ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಬದ್ವಿನ್ನಿ ಎಸ್ ಗ್ರಾಮದಿಂದ ಹೂವಿನಭಾವಿಗೆ ತೆರಳುತ್ತಿದ್ದ ವಿದ್ಯಾರ್ಥಿಗಳನ್ನು ಗ್ರಾಮದಲ್ಲಿ ಇಳಿಸದೆ, ಮಸ್ಕಿಗೆ ಕರೆದೊಯ್ದ ಈಶಾನ್ಯ ಸಾರಿಗೆ ಬಸ್‌ನ ಚಾಲಕ-ನಿರ್ವಾಹನ ವಿರುದ್ಧ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ದಿನನಿತ್ಯ ಹೂವಿನಭಾವಿ ಗ್ರಾಮದ ವಿದ್ಯಾರ್ಥಿಗಳು ಬದ್ವಿನ್ನಿ ಗ್ರಾಮದಲ್ಲಿರುವ ಶಾಲೆಗೆ ತೆರಳುತ್ತಾರೆ. ಬುಧವಾರ ಶಾಲೆ ಮುಗಿದ ಬಳಿಕ ವಿದ್ಯಾರ್ಥಿಗಳು ಹೂವಿನಭಾವಿ ಮರಳಲು ಬಸ್ ಹತ್ತಿದ್ದಾರೆ. ಆದರೆ, ಹೂವಿನಭಾವಿ ತೆರಳಲು ನಿರಾಕರಿಸಿದ ಬಸ್ ಚಾಲಕ-ನಿರ್ವಾಹಕರು ಗ್ರಾಮದ ಗೇಟ್ ಬಳಿಯೇ ಇಳಿಸುತ್ತೇವೆ. ನಡೆದುಕೊಂಡು ಗ್ರಾಮಕ್ಕೆ ಹೋಗಿಯೆಂದು ವಿದ್ಯಾರ್ಥಿಗಳಿಗೆ ಹೇಳಿದ್ದಾರೆ. ಇದನ್ನು ಒಪ್ಪದ ವಿದ್ಯಾರ್ಥಿಗಳನ್ನು ಚಾಲಕ-ನಿರ್ವಾಹಕ ಮಸ್ಕಿಗೆ ಕರೆದೊಯ್ದಿದ್ದಾರೆ ಎಂದು ಆರೋಪಿಸಲಾಗಿದೆ.
ವಿದ್ಯಾರ್ಥಿಗಳನ್ನು ಮಸ್ಕಿ ಕರೆದೊಯ್ದಿರುವ ಬಗ್ಗೆ ತಿಳಿದ ಪೋಷಕರು ಮತ್ತು ಹೋರಾಟಗಾರರು ಮಸ್ಕಿ ಬಸ್ ನಿಲ್ದಾಣಕ್ಕೆ ತೆರಳಿ ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಮಸ್ಕಿ ಘಟಕದ ವ್ಯವಸ್ಥಾಪಕ ತೆರಳಿ, ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಕ್ಷಮೆಯಾಚಿಸಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುತ್ತೇವೆ. ಚಾಲಕ-ನಿರ್ವಹಕರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.




