ದಾಗಿ ಭೇಟಿ ನೀಡಿದ ಸಂದರ್ಭದಲ್ಲಿ, ವಾರ್ಡನ್‌ಗಳು ಹಾಗೂ ಅಡುಗೆ ಸಿಬ್ಬಂದಿಗಳು ವಿದ್ಯಾರ್ಥಿಗಳಿಗೆ ನೀಡಬೇಕಾದ ಆಹಾರವನ್ನು ಕದ್ದು ಮನೆಗೆ ತೆಗೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ವಸತಿ ನಿಲಯಗಳಲ್ಲಿ ತೀವ್ರ ಅಸ್ವಚ್ಛತೆ ಇರುವದು ಹಾಗೂ ಸರ್ಕಾರದಿಂದ ದೊರೆಯಬೇಕಾದ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ ಎಂದರು.
ಅನೇಕ ವಸತಿ ನಿಲಯಗಳಲ್ಲಿ ಕುಡಿಯುವ ನೀರು, ಶೌಚಾಲಯ ಸೌಲಭ್ಯಗಳು ಸರಿಯಿಲ್ಲ, ವಿದ್ಯಾರ್ಥಿಗಳು ಮೇಲ್ವಿಚಾರಕ ಗಮನಕ್ಕೆ ತಂದರೂ ಯಾರು ಸ್ಪಂದಿಸುತ್ತಿಲ್ಲ. ಕೂಡಲೇ ಪರಿಶೀಲನೆ ನಡೆಸಿ ಸರಿಪಡಿಸಬೇಕು ಹಾಗೂ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಇಲ್ಲದೇ ಹೋದಲ್ಲಿ ವಿದ್ಯಾರ್ಥಿಗಳೊಂದಿಗೆ ಹೋರಾಟ ನಡೆಸುವುದಾಗಿ ಹೇಳಿದರು.
ಈ ಸುದ್ದಿ ಓದಿದ್ದೀರಾ? ಲಿಂಗಸೂಗೂರು | ಮರ್ಯಾದೆಗೇಡು ಹತ್ಯೆ; ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಒತ್ತಾಯ
ಈ ಸಂದರ್ಭದಲ್ಲಿ ಮೀನಾಕ್ಷಿ, ಲಕ್ಷ್ಮೀ ಇದ್ದರು.





