ಜಾತಿ ಜನಗಣತಿ ಸಮೀಕ್ಷಾ ಕಾರ್ಯ ಮುಗಿದಿದೆ, ಮುಂದಿನ ಒಂದು ತಿಂಗಳಲ್ಲಿ ಜನಗಣತಿ ಬಿಡುಗಡೆಗೊಳಿಸಿ ನಂತರ ಸಚಿವ ಸಂಪುಟದ ಸಭೆ ಕರೆದು ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಜಿಲ್ಲೆಯ ದೇವದುರ್ಗ ತಾಲ್ಲೂಕಿನ ತಿಂಥಣಿ ಬ್ರಿಜ್‌ನ ಶ್ರೀಕಾಗಿನೆಲೆ ಮಹಾಸಂಸ್ಥಾನದ ಕನಕ ಗುರುಪೀಠದಲ್ಲಿ ನಡೆದ ಸಿದ್ದರಾಮಾನಂದ ಸ್ವಾಮೀಜಿ ಅವರ ಪುಣ್ಯಾರಾಧನೆ ಹಾಗೂ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಎಲ್ಲಾ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಸಿಗಬೇಕು ಎಂಬ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಜಾತಿ ಜನಗಣತಿಯ ಮೂಲಕ ಈ ಕಾರ್ಯ ಮತ್ತಷ್ಟು ಯಶಸ್ವಿಯಾಗಿ ನಡೆಯಲಿದೆ ಎಂದರು. ಕುರುಬ ಸಮಾಜಕ್ಕೆ ಎಸ್ ಟಿ ಮೀಸಲಾತಿ ನೀಡಬೇಕು ಎಂದು ಬೇಡಿಕೆಗೆ ಬ್ರಹ್ಮಲೀನರಾದ ಸಿದ್ದರಾಮಾನಂದ ಸ್ವಾಮೀಜಿ ಅವರು ಹೋರಾಟ ಮಾಡಿದ್ದರು, ಎಸ್ ಟಿ ಪಟ್ಟಿಗೆ ಸೇರಿಸುವುದು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ನನ್ನ ಕೈಯಲ್ಲಿ ಇದ್ದರೆ ನಾನು ಮಾಡುತ್ತಿದ್ದೆ ಎಂದು ಹೇಳಿದರು.
ಬೀದರ್, ಯಾದಗಿರಿ, ಕಲಬುರಗಿ ಜಿಲ್ಲೆಗಳ ಸಮುದಾಯದ ಬಗ್ಗೆ ಅಧ್ಯಯನ ಮಾಡಿಸಿ ನಾನು ಎಸ್ ಟಿ ಪಟ್ಟಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಮಾಹಿತಿ ಕೊರತೆಯಿಂದ ವಾಪಸ್ ಕಳಿಸಿದ್ದಾರೆ ಮತ್ತಷ್ಟು ಜಿಲ್ಲೆಗಳ ಜೊತೆ ಎರಡನೇ ಬಾರಿಗೆ ಶಿಫಾರಸು ಸಲ್ಲಿಸುವುದರ ಜೊತೆಗೆ ಶೋಷಿತರ ಸಮುದಾಯದ ಪರವಾಗಿ ಕೆಲಸ ಮಾಡಲು ಬದ್ಧವಾಗಿದ್ದೇವೆ ಎಂದು ತಿಳಿಸಿದರು.
ಕನಕಗುರುಪೀಠ ಜಾತ್ಯಾತೀತ ಮಠ ಕಾಗಿನೆಲೆ ಗುರುಪೀಠ 1992 ಫೆ 22 ರಂದು ಪ್ರಾರಂಭಿಸಲಾಯಿತು. ತುಳಿತಕ್ಕೆ ಒಳಗಾದ ಸಮುದಾದವರ ಮಠ ಇರಲಿಲ್ಲ, ಹೀಗಾಗಿ ಎಲ್ಲಾ ಸಮುದಾಯಕ್ಕಾಗಿ ಜಾತ್ಯಾತೀತ ಮಾಡಬೇಕು ಎಂಬ ಉದ್ದೇಶದಿಂದ ಕಾಗಿನೆಲೆ ಕನಕ ಗುರುಪೀಠ ಮಾಡಲಾಗಿದೆ. ಬಸವಣ್ಣನವರ, ಕನಕದಾಸರ ವಿಚಾರಧಾರೆಗಳಿಂದ ಎಲ್ಲರಿಗೂ ಸಮಾನತೆ ನೀಡಲು ಮಠ ಸ್ಥಾಪನೆ ಮಾಡಲಾಗಿದೆ ಎಂದರು.
