ಚುನಾವಣೆ ಮುಂಚೆ ನೂರಾರು ಭರವಸೆ ನೀಡಿ ಅಧಿಕಾರವನ್ನು ಗಿಟ್ಟಿಸಿಕೊಂಡು ಭರವಸೆಗಳನ್ನು ಹುಸಿಗೊಳಿಸಿದ ರಾಜ್ಯ ಕಾಂಗ್ರೆಸ್ ಸರ್ಕಾರ ರೈತರಿಗೆ ಮತ್ತು ರಾಜ್ಯದ ಜನರಿಗೆ ಮೋಸಗೊಳಿಸುವ ಮೂಲಕ ಖಾಲಿ ಚಂಬು ನೀಡುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ನಗರ ಶಾಸಕ ಡಾ.ಶಿವರಾಜ ಪಾಟೀಲ್ ಹೇಳಿದರು.
ನಗರದ ಟಿಪ್ಪು ಸುಲ್ತಾನ ಉದ್ಯಾನವನದಲ್ಲಿ ಹಮ್ಮಿಕೊಂಡಿದ್ದ ರೈತಪರ ಬೇಡಿಕೆ ಈಡೇರಿಕೆಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಚುನಾವಣೆ ಪೂರ್ವ ಸಾಕಷ್ಟು ಭರವಸೆಗಳನ್ನು ರಾಜ್ಯದ ಜನರಿಗೆ ನೀಡಿ ಅವುಗಳನ್ನು ಈಡೇರಿಸದೇ, ಜೊತೆಗೆ ಕೇಂದ್ರ ಸರ್ಕಾರದ ಭರವಸೆಗಳನ್ನೂ ಕೂಡ ರಾಜ್ಯಕ್ಕೆ ಬಾರದಂತೆ ಕಡಿತಗೊಳಿಸುವ ಮೂಲಕ ರಾಜ್ಯದ ಜನರಿಗೆ ಕಾಂಗ್ರೆಸ್ ರಾಜ್ಯ ಸರ್ಕಾರ ಮೋಸ ಮಾಡಿದೆ ಎಂದು ಹೇಳಿದರು.
ಈ ಮೊದಲು ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದ ರೈತರಿಗೆ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ 6 ಸಾವಿರ ಹಾಗೂ ರಾಜ್ಯ ಸರ್ಕಾರದಿಂದ 4 ಸಾವಿರ ರೂ.ಗಳನ್ನು ನೀಡಲಾಗುತ್ತಿತ್ತು. ಜೊತೆಗೆ ರೈತರ ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ವಿದ್ಯಾನಿಧಿ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಈ ಎಲ್ಲಾ ಯೋಜನೆಗಳನ್ನು ಕಡಿತಗೊಳಿಸಿ, ಜನರಿಗೆ ಖಾಲಿ ಚಂಬು ನೀಡಿರುವ ಕಾಂಗ್ರೆಸ್ ರಾಜ್ಯ ಸರ್ಕಾರದ ನಡೆ ಖಂಡನೀಯವಾಗಿದೆ ಎಂದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ಈ ನಡೆಯನ್ನು ಖಂಡಿಸಿ ಮುಂದಿನ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಪ್ರತಿಭಟನೆ ನಡೆಸಲಾಗುವುದು. ರಾಜ್ಯ ಸರ್ಕಾರದಿಂದ ಟಿಬಿ ಡ್ಯಾಂ ಗೇಟ್ ಅಳವಡಿಕೆ ಮಾಡಲು ಆಗುತ್ತಿಲ್ಲ, ಗೇಟ್ ಅಳವಡಿಸುವ ಗುತ್ತಿಗೆದಾರರಿಗೆ ಹಣ ನೀಡಲು ಸಹ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಆಗುತ್ತಿಲ್ಲ, ಸ್ವಾತಂತ್ರ್ಯ ಬಂದು 70 ವರ್ಷಗಳಾಗಿದ್ದು, ರಾಜ್ಯದ ಜನರಿಗೆ ಅನ್ಯಾಯ ಮಾಡಿದ ಸರ್ಕಾರ, ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಮಾಜಿ ವಿಧಾನ ಪರಿಷತ್ ಸದಸ್ಯ ಎನ್.ಶಂಕ್ರಪ್ಪ ಮಾತನಾಡಿ, ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ರೈತರಿಗೆ ಇರುವ ಸೌಲಭ್ಯಗಳನ್ನು ಕಿತ್ತುಕೊಳ್ಳಲು ಕಾಂಗ್ರೆಸ್ ರಾಜ್ಯ ಸರ್ಕಾರ ಮುಂದಾಗಿದ್ದು, ರೈತರ ಉತ್ಪನ್ನಗಳನ್ನು ಖರೀದಿಸಲು ಖರೀದಿ ಕೇಂದ್ರಗಳನ್ನು ಸ್ಥಾಪಿಸದೇ ರೈತರಿಗೆ ಮೋಸ ಮಾಡಲಾಗುತ್ತಿದೆ, ಸರ್ಕಾರದಿಂದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಹತ್ತಿ ಖರೀದಿ ಮಾಡದೇ ಇರುವುದರಿಂದ ರೈತರು ಎರಡ್ಮೂರು ದಿನಗಳವರೆಗೆ ಖಾಸಗಿ ಕಂಪನಿಗಳ ಮುಂದೆ ಸಾಲು ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಹಟ್ಟಿಯಲ್ಲಿ ಮಟಕಾ,ಗಾಂಜಾ ದಂಧೆ; ರಾಜ್ಯ ಮಹಿಳಾ ಆಯೋಗಕ್ಕೆ ದೂರು
ಈ ಸಂದರ್ಭದಲ್ಲಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಶಂಕರ್ ರೆಡ್ಡಿ, ಸಂತೋಷ ರಾಜಗುರು ಜಿಲ್ಲಾ, ಕೆ.ಕರಿಯಪ್ಪ ಸಿಂಧನೂರು, ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಸಿದ್ದನಗೌಡ ನೆಲಹಾಳ್, ಮಂಡಲ ಅಧ್ಯಕ್ಷರುಗಳಾದ ಮಹಾಂತೇಶ್ ಮುಕ್ತಿ, ರಾಘವೇಂದ್ರ ಊಟ್ಕೂರ್, ಶರಣಬಸವ ಜೋಳದಹೆಗಡೆ, ಯಂಕೋಬ ನಾಯಕ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ವಿನಾಯಕ್ ರಾವ್, ರಾಮಚಂದ್ರ ಕಡಗೋಲ, ವಿಜಯಕುಮಾರ್ ಸಜ್ಜನ್, ಸುಲೋಚನಾ ಬಸವರಾಜ್, ಸುಮಾ ಗಸ್ತಿ, ಹಾಗೂ ರೈತ ಮೋರ್ಚಾ ಜಿಲ್ಲಾ ಹಾಗೂ ಮಂಡಲ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.





