ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಲು ಪ್ರಯತ್ನಿಸಿದ ಪ್ರಕರಣ ಸಂಬಂಧ, ಆರೋಪ ಸಾಬೀತಾದ ಹಿನ್ನಲೆ ಅಪರಾಧಿಗೆ 5 ವರ್ಷ ಸಾದಾ ಕಾರಾಗೃಹ ಶಿಕ್ಷೆ ಹಾಗೂ 65000 ದಂಡ ವಿಧಿಸಿ ಸಿಂಧನೂರಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.
ರಾಯಚೂರು ಜಿಲ್ಲೆ ಲಿಂಗಸೂಗೂರು ಪಟ್ಟಣದ ಶಿವರಾಜ ಗದ್ದೆಪ್ಪ ಶಿಕ್ಷೆಗೊಳಗಾದ ಅಪರಾಧಿ.
ನವೆಂಬರ್ 2021ರಲ್ಲಿ ಶಿವರಾಜ ಪರಿಶಿಷ್ಟ ಜಾತಿಗೆ ಸೇರಿದ ಅಪ್ರಾಪ್ತೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದು, ಅವಳ ಬಟ್ಟೆ ಹಿಡಿದು ಎಳೆದಾಡಿ ಜೀವ ಬೆದರಿಕೆ ಹಾಕಿದ ಆರೋಪದ ಹಿನ್ನಲೆಯಲ್ಲಿ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಲಿಂಗಸೂಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖಾಧಿಕಾರಿ ಡಿವೈಎಸ್ಪಿ ಎಸ್ ಎಸ್ ಹುಲ್ಲೂರು ಅವರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪತ್ರ ಸಲ್ಲಿಸಿದ್ದರು. ಪ್ರಕರಣದ ಕುರಿತು ವಾದ-ವಿವಾದ ಆಲಿಸಿದ ನ್ಯಾಯಾಮೂರ್ತಿ ಬಿ ಬಿ ಜಕಾತಿ ಅವರು ಇಂದು (ಡಿ.9) ಶಿಕ್ಷೆ ಪ್ರಕಟಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಪರಿಸರ ಸಂರಕ್ಷಣೆಗಾಗಿ ಅನಧಿಕೃತ ಕಾರ್ಖಾನೆ ಮುಚ್ಚುವಂತೆ ಒತ್ತಾಯ
ನ್ಯಾಯಾಲಯ ವಿಧಿಸಿದ ₹65,000 ಗಳ ದಂಡವನ್ನು ಸಂತ್ರಸ್ತೆಗೆ ನೀಡುವಂತೆ ಹಾಗೂ ಸರ್ಕಾರದ ಸಂತ್ರಸ್ತರ ಪರಿಹಾರ ನಿಧಿಯಿಂದ ₹2 ಲಕ್ಷ ಪರಿಹಾರವನ್ನು ನೀಡುವಂತೆ ಸೂಚಿಸಲಾಗಿದೆ. ಸರ್ಕಾರಿ ಅಭಿಯೋಜಕ ಮಂಜುನಾಥ ಬೇರಿಗಿ ಸರ್ಕಾರದ ಪರ ವಾದ ಮಂಡಿಸಿದ್ದರು.