ಕನಕದಾಸರ ಹಾಗೂ ಬಸವಣ್ಣನವರ ವಿಚಾರ ಒಂದಾಗಿತ್ತು. ಮಾನವರೆಲ್ಲರೂ ಸಮಾನರು, ಜಾತಿಗಳ ಹೆಸರಿನಲ್ಲಿ ದ್ವೇಷ ಬಿತ್ತಬಾರದು ಎಂದು ಜಾಗೃತಿ ಮೂಡಿಸಿದವರು. ಕನಕಗುರುಪೀಠದ ಸ್ವಾಮೀಜಿ ಸಿದ್ದರಾಮಾನಂದ ಅವರು ಸಮ ಸಮಾಜಕ್ಕಾಗಿ ಅಸಮಾನತೆ, ಜಾತಿ ವ್ಯವಸ್ಥೆ ನಿವಾರಣೆ, ವಿವಿಧ ಸಂಸ್ಕೃತಿಗಳ ಏಕತೆ ಕಾಪಾಡಲು ಪ್ರಯತ್ನ ಮಾಡಿದ್ದರು. ಶಿಕ್ಷಣದಿಂದ ವಂಚಿತರಾದವರು ದೂರ ಉಳಿದರೆ ಸಮಾಜ ಅಭಿವೃದ್ಧಿ ಆಗಲ್ಲ. ನಾವೆಲ್ಲರೂ ಮಾನವರಾಗಿ ಬದುಕುವ ವ್ಯವಸ್ಥೆ ಹಾಗೂ ಆಧ್ಯಾತ್ಮಿಕ ಚಿಂತನೆ ಮೂಡಿಸುವುದು ಮಠದ ಜವಾಬ್ದಾರಿ. ಎಲ್ಲಾ ಧರ್ಮಗಳು ಪರಸ್ಪರ ಪ್ರೀತಿಸಲು ಹೇಳುತ್ತೆ, ಯಾವುದೇ ಧರ್ಮ ಮತ್ತೊಬ್ಬರನ್ನು ದ್ವೇಷಿಸಲು ಹೇಳಲ್ಲ, ಎಲ್ಲರೂ ಶಿಕ್ಷಣವಂತರಾಗಬೇಕು, ಕೇವಲ ಶಿಕ್ಷಣ ಪಡೆಯದೇ ಸಾಲದು ವೈಚಾರಿಕತೆ, ವೈಜ್ಞಾನಿಕ ವಿಚಾರ ಬೆಳೆಸಿಕೊಂಡಾಗ ಸಾರ್ಥಕವಾಗುತ್ತದೆ. ಗುಲಾಮ ಮನಸ್ಥಿತಿಯಿಂದ ಹೊರ ಬಂದು ಸ್ವಾಭಿಮಾನದಿಂದ ಬದುಕಬೇಕು ಎಂದು ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ದೇವದುರ್ಗ | 40 ಕಿಮೀ ಅಂತರದಲ್ಲಿ ಎರಡು ಟೋಲ್ ಗೇಟ್: ಅವೈಜ್ಞಾನಿಕವೇ? ರಾಜಕೀಯವೇ?
ಸಿದ್ದರಾಮಾನಂದ ಸ್ವಾಮೀಜಿ ದೈವದೀನರಾದಾಗ ಬರಬೇಕಿತ್ತು. ಅನಾರೋಗ್ಯ ಕಾರಣಕ್ಕೆ ಬರಲಿಲ್ಲ ಹೀಗಾಗಿ, ಸಚಿವ ಭೈರತಿ ಸುರೇಶ್ ಅವರಿಗೆ ಕಳುಹಿಸಿ ಸ್ವಾಮೀಜಿ ಅವರಿಗೆ ಸರ್ಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರ ಮಾಡಿಸಿದ್ದೇನೆ. ಅವರ ಆತ್ಮಕ್ಕೆ ಚಿರ ಶಾಂತಿಗೆ ಪ್ರಾರ್ಥಿಸುತ್ತೇನೆ ಎಂದರು.





