ಕೇಂದ್ರ ಬಿಜೆಪಿ ಸರ್ಕಾರ ರಸಗೊಬ್ಬರ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಅಂಬೇಡ್ಕರ್ ವೃತ್ತದಲ್ಲಿ ಎತ್ತಿನ ಬಂಡಿಯಲ್ಲಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ನಗರದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಯುವ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು ಜಮಾಯಿಸಿ ರಸಗೊಬ್ಬರ ಬೆಲೆ ಏರಿಕೆ ಮಾಡಿರುವುದು ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಹಾಕಿದರು ಹಾಗೂ ಎತ್ತಿನ ಬಂಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಜೆಪಿ ನಡ್ಡಾ ಅವರ ಮುಖವಾಡ ಧರಿಸಿದ ಕಾರ್ಯಕರ್ತರು ಬಾರಕೋಲ್ ಮೂಲಕ ರೈತನಿಗೆ ಹೊಡೆಯುವಂತೆ ಬಿಂಬಿಸಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟಿಸಿದರು.
ಕೇಂದ್ರ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆಯಡಿ ವರ್ಷಕ್ಕೆ 4 ಸಾವಿರ ನೀಡಿ ರಸಗೊಬ್ಬರ, ಔಷಧಿ, ಮತ್ತು ಬಿತ್ತನೆ ಬೀಜಗಳ ಬೆಲೆ ಏರಿಕೆ ಮಾಡಿ ರೈತರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದೆ ಎಂದು ಕಿಡಿಕಾರಿದರು. ಇಫ್ಕೋ 15-15-15 ರಸ ಗೊಬ್ಬರ ಬೆಲೆ ಹಿಂದೆ 1250 ರೂ. ಇದ್ದು, ಇದೀಗ 1650 ರೂ.ಹೆಚ್ಚಳ ಮಾಡಲಾಗಿದೆ. ಆರ್‌ಸಿಎಫ್ ರಸಗೊಬ್ಬರ ಬೆಲೆ 1470 ರಿಂದ 1650 ಕ್ಕೆ ಹೆಚ್ಚಿಸಲಾಗಿದೆ. ಇಫ್ಕೋ ರಸಗೊಬ್ಬರ 1470 ರಿಂದ 1725 ಕ್ಕೆ ಏರಿಕೆ ಮಾಡಿದೆ. ರಸಗೊಬ್ಬರವು 1250 ರಿಂದ 1700 ಕ್ಕೆ ಏರಿಸಿಲಾಗಿದೆ, 20-20-20 ರಸಗೊಬ್ಬರ 1020 ರಿಂದ 1360 ರೂಗೆ ಏರಿಕೆ ಮಾಡಿದೆ. 12-31-16 ಹೆಸರಿನ ರಸಗೊಬ್ಬರ ಬೆಲೆ 1470 ರಿಂದ 1775 ರೂ.ಗೆ ಹೆಚ್ಚಳ ಮಾಡಿದೆ. ಯೂರಿಯಾ ಬೆಲೆ 266 ರಿಂದ 280 ಕ್ಕೆ ಏರಿಕೆ ಮಾಡಿದೆ. ಎಂಓಓ ಪೊಟ್ಯಾಶ್ 1550 ದಿಂದ 1800 ರೂ ಹೆಚ್ಚಳ ಮಾಡಲಾಗಿದೆ ಎಂದು ದೂರಿದರು.
ರೈತರು ಅತಿವೃಷ್ಠಿ ಮತ್ತು ಅನಾವೃಷ್ಠಿಯಿಂದಾಗಿ ಸಂಕಷ್ಟದಲ್ಲಿದ್ದಾರೆ, ಬೆಳೆಹಾನಿ ಸಾಲ ಮಾಡಿದ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದೀಗ ರಸಗೊಬ್ಬರ ಬೆಲೆ ಏರಿಕೆ ಮಾಡಿ ರೈತರನ್ನು ದಿವಾಳಿಯನ್ನಾಗಿ ಮಾಡಲು ಕೇಂದ್ರ ಬಿಜೆಪಿ ಸರ್ಕಾರ ಮುಂದಾಗಿದೆ. ಕೇಂದ್ರ ಸರ್ಕಾರ ಈ ಕೂಡಲೇ ರಸಗೊಬ್ಬರ ಬೆಲೆ ಇಳಿಕೆ ಮಾಡದಿದ್ದರೆ ಬೀದಿಗಿಳಿದು ಹೋರಾಟ ಬೃಹತ್ ಹೋರಾಟ ಮಾಡಲಾಗುವುದು ಮತ್ತು ರಸಗೊಬ್ಬರ ಖಾತೆ ಸಚಿವ ಜೆಪಿ ನಡ್ಡಾ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸೇತುವೆ ಮೇಲೆ ದಂಪತಿಯ ಫೋಟೋಶೂಟ್: ಪತಿಯನ್ನು ನದಿಗೆ ತಳ್ಳಿದ ಆರೋಪ
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಮರಿಸ್ವಾಮಿ ಗಟ್ಟುಬಿಚ್ಚಾಲಿ, ರಾಜ್ಯ ಕಾರ್ಯದರ್ಶಿ ಫೈಸಲ್ ಖಾನ್, ಮಹಮದ್ ಶೈಬಾದ್, ಬಿ.ಮಧು ಕುಮಾರ, ಕಿಶೋರ, ರಷೀದ್, ಮಹಮದ್ ಅಜ್ಜು, ಎಂಡಿ ರಫಿ, ಅಬ್ದುಲ್ ಗೌಸ್, ಪ್ರತಾಪ್ ರೆಡ್ಡಿ, ಸೇರಿದಂತೆ ಅನೇಕರು ಇದ್ದರು.





